

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಟ್ರಂಪ್ ಇಬ್ಬರೂ ಕರೊನಾ ಸೋಂಕಿತರಾಗಿರುವುದು ಗೊತ್ತಿರುವಂಥದ್ದೇ. ಇದೀಗ ಅವರಿಬ್ಬರಿಗೂ ಬೇಗ ಗುಣವಾಗಿ ಮರಳಿ ಎಂದು ಮರಳಿನಿಂದಲೇ ಕಲಾವಿದರೊಬ್ಬರು ಹಾರೈಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಮರಳು ಚಿತ್ರ ಕಲಾವಿದ (ಸ್ಯಾಂಡ್ ಆರ್ಟ್) ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಡೊನಾಲ್ಡ್ ದಂಪತಿಯ ಕಲಾಕೃತಿ ರಚಿಸಿ, ಅದರ ಮೇಲೆ 'ಗೆಟ್ ವೆಲ್ ಸೂನ್' ಎಂಬುದಾಗಿ ಹಾರೈಸಿದ್ದಾರೆ. ಒಡಿಶಾದ ಪುರಿ ಕಡಲತೀರದಲ್ಲಿ ಅವರು ರಚಿಸಿರುವ ಈ ಕಲಾಕೃತಿ ಹಲವರ ಗಮನ ಸೆಳೆದಿದೆ.
ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟ ಹಿನ್ನೆಲೆಯಲ್ಲಿ ಡೊನಾಲ್ಡ್ ಅವರು ವಾಷಿಂಗ್ಟನ್ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದರ್ಶನ್ ಪಟ್ನಾಯಕ್ ಹೀಗೆ ಆಗಾಗ ಮರಳು ಕಲೆ ಮೂಲಕ ಗಮನ ಸೆಳೆಯುತ್ತಿರುತ್ತಾರೆ.