ನೈಸರ್ಗಿಕ ಪರಂಪರೆಯ ಚಿಹ್ನೆ ಈ ಹುಲಿ; ಇಂದು ವಿಶ್ವ ಹುಲಿ ದಿನ..

World tiger day
Published on
ಹುಲಿಗಳ ದೇಶ ಭಾರತ. ಏಕೆಂದರೆ ಒಟ್ಟಾರೆ ಜಗತ್ತಿನ ಶೇ. 75ಕ್ಕಿಂತ ಅಧಿಕ ಹುಲಿಗಳು ಭಾರತದಲ್ಲೇ ಇವೆ. ದೇಶದಲ್ಲಿ ಈ ವ್ಯಾಘ್ರಗಳ ಸಂಖ್ಯೆ 3167. ಕಳೆದ ನಾಲ್ಕು ವರ್ಷಗಳಲ್ಲಿ ಇವುಗಳ ಸಂಖ್ಯೆಯಲ್ಲಿ 200 ಹೆಚ್ಚಳವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

| ಸಂಜಯ್ ಗುಬ್ಬಿ, ವನ್ಯಜೀವಿ ವಿಜ್ಞಾನಿ

ಹುಲಿಯ ಹಾಗೆ ನಮ್ಮ ಆಸಕ್ತಿ, ಗೌರವ ಮತ್ತು ಭಾವಾವೇಶವನ್ನು ಕೆರಳಿಸುವ ಶಕ್ತಿಯನ್ನು ಪ್ರಪಂಚದ ಕೆಲವೇ ಕೆಲವು ವನ್ಯಜೀವಿ ಪ್ರಭೇದಗಳು ಹೊಂದಿವೆ. ಜೇನುತುಪ್ಪ ಬಣ್ಣದ ಸುಂದರ ಕಣ್ಣುಗಳನ್ನು ಹೊಂದಿರುವ ಈ ಮಾರ್ಜಾಲ, ನಮ್ಮ ಸಾಂಸ್ಕೃತಿಕ ಹಾಗೂ ಧಾರ್ವಿುಕ ಪರಂಪರೆಯಷ್ಟೇ ನಮ್ಮ ನೈಸರ್ಗಿಕ ಪರಂಪರೆಯ ಚಿಹ್ನೆಯಾಗಿದೆ. ಹಿಂದು ಧರ್ಮದಲ್ಲಿ ಮಲೆಮಹದೇಶ್ವರ, ಕಾಳಿ, ಅಯ್ಯಪ್ಪರಿಗೆ ಹುಲಿಯೇ ವಾಹನ. ನಮ್ಮ ರಾಜ್ಯದಲ್ಲಿ ಪ್ರಚಲಿತವಾಗಿರುವ ಹುಲಿವೇಷವಂತೂ ಮನೆ ಮಾತು. ಇಂದಿಗೂ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿದೇವರ ದೇವಸ್ಥಾನಗಳಿವೆ. ವಾಣಿಜ್ಯ ಸಂಸ್ಥೆಗಳು ಕೂಡ ಹುಲಿಯನ್ನು ತಮ್ಮ ಲಾಂಛನವನ್ನಾಗಿ ಮಾಡಿಕೊಂಡಿವೆ. ಇತ್ತೀಚಿಗೆ ಪ್ರಚಲಿತವಾಗಿರುವ ಜೋಳದ ಹರಳು (ಕಾರ್ನ್​ಫ್ಲೆಕ್ಸ್), ನೋವು ನಿವಾರಕ ಔಷಧ, ಬಿಸ್ಕತ್ ಹಾಗೂ ಇನ್ನಿತರ ಹಲವಾರು ತಯಾರಕರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಹುಲಿಯನ್ನು ತಮ್ಮ ಹೆಮ್ಮೆಯ ಚಿಹ್ನೆಯನ್ನಾಗಿ ಬಳಸಿಕೊಳ್ಳುತ್ತಿವೆ. ರುಡ್​ಯಾರ್ಡ್ ಕಿಪ್ಲಿಂಗರ ‘ಜಂಗಲ್ ಬುಕ್’ನ ಶೇರ್​ಖಾನ್ ಖಳನಾಯಕನಾದರೂ ಪ್ರಪಂಚದಾದ್ಯಂತ ಮಕ್ಕಳಿಗೆ (ಕೆಲವು ವಯಸ್ಕರಿಗೂ ಸೇರಿ) ಅಚ್ಚುಮೆಚ್ಚು. ಅದ್ಯಾಕೋ ಯಾವ ಐಪಿಎಲ್ ತಂಡಗಳೂ ಹುಲಿಯ ಹೆಸರನ್ನು ಇಟ್ಟಿಕೊಂಡಿಲ್ಲ.

ಸಂರಕ್ಷಣೆಗೆ ದೇಶದಲ್ಲಿ ಆದ್ಯತೆ: ಸ್ವಾತಂತ್ರ್ಯನಂತರ 70 ಮತ್ತು 80 ದಶಕಗಳಿಂದ ಹುಲಿ ಮತ್ತು ಇತರ ವನ್ಯಜೀವಿಗಳ ಸಂರಕ್ಷಣೆಗೆ ದೇಶದಲ್ಲಿ ಆದ್ಯತೆ ನೀಡಲು ಪ್ರಾರಂಭಿಸಲಾಯಿತು. ಈ ದಶಕಗಳಲ್ಲಿ ಹೊಸ ಕಾನೂನು ಕಟ್ಟಳೆಗಳನ್ನು ತರಲಾಯಿತು. ಹುಲಿ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸಲಾಯಿತು. ಇವುಗಳ ಪರಿಣಾಮ ನಶಿಸುವ ಹಂತದಲ್ಲಿದ್ದ ಹುಲಿಯ ಸಂಖ್ಯೆ ಗಣನೀಯವಾಗಿ ಚೇತರಿಸಿಕೊಂಡಿತು. ಸರ್ಕಾರದ ಆಚೆ ಹಲವು ವನ್ಯಜೀವಿ ಸಂರಕ್ಷಕರ ಪಾತ್ರವೂ ಹುಲಿ ಮತ್ತು ಇತರ ವನ್ಯಜೀವಿಗಳ ಸಂಖ್ಯೆಗಳು ಚೇತರಿಸಿಕೊಳ್ಳುವ ಯತ್ನದಲ್ಲಿ ದೊಡ್ಡಮಟ್ಟದ ಕೊಡುಗೆಯಾಯಿತು. ಆದರೆ, ಅವುಗಳ ಸಂಖ್ಯೆಯನ್ನು ಅಂದಾಜಿಸಲು ನಿಖರವಾದ ವೈಜ್ಞಾನಿಕ ವ್ಯವಸ್ಥೆಯಿರಲಿಲ್ಲ. 2008ರಿಂದ ಸರ್ಕಾರ ಹುಲಿಗಳ ಸಂಖ್ಯೆಯನ್ನು ಅಂದಾಜಿಸಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ಪ್ರಾರಂಭಿಸಿತು. ನಾಲ್ಕು ವರ್ಷಗಳಿಗೊಮ್ಮೆ ಕೈಗೊಳ್ಳುವ ಈ ಕಾರ್ಯದಿಂದ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಸಮೀಕ್ಷೆಯ ಫಲಿತಾಂಶ ಹೊರಬರುವ ದಿನವನ್ನು ಮಾಧ್ಯಮ, ವನ್ಯಜೀವಿ ಆಸಕ್ತರು ಮತ್ತು ಅರಣ್ಯಾಧಿಕಾರಿಗಳು ನೋಡುತ್ತಿರುತ್ತಾರೆ. ದೇಶವೇ ಸಂಭ್ರಮಿಸುವ ಮಟ್ಟಿಗೆ ಇದನ್ನು ಎದುರು ನೋಡಲಾಗುತ್ತದೆ. ಸಾರ್ವಜನಿಕರು, ಮಾಧ್ಯಮದವರು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಈ ಮಟ್ಟದ ಆಸಕ್ತಿ ತೋರುವುದು ಒಳ್ಳೆಯ ವಿಚಾರವಾದರೂ ಇತ್ತೀಚಿನ ದಿನಗಳಲ್ಲಿ ವನ್ಯಜೀವಿ ಸಂರಕ್ಷಣೆ ಅದರಲ್ಲೂ ಹುಲಿ ಸಂರಕ್ಷಣೆಯನ್ನು ‘ಶೋ ಬಿಸಿನೆಸ್’ ಅಥವಾ ರಿಯಾಲಿಟಿ ಶೋ ತರಹ ಬಿಂಬಿಸಲಾಗುತ್ತಿದೆ. ಇದು ವನ್ಯಜೀವಿ ಸಂರಕ್ಷಣೆಯ ಗಂಭೀರತೆಯನ್ನೇ ತೆಗೆದುಬಿಟ್ಟಿದೆ.

ಸರ್ಕಾರಗಳಿಂದ ಸಂರಕ್ಷಣೆ ಕಾನೂನು ಸಡಿಲ: ಹುಲಿ ಸಂರಕ್ಷಣೆಯ ಬಗ್ಗೆ ಸರ್ಕಾರದ ಗಂಭೀರತೆ ಕೂಡ ಕಡಿಮೆಯಾಗುತ್ತಿದೆ. ನಮ್ಮಲ್ಲಿರುವ ಎಲ್ಲ ವನ್ಯಜೀವಿ, ಅರಣ್ಯ, ಮತ್ತು ಪರಿಸರ ಸಂರಕ್ಷಣಾ ಕಾನೂನುಗಳನ್ನು ಸಡಿಲಗೊಳಿಸಲಾಗುತ್ತಿದೆ. ಒಂದು ಕಡೆಯಲ್ಲಿ ಹುಲಿಯನ್ನು ನಮ್ಮ ಸಂಸ್ಕೃತಿಯ ಸಂಕೇತ, ನಾವು ಹುಲಿ ಸಂರಕ್ಷಣೆಯ ಮುಂಚೂಣಿಯಲ್ಲಿದ್ದೇವೆ ಎಂದು ಹೇಳುತ್ತಾ ಇನ್ನೊಂದು ಕಡೆಯಲ್ಲಿ ಹುಲಿ ಸಂರಕ್ಷಣೆಗೆ ಅತ್ಯಗತ್ಯವಾದ ಕಾನೂನುಗಳನ್ನು ಸರ್ಕಾರ ಸಡಿಲಗೊಳಿಸುತ್ತಿದೆ. ಉದ್ಯಮಗಳನ್ನು ಬೆಂಬಲಿಸುವ ಹೆಸರಿನಲ್ಲಿ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದರ ಪರಿಣಾಮವಾಗಿ ಹುಲಿ ಆವಾಸಸ್ಥಾನಗಳ ಛಿದ್ರೀಕರಣ ಹೆಚ್ಚಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಕಾರಿಡಾರ್​ಗಳ ಸಂರಕ್ಷಣೆಯ ವಿಚಾರ ಬಹು ಮಹತ್ವ ಪಡೆಯುತ್ತದೆ. ಹುಲಿಗಳ ಸಂಖ್ಯೆ ಹೆಚ್ಚಾದ ಹಾಗೆ ಸಂಘರ್ಷ ಕೂಡ ಹೆಚ್ಚುತ್ತದೆ. ಅದನ್ನು ಕಡಿಮೆಗೊಳಿಸಲು ಬಹುಮುಖ್ಯ ಪರಿಹಾರ ಹುಲಿಯ ಆವಾಸಸ್ಥಾನಗಳ ಮಧ್ಯೆ ಜೋಡಣೆಗೆ ಇರುವ ಕಾರಿಡಾರ್​ಗಳು.

ರಾಜ್ಯದಲ್ಲಿ 435 ಹುಲಿಗಳು

ಇವೆಲ್ಲದರ ಮಧ್ಯೆಯೂ ದೇಶದಲ್ಲಿ ವನ್ಯಜೀವಿಗಳು ಅದರಲ್ಲೂ ಹುಲಿಗಳು ಉತ್ತಮ ಸಂಖ್ಯೆಯಲ್ಲಿ ಉಳಿದಿವೆ. ‘ವಿಶ್ವ ಹುಲಿ ದಿನಾಚರಣೆ’ಯ ಅಂಗವಾಗಿ ಸರ್ಕಾರ ರಾಜ್ಯದಲ್ಲಿ ನಡೆದ ಹುಲಿ ಸಮೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ 435 ಪ್ರತ್ಯೇಕ ಹುಲಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಶೇ. 68ಕ್ಕೂ ಹೆಚ್ಚು ಹುಲಿಗಳನ್ನು ನಾಗರಹೊಳೆ ಮತ್ತು ಬಂಡೀಪುರದಲ್ಲಿ ಗುರುತಿಸಲಾಗಿದೆ. ರಾಜ್ಯದ ಇನ್ನುಳಿದ ಮೂರು ಹುಲಿ ಸಂರಕ್ಷಣಾ ಪ್ರದೇಶಗಳು ಸೇರಿ ಶೇ. 19ರಷ್ಟು ಹುಲಿಗಳು ದಾಖಲಾಗಿವೆ. ಅಂದರೆ ರಾಜ್ಯದ ಉಳಿದ ಕಾಡುಗಳೆಲ್ಲ ಸೇರಿ ಇರುವುದು ಬಹಳ ಕಡಿಮೆ ಹುಲಿಗಳು. ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಇನ್ನಿತರ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಹುಲಿ ಇರಲು ಯೋಗ್ಯವಾದ ಆವಾಸಸ್ಥಾನವಿದ್ದರೂ, ಆ ಕಾಡುಗಳಲ್ಲಿ ಕಡಿಮೆ ಹುಲಿಗಳಿರುವುದು ಈ ಕಾಡುಗಳಲ್ಲಿ ಇರುವ ತೊಂದರೆಗಳನ್ನು ಎತ್ತಿ ತೋರುತ್ತದೆ. ಬಹುಶಃ ನಮ್ಮ ರಾಜ್ಯದಲ್ಲಿ ಅಂದಾಜು 800 ಹುಲಿಗಳಿಗೆ ಆವಾಸಸ್ಥಾನವಿದೆ. ಆದರೆ, ಆ ಗುರಿ ತಲುಪಲು ಬಹು ಮುಖ್ಯವಾದ ತಡೆಯೆಂದರೆ ಹುಲಿಗಳ ಉಳಿವಿಗೆ ಅತ್ಯವಶ್ಯವಾಗಿ ಬೇಕಾದ ಜಿಂಕೆ, ಕಡವೆ, ಕಾಟಿಯಂತಹ ಬಲಿಪ್ರಾಣಿಗಳ ಕೊರತೆ. ಆವಾಸಸ್ಥಾನದ ಛಿದ್ರೀಕರಣ ಮತ್ತು ಯಥೇಚ್ಛವಾಗಿ ಬಲಿಪ್ರಾಣಿಗಳ ಲಭ್ಯತೆಯಿದ್ದರೆ ಕರ್ನಾಟಕವು 800 ಹುಲಿಗಳ ಗುರಿ ತಲುಪುವುದು ಅಸಾಧ್ಯವೇನಲ್ಲ. ಆದರೆ, ಅದಕ್ಕೆ ರಾಜಕೀಯ ಇಚ್ಛಾಶಕ್ತಿ, ಅಧಿಕಾರಿಗಳ ಬದ್ಧತೆ ಮತ್ತು ಸಾರ್ವಜನಿಕರ ಬೆಂಬಲ ಬೇಕಷ್ಟೆ.

  • ದೇಶದಲ್ಲಿ ಹುಲಿ ಸಂತತಿ ಉಳಿಸಿ ಬೆಳೆಸುವ ಉದ್ದೇಶದ ಹುಲಿ ಯೋಜನೆಗೆ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಚಾಲನೆ ನೀಡಿದರು.
  • ಭಾರತದಲ್ಲಿ ಅತಿಹೆಚ್ಚು ಹುಲಿಗಳಿರುವ ರಾಜ್ಯದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನ ಕರ್ನಾಟಕದ್ದಾಗಿದೆ.
  • ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶವು 1974ರಲ್ಲಿ ಸ್ಥಾಪನೆಗೊಂಡಿತು.

ಮುಂಚೂಣಿ ಅರಣ್ಯ ಸಿಬ್ಬಂದಿಯ ಕಡೆಗಣನೆ

ಮಾನವ ಸಮಾಜ ಮುಂದುವರಿದ ಹಾಗೆ ಆಧುನಿಕ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ತನ್ನ ಹೆಜ್ಜೆ ಹಾಕಿದೆ. ಅದನ್ನು ಹುಲಿ ಸಂರಕ್ಷಣೆಗೆ ಸಹ ಅಳವಡಿಸಿಕೊಳ್ಳಲಾಗಿದೆ. ಡ್ರೋನ್, ಥರ್ಮಲ್ ಕ್ಯಾಮರಾ ಇನ್ನಿತರ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಉಪಯೋಗಿಸಲಾಗುತ್ತಿದೆ. ಆದರೆ, ಯಾವ ತಂತ್ರಜ್ಞಾನ ಬಂದರೂ ಹುಲಿ, ಮತ್ತಿತರ ವನ್ಯಜೀವಿಗಳನ್ನು ಉಳಿಸಲು ಅತಿ ಅಗತ್ಯವಾದ ಸಂಪನ್ಮೂಲವೆಂದರೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ. ಇವರು ಮಾಡುವ ಕೆಲಸಗಳನ್ನು ಯಾವ ತಂತ್ರಜ್ಞಾನವೂ ಮಾಡಲಾರದು. ಅದರಲ್ಲೂ ಹುಲಿ ಸಂರಕ್ಷಣಾ ಪ್ರದೇಶ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ನೌಕರರ ಪಾತ್ರ ಬಹು ದೊಡ್ಡದು. ದುರದೃಷ್ಟವಶಾತ್ ಇಂದಿಗೂ ಇವರ ಪರಿಸ್ಥಿತಿ ಹೆಚ್ಚೇನು ಸುಧಾರಿಸಿಲ್ಲ. ಸಂಬಳ ಕೂಡ ಪ್ರತಿ ತಿಂಗಳು ಜಮೆಯಾಗುವುದಿಲ್ಲ, ಕೆಲವೊಮ್ಮೆ ಹಲವಾರು ತಿಂಗಳುಗಳೇ ಬೇಕಾಗುತ್ತದೆ. ಇವರು ಮಾಡುವುದು ಸುಲಭದ ಕೆಲಸವೇನಲ್ಲ. ಅವರಿಗೆ ಸರಿಯಾದ ಸಂಬಳ ಸವಲತ್ತು ಕೊಡದಿದ್ದರೆ ಈ ಕಾಡು ಕಾಯುವ ಕೆಲಸಕ್ಕೆ ಮುಂದಿನ ದಿನಗಳಲ್ಲಿ ಯಾರೂ ಬರುವುದಿಲ್ಲ. ಕೃಷಿ ಕೂಲಿ ಅಥವಾ ಇನ್ನಿತರ ಕೌಶಲ್ಯರಹಿತ ಕೆಲಸಗಳಿಗೆ ಇವರಿಗಿಂತ ಹೆಚ್ಚು ಸಂಬಳ ಸಿಗುವುದರಿಂದ ಈ ಪ್ರಯಾಸದ ಕೆಲಸಕ್ಕೆ ಬರುವ ಪ್ರಮೇಯವಿರುವುದಿಲ್ಲ. ಇವರ ಪಾಡು ತಿಳಿದುಕೊಳ್ಳುವ ಅಥವಾ ಸ್ಪಂದಿಸುವ ಅಧಿಕಾರಿಗಳು ಕೂಡ ಬಹು ಕಡಿಮೆ. ಕೆಲ ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಸಮಸ್ಯೆಗಳನ್ನು ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪೋ›ತ್ಸಾಹಕ ಧನ ಮಂಜೂರು ಮಾಡುವ ಬಗ್ಗೆ ರ್ಚಚಿಸಲು ಅರಣ್ಯ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಬಳಿ ಹೋದರೆ, ‘ಏನ್ರೀ, ನೀವೇನು ಕಾರ್ವಿುಕ ನಾಯಕರಾ?’ ಎಂದು ಖಾರವಾಗಿ ಪ್ರಶ್ನಿಸಿದ್ದರು. ಹಣಕಾಸಿನ ಮಂತ್ರಿಗಳೂ ಆದ ಮುಖ್ಯಮಂತ್ರಿಗಳೇ ಕಡತವನ್ನು ಅನುಮೋದಿಸಿದ್ದರೂ ಕಡತವನ್ನು ಅನುಮೋದಿಸಿ ಹಣಕಾಸು ಇಲಾಖೆಗೆ ಕಳುಹಿಸಲು ಇವರಿಗೇನೋ ಸಂಕಟವಿತ್ತು. ಪುನಃ ಮುಖ್ಯಮಂತ್ರಿಗಳ ಬಳಿ ಹೋಗಿ ಈ ಕಡತದ ವಿಚಾರವನ್ನು ರ್ಚಚಿಸಿ ಅವರೇ ಆಸಕ್ತಿ ವಹಿಸಿ ವಿತ್ತ ಇಲಾಖೆಗೆ ಕಳುಹಿಸಿ ಕೊಡಬೇಕಾಗಿ ಬಂದಿತು. ಇಂತಹ ಮನಸ್ಸಿನ ಅಧಿಕಾರಿಗಳಿಂದ ನಾವು

ಹೇಗೆ ತಾನೆ ಮುಂಚೂಣಿ ಸಿಬ್ಬಂದಿ ಕಲ್ಯಾಣದ ಬಗ್ಗೆ ಯೋಚಿ ಸಬಹುದು ಅಥವಾ ಇಂತಹವರು ಇಲಾಖೆಯ ಸಿಬ್ಬಂದಿ ಹುಮ್ಮಸ್ಸಿನಿಂದ ಕೆಲಸ ಮಾಡುವ ಹಾಗೆ ಪೋ›ತ್ಸಾಹಿಸುತ್ತಾರೆಂದು ನಿರೀಕ್ಷಿಸಬಹುದು? ಇಂತಹ ಅಧಿಕಾರಿಗಳ ಮನೋವೃತ್ತಿ ಬದಲಾ ಗಲೇಬೇಕು. ಏಕೆಂದರೆ ಇವರು ಮುಂಚೂಣಿ ಸಿಬ್ಬಂದಿ ಬಗ್ಗೆ ಮಾತ್ರ ಹೀಗೆ ಯೋಚಿಸುವುದಿಲ್ಲ ವನ್ಯಜೀವಿ, ಅರಣ್ಯ ಸಂರಕ್ಷಣೆಯ ಬಗ್ಗೆಯೂ ಇವರ ಮನೋಭಾವ, ನಿಲುವು ಹೀಗೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net