ಇಂದು ವಿಶ್ವ ರಂಗಭೂಮಿ ದಿನ: ರಂಗಭೂಮಿಯ ಇಂದಿನ ಪರಿಸ್ಥಿತಿ ಹೇಗಿದೆ?

Drama
Published on
ಚಲನಚಿತ್ರಗಳು ಬಂದಾಗ ಅದರಿಂದ ರಂಗಭೂಮಿಗೆ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಯ್ತು. ಕಿರುತೆರೆ ಬಂದಾಗಲೂ ಇದೇ ಭಯ ಪುನರಾವರ್ತನೆಯಾಯಿತು. ಕರೊನಾ ಲಾಕ್​ಡೌನ್ ಮತ್ತು ಓಟಿಟಿ ಹಾವಳಿ ಹೆಚ್ಚಾದಾಗ ರಂಗಭೂಮಿಗೆ ಇನ್ನು ಉಳಿಗಾಲವೇ ಇಲ್ಲ ಎಂದು ಹೇಳಲಾಯ್ತು. ಹಾಗಿದ್ದರೆ, ರಂಗಭೂಮಿಯ ಇಂದಿನ ಪರಿಸ್ಥಿತಿ ಹೇಗಿದೆ? ವಿಶ್ವ ರಂಗಭೂಮಿ ದಿನದ ಸಂದರ್ಭದಲ್ಲಿ ಈ ಕುರಿತು ಒಂದು ಅವಲೋಕನ...

ಸಕ್ರಿಯವಾಗಿಯೇ ಇದೆ...

ಇಂದು ನಾಟಕ ಮಾಡುವುದು ಕಷ್ಟವೇನಿಲ್ಲ. ಹಳೆಯ ಪ್ರೇಕ್ಷಕರ ಜತೆಗೆ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಪ್ರೇಕ್ಷಕರು ಸಹ ಹುಟ್ಟಿಕೊಂಡಿದ್ದಾರೆ. ಹಾಗಾಗಿ, ಒಂದು ಪ್ರದರ್ಶನ ತುಂಬುವುದು ಕಷ್ಟವೇನಲ್ಲ. ಇದು ಪ್ರೇಕ್ಷಕರ ವಿಷಯವಾದರೆ, ಇಂದು ಹಲವು ರಂಗಶಾಲೆಗಳು, ರಂಗಕೇಂದ್ರಗಳು ಪ್ರಾರಂಭವಾಗಿವೆ. ರಂಗಭೂಮಿಯ ಮೇಲೆ ಆಸಕ್ತಿ ಮೂಡಿಸುವ ಜತೆಗೆ, ಹೊಸ ಪ್ರತಿಭೆಗಳನ್ನು ಹುಟ್ಟುಹಾಕುತ್ತಿವೆ.

ಇದಲ್ಲದೆ, ಇಂದು ಬಹಳಷ್ಟು ಹೊಸಬರು ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಬಹುದು. ಅದರಲ್ಲೂ ಹಲವು ಸಾಫ್ಟ್​ವೇರ್ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ರಂಗಭೂಮಿಯನ್ನು ಹವ್ಯಾಸವನ್ನಾಗಿ ತೆಗೆದುಕೊಂಡು ನಾಟಕಗಳನ್ನು ಮಾಡುತ್ತಿದ್ದಾರೆ. ತಮ್ಮದೇ ತಂಡಗಳನ್ನು ಕಟ್ಟಿಕೊಳ್ಳುತ್ತಾ, ಅವಕಾಶ ಸಿಕ್ಕಾಗಲೆಲ್ಲಾ ನಾಟಕಗಳ ತಯಾರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ, ಹಿಂದೆಂದಿಗಿಂತಲೂ ನಾಟಕಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ. ಹಾಗಾಗಿ, ರಂಗಭೂಮಿ ಸಕ್ರಿಯವಾಗಿವೆ. ಇದು ಬರೀ ಬೆಂಗಳೂರಿನ ಕಥೆಯಲ್ಲ, ರಾಜ್ಯದ ಬೇರೆ ನಗರಗಳಲ್ಲೂ ಹಲವು ಪ್ರಯೋಗಗಳಾಗುತ್ತಿವೆ ಮತ್ತು ಹಲವು ಹವ್ಯಾಸಿ ತಂಡಗಳು ನಿರಂತರವಾಗಿ ಕೆಲಸ ಮಾಡುತ್ತಲೇ ಇವೆ ಎನ್ನುವುದು ವಿಶೇಷ. ಉತ್ತರ ಕರ್ನಾಟಕದಲ್ಲಿ ಹಲವು ವೃತ್ತಿ ನಾಟಕ ಕಂಪೆನಿಗಳು ಸಕ್ರಿಯವಾಗಿದ್ದು, ಸತತವಾಗಿ ನಾಟಕಗಳನ್ನಾಡುತ್ತಿವೆ. ಇನ್ನು, ದಕ್ಷಿಣ ಕನ್ನಡದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್ ಮುಂತಾದವರು ಸಾಮಾಜಿಕ ನಾಟಕಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಬೆಂಗಳೂರಿನ ರಂಗಶಂಕರದ ಉದಾಹರಣೆಯನ್ನೇ ತೆಗೆದುಕೊಂಡರೆ, ಸೋಮವಾರ ರಜಾದಿನ ಹೊರತುಪಡಿಸಿದರೆ, ಮಿಕ್ಕಂತೆ ಪ್ರತಿದಿನ ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಕೋವಿಡ್ ಸಮಯದಲ್ಲಿ ಜನ ಸೇರುವುದಕ್ಕೆ ಅವಕಾಶವಿಲ್ಲದ ಕಾರಣದಿಂದ ಸ್ವಲ್ಪ ಸಮಯ ರಂಗಭೂಮಿ ಅಷ್ಟೇನೂ ಸಕ್ರಿಯವಾಗಿರಲಿಲ್ಲ ಎನ್ನುವುದು ಬಿಟ್ಟರೆ, ಮಿಕ್ಕಂತೆ ಯಾವತ್ತೂ ಸಕ್ರಿಯವಾಗಿಯೇ ಇದೆ.

| ರಾಘು ಶಿವಮೊಗ್ಗ ನಟ-ನಿರ್ದೇಶಕ

ಪ್ರೇಕ್ಷಕರ ಕೊರತೆ

ಇಂದು ಕಾಲೇಜು ಹಂತದಲ್ಲೇ ಸಾಕಷ್ಟು ವಿದ್ಯಾರ್ಥಿಗಳು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಲ್ಲಿ ಬಹಳಷ್ಟು ಜನರ ಉದ್ದೇಶ ಬೇರೆಯಾಗಿರುತ್ತದೆ. ಅವರಿಗೆಲ್ಲ ಚಲನಚಿತ್ರ ಅಥವಾ ಕಿರುಚಿತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಲ್ಲಿರುತ್ತಾರೆ. ಅನುಭವಕ್ಕಾಗಿ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆಗಿನ ರಂಗಭೂಮಿಗೂ, ಈಗಿನ ರಂಗಭೂಮಿಗೂ ಬಹಳ ವ್ಯತ್ಯಾಸವಿದೆ. ಈಗಿನ ಯುವಕರು ತುಂಬ ಗೊಂದಲ ದಲ್ಲಿದ್ದಾರೆ. ಎರಡೆರೆಡು ಕಡೆ ಕಾಲಿಟ್ಟಿದ್ದಾರೆ. ಒಟ್ಟಾರೆ, ಕೆಲಸಗಳು ಆಗುತ್ತಿವೆ. ಪ್ರಯೋಗಗಳ ವಿಷಯಕ್ಕೆ ಬಂದರೆ, ಹೆಚ್ಚೇನೂ ಪ್ರಯೋಗಗಳಾಗುತ್ತಿಲ್ಲ. ಹೊಸ ನಾಟಕಗಳೂ ಬರುತ್ತಿಲ್ಲ. ಅದಕ್ಕೆ ಕಾರಣ ಬರೆಯುವವರು ಕಡಿಮೆಯಾಗಿದೆ. ನಾಟಕಗಳಿಗೆ ಅದರದ್ದೇ ಆದ ಗುಣಗಳಿರುತ್ತವೆ. ಆದರೆ, ಇವತ್ತಿನ ಬಹಳಷ್ಟು ನಾಟಕಗಳು ನಗರಕೇಂದ್ರಿಕೇತವಾಗಿರುತ್ತವೆ. ಬಹಳಷ್ಟು ನಾಟಕಗಳಿಗೆ ನಾಟಕಗಳ ಗುಣ ಇರುವುದಿಲ್ಲ. ಇನ್ನು, ನಾಟಕಗಳಿಗೆ ಪ್ರೇಕ್ಷಕರು ಯಾವತ್ತೂ ಇದ್ದಾರೆ. ಆದರೆ, ಇಂದು ಹೆಚ್ಚಾಗಿ ಯುವಕರು ನಾಟಕಗಳನ್ನು ಮಾಡುತ್ತಿರುವುದರಿಂದ ಆ ನಾಟಕಗಳನ್ನು ನೋಡುವುದಕ್ಕೆ ಅವರ ಸ್ನೇಹಿತರು ಮತ್ತು ಕುಟುಂಬದವರು ಸೇರಿರುತ್ತಾರೆ. ಒಂದೆರಡು ಪ್ರದರ್ಶನಗಳು ಹೀಗೆ ತುಂಬಬಹುದು. ನಿಜವಾದ ಪ್ರೇಕ್ಷಕರು ಬರಬೇಕೆಂದರೆ, ಬಹಳ ಕಷ್ಟಪಡಬೇಕು. ನಿಜವಾದ ಪ್ರೇಕ್ಷಕರನ್ನು ಕರೆಸುವುದು ಬಹಳ ಕಷ್ಟ.

| ಮಂಜುನಾಥ ಬಡಿಗೇರ್ ರಂಗಕರ್ವಿು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net