

ನವದೆಹಲಿ: ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಅವರ ದೂರಿನ ಆಧಾರದ ಮೇಲೆ ಆಮ್ ಆದ್ಮಿ ಪಕ್ಷ(AAP) ಘೋಷಿಸಿರುವ ಯೋಜನೆಗಳ ಬಗ್ಗೆ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ ನಂತರ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಎರಡು ಪಕ್ಷಗಳು ಮಹಿಳೆಯರು ಮತ್ತು ವೃದ್ಧರಿಗಾಗಿ ನಮ್ಮ ಪಕ್ಷ ಘೋಷಿಸಿರುವ ಯೋಜನೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಬಿಜೆಪಿಗೆ ನೇರವಾಗಿ ಕಾರ್ಯನಿರ್ವಹಿಸಲು ಧೈರ್ಯವಿಲ್ಲ. ಬದಲಿಗೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ದೂರು ದಾಖಲಿಸುವಂತೆ ಮಾಡಿದೆ. ಎಎಪಿಯನ್ನು ತಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಂತರ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2,100 ರೂಪಾಯಿ, ಸಂಜೀವನಿ ಯೋಜನೆಯಡಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದೆ. ಈ ಎರಡೂ ಯೋಜನೆಗಳು ಸಾರ್ವಜನಿಕರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಈಗಾಗಲೇ ಲಕ್ಷಾಂತರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಆತಂಕಕ್ಕೆ ಒಳಗಾಗಿದೆ ಎಂದು ಹೇಳಿದರು.
ಗೆಲುವನ್ನು ಮರೆತುಬಿಡಿ ಎಂದು ಹಲವು ಬಿಜೆಪಿ ನಾಯಕರು ನನಗೆ ಹೇಳಿದರು. ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿಯ ಠೇವಣಿ ಕಳೆದುಕೊಳ್ಳುತ್ತದೆ. ಎಎಪಿಯ ಯೋಜನೆಗಳ ನೋಂದಣಿ ಶಿಬಿರಗಳ ಯಶಸ್ಸಿನ ನಂತರ ಬಿಜೆಪಿ ಬೆದರಿಕೆ ತಂತ್ರಗಳನ್ನು ಬಳಸುತ್ತಿದೆ. ಬಿಜೆಪಿಯು ಕೊಲೆಗಡುಕರನ್ನು ಕಳುಹಿಸಿದೆ ಮತ್ತು ಈ ಶಿಬಿರಗಳನ್ನು ಕೆಡವಲು ಪೊಲೀಸರನ್ನು ಸಹ ಬಳಸಿದೆ ಎಂದು ಆರೋಪಿಸಿದರು. ಪ್ರಾಥಮಿಕವಾಗಿ ಬಿಜೆಪಿಯು ಪ್ರಾರಂಭಿಸಿರುವ ರಾಜಕೀಯ ಪ್ರೇರಿತ ತನಿಖೆಗೆ ಆದೇಶ ನೀಡಲಾಗಿದೆ. ಏನು ತನಿಖೆ ನಡೆಯಲಿದೆ? ನಾವು ಸ್ಪಷ್ಟ ಚುನಾವಣಾ ಭರವಸೆ ನೀಡಿದ್ದೇವೆ. ನಾವು ಗೆದ್ದರೆ ಈ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದಿದ್ದಾರೆ.
ಮಹಿಳಾ ಸಮ್ಮಾನ್ ಯೋಜನೆಯಡಿ ಯಾವ ಆಧಾರದ ಮೇಲೆ ನೋಂದಣಿ ಮಾಡಲಾಗುತ್ತಿದೆ ಎಂಬುದನ್ನು ದೆಹಲಿಯ ವಿಭಾಗೀಯ ಆಯುಕ್ತರು ತನಿಖೆ ನಡೆಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಯೋಜನೆಗೆ ಸಂಬಂಧಿಸಿದಂತೆ ಜಾಹೀರಾತನ್ನು ನೀಡಿತ್ತು, ಅದರಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ನೀಡಿರುವ ಮಾಹಿತಿಯು ತಪ್ಪುದಾರಿಗೆಳೆಯುವಂತಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)