ಕೃತಕ ಬುದ್ದಿಮತ್ತೆ ಜ್ಞಾನಾರ್ಜನೆಗೆ ಪೂರಕ

nes
ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಂದಾದೇವಿ ಭೂಪಾಳಂ ಸ್ಮಾರಕ ಡಿಜಿಟಲ್ ಗ್ರಂಥಾಲಯವನ್ನು ಭೂಪಾಳಂ ಪ್ರಭಾಕರ್ ಉದ್ಘಾಟಿಸಿದರು. ಜಿ.ಎಸ್.ನಾರಾಯಣ ರಾವ್, ಎಸ್.ಎನ್.ನಾಗರಾಜ, ಟಿ.ಆರ್.ಅಶ್ವತ್ಥನಾರಾಯ ಶ್ರೇಷ್ಠಿ, ಭೂಪಾಳಂ ಸತ್ಯನಾರಾಯಣ ಇತರರಿದ್ದರು.
Published on

ಶಿವಮೊಗ್ಗ: ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನಗಳ ಮೂಲಕ ಗ್ರಂಥಾಲಯವನ್ನು ವಿಶಿಷ್ಟವಾಗಿ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ಎಐ ತಂತ್ರಜ್ಞಾನದ ಪರಿಕಲ್ಪನೆಯೇ ಒಂದು ಅದ್ಭುತ. ಕ್ಲೌಡ್ ಕಂಪ್ಯೂಟಿಂಗ್ ಮೂಲಕ ತಕ್ಷಣವೇ ಮಾಹಿತಿ ಪಡೆಯಬಹುದು ಎಂದು ಹಿರಿಯ ವಕೀಲ ಭೂಪಾಳಂ ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಂದಾದೇವಿ ಭೂಪಾಳಂ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗ್ಗೆ ಪ್ರಕಟಗೊಂಡ ನ್ಯಾಯಾಲಯದ ತೀರ್ಪುಗಳನ್ನು ಸಂಜೆ ವೇಳೆಗೆ ಅಧ್ಯಯನ ಮಾಡುವ ಅವಕಾಶ ವಕೀಲರಿಗೆ ಸಿಗುತ್ತದೆ. ಇದಕ್ಕೆ ಕಾರಣ ಎಐ ಮತ್ತು ಕ್ಲೌಡ್ ಕಂಪ್ಯೂಟಿಂಗ್. ಅಂತಹ ಮಾಹಿತಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಅಮೆರಿಕದ ಚಿಕಾಗೊದಲ್ಲಿ ನೆಲೆಸಿರುವ ವೈದ್ಯೆ ನಿರ್ಮಲಾ ಭೂಪಾಳಂ ತನ್ನ ಸಹೋದರಿ ನಂದಾದೇವಿ ಅವರ ಹೆಸರಿನಲ್ಲಿ ಈ ನೂತನ ಗ್ರಂಥಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ಅತಿ ಮುಖ್ಯ. ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶ್ರೇಷ್ಠಿ ಮಾತನಾಡಿ, ಮಹಾರಾಜರ ಆಡಳಿತದಲ್ಲಿ ಪ್ರಜಾಪ್ರತಿನಿಧಿಯಾಗಿದ್ದ ಭೂಪಾಳಂ ಚಂದ್ರಶೇಖರಯ್ಯ ಶಿವಮೊಗ್ಗ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದ ಬಹುತೇಕ ಮಂದಿ ಎನ್‌ಇಎಸ್ ಸಂಸ್ಥೆಯ ವಿದ್ಯಾರ್ಥಿಗಳು. ಭೂಪಾಳಂ ಕುಟುಂಬ ನೀಡಿದ 5 ಲಕ್ಷ ರೂ. ದೇಣಿಗೆಗೆ ಎನ್‌ಇಎಸ್ ಸಂಸ್ಥೆ ಕೈ ಜೋಡಿಸಿ ಚಂದ್ರಶೇಖರಯ್ಯ ಅವರ ಮಗಳು ನಂದಾದೇವಿ ಹೆಸರಿನಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದೆ ಎಂದು ತಿಳಿಸಿದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸ್ಥಾಪಕರ ಧ್ಯೇಯೊದ್ದೇಶಗಳನ್ನು ಇಂದಿಗೂ ಎನ್‌ಇಎಸ್ ಮುಂದುವರಿಸಿಕೊಂಡು ಬಂದಿದೆ. ನಾವು ಬೆಳೆದ ನೆಲಕ್ಕೆ, ಕಲಿತ ವಿದ್ಯಾಸಂಸ್ಥೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾಳಜಿ ಅಪರೂಪವಾದುದು ಎಂದು ಹೇಳಿದರು.

ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ವಿದ್ಯಾಸಂಸ್ಥೆ ಎಂಬ ದೇವಾಲಯಕ್ಕೆ ಗ್ರಂಥಾಲಯ ಎಂಬುದು ಗರ್ಭಗುಡಿ. ಅಂತಹ ಗರ್ಭಗುಡಿಯಲ್ಲಿ ಕಲಿತು ಯಶಸ್ಸಿನ ಹಾದಿಯೆಡೆಗೆ ನಡೆಯಬೇಕು. ಅಧ್ಯಯನ ನಮ್ಮಲ್ಲಿ ಸೌಜನ್ಯ, ಸಂಸ್ಕಾರ, ಮಾನವೀಯ ಸಂಬಂಧಗಳ ವೃದ್ಧಿಗೆ ಕಾರಣವಾಗುತ್ತದೆ ಎಂದರು.

ಎನ್‌ಇಎಸ್ ಖಜಾಂಚಿ ಡಿ.ಜಿ.ರಮೇಶ್, ಪ್ರಮುಖರಾದ ಭೂಪಾಳಂ ಸತ್ಯನಾರಾಯಣ, ವಿಶ್ವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net