Arvind Kejriwal | ಉತ್ತರ ಭಾರತದಲ್ಲಿ ಪ್ರವಾಹ; ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಮಾಜಿ ಸಿಎಂ ಕೇಜ್ರಿವಾಲ್​​!

Arvind Kejriwal
Published on

Arvind Kejriwal: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ(ಸೆಪ್ಟೆಂಬರ್​​ 5) ರಾಷ್ಟ್ರ ರಾಜಧಾನಿ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೇಜ್ರಿವಾಲ್, ಪ್ರವಾಹ ಮತ್ತು ನೀರಿನ ಅಡಚಣೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಚಾರಿಸಲು ಇಲ್ಲಿಗೆ ಬಂದಿದ್ದೇನೆ, ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿಲ್ಲ ಮತ್ತು ಸೊಳ್ಳೆಗಳ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ನಿರಂತರ ಮಳೆಯಾಗುತ್ತಿದ್ದರು ನಿನ್ನೆಯಷ್ಟೇ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

ಇಂತಹ ಸಮಯದಲ್ಲಿ ಸರ್ಕಾರ ದೆಹಲಿಯ ಜನರಿಗೆ ನೆರವಾಗುವುದು ಮೊದಲ ಆದ್ಯತೆಯಾಗಿದ್ದು, ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಒತ್ತಾಯಿಸಿದರು. ನಗರದ ಹಲವಾರು ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಹೂಳು ತೆಗೆಯದಿರುವುದರಿಂದಲೇ ಒಳಚರಂಡಿಗಳ ಹಿಮ್ಮುಖ ಹರಿವನ್ನು ಎದುರಿಸುತ್ತಿವೆ ಎಂದ ಕೇಜ್ರಿವಾಲ್​​, ಇದು ನೈಸರ್ಗಿಕ ವಿಕೋಪವೇ ಇರಬಹುದು ಆದರೆ ಅದಕ್ಕೆ ತಕ್ಕಂತೆ ಎಲ್ಲ ರೀತಿ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಭೂಕಂಪ ಸಂಭವಿಸಿದ ಅಫ್ಘಾನಿಸ್ತಾನಕ್ಕೆ ಕೇಂದ್ರ ಸರ್ಕಾರ ನೆರವು ನೀಡಿದ್ದು ಒಳ್ಳೆಯ ಬೆಳವಣಿಗೆ ಅದೇ ರೀತಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ದೆಹಲಿ ಮತ್ತು ಉತ್ತರಾಖಂಡ ಪ್ರವಾಹದಲ್ಲಿ ತತ್ತರಿಸಿವೆ. ಆದ್ದರಿಂದ ಇಲ್ಲಿನ ಸಂತ್ರಸ್ತರಿಗೂ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net