8 ಶತಕೋಟಿ ಜನ: ಸ್ವಾವಲಂಬನೆಯ ಸವಾಲು, ಜನಸಂಖ್ಯೆಯಲ್ಲಿ ಅಗ್ರಸ್ಥಾನದತ್ತ ಭಾರತ..

Population
Published on

ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ11ರಂದು ‘ವಿಶ್ವ ಜನಸಂಖ್ಯಾ ದಿನ’ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ‘ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯು 1989ರ ಜು.11ರಂದು ಮೊದಲ ಬಾರಿ ಈ ದಿನವನ್ನು ಆಚರಿಸಿತು. ಅಂದಿನಿಂದ ಜಗತ್ತಿನಾದ್ಯಂತ ಅಂದಾಜು 200 ದೇಶಗಳು ಈ ದಿನ ಆಚರಿಸಿಕೊಂಡು ಬರುತ್ತಿವೆ. ವರ್ಷದಿಂದ ವರ್ಷಕ್ಕೆ ವಿಶ್ವದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ಆಯಾ ದೇಶಗಳಿಗೆ ದೊಡ್ಡ ಸವಾಲಾಗಿದೆ. ಬಾಲ್ಯ ವಿವಾಹ, ಬಡತನ, ಲೈಂಗಿಕ ಶಿಕ್ಷಣ ಕೊರತೆ ಮುಂತಾದ ಕಾರಣಗಳಿಂದ ಜನಸಂಖ್ಯೆ ಹೆಚ್ಚುತ್ತಿದೆ.

ಅವಕಾಶದ ಅನ್ವೇಷಣೆ

‘8 ಶತಕೋಟಿ ಜನರ ಪ್ರಪಂಚ: ಸ್ವಾವಲಂಬಿ ಯಾಗುವ ನಿಟ್ಟಿನಲ್ಲಿ ಅವಕಾಶಗಳ ಅನ್ವೇಷಣೆ, ಎಲ್ಲರಿಗೂ ಹಕ್ಕು, ಆಯ್ಕೆಗಳನ್ನು ಖಾತರಿಪಡಿಸು ವುದು’ ಎಂಬುದು ಈ ವರ್ಷದ ಜನಸಂಖ್ಯಾ ದಿನದ ಥೀಮ್ ಆಗಿದೆ. ಲಿಂಗ, ಜನಾಂಗ, ವರ್ಗ, ಧರ್ಮ ಮತ್ತು ಅಂಗವೈಕಲ್ಯ ಇತ್ಯಾದಿ ಕಾರಣಗಳಿಂದ ಎಲ್ಲರಿಗೂ ಸಮನಾದ ಹಕ್ಕುಗಳು ಸಿಗುತ್ತಿಲ್ಲ. ಅತಿ ಜನಸಂಖ್ಯೆಯಿಂದಾಗಿ ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ ಎಂಬುದು ವಿಶ್ವಸಂಸ್ಥೆಯ ಅಂಬೋಣ. ಅದರಲ್ಲೂ ಕರೊನೊತ್ತರ ದಿನಗಳಲ್ಲಿ ಜಾಗತಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕವಾಗಿ ತೀವ್ರವಾಗಿ ಬದಲಾವಣೆಯಾಗಿದ್ದು ಇದನ್ನು ಮರಳಿ ಹಳಿಗೆ ತರುವುದು ಎಲ್ಲ ದೇಶಗಳಿಗೂ ಸವಾಲಾಗಿ ಪರಿಣಮಿಸಿದೆ.

ವಯೋಮಾನದ ವಿವರ: ಜಗತ್ತಿನಲ್ಲಿ 0-14 ವಯಸ್ಸಿನವರು ಶೇ.25, 15-64 ವರ್ಷದವರು ಶೇ.65 ಹಾಗೂ 65ವರ್ಷಕ್ಕಿಂತ ಮೇಲ್ಪಟ್ಟವರು ಶೇ.10

ದಿನಾಚರಣೆ ಪ್ರಯೋಜನ

  • ಲಿಂಗ ಅಸಮಾನತೆ ನಿವಾರಣೆಗೆ ಪ್ರಯತ್ನ
  • ಜನರಿಗೆ ಆರೋಗ್ಯ ಸೌಲಭ್ಯ ದೊರೆಯಲು ಯೋಜನೆ ಗಳ ತಯಾರಿ
  • ಹೆಣ್ಣು ಮಗುವಿನ ಆರೋಗ್ಯ ಮತ್ತು ಹಕ್ಕುಗಳ ರಕ್ಷಣೆ

ಬದಲಾದ ಚೀನಾ

ವಿಶ್ವದ ಜನಸಂಖ್ಯೆ ಒಂದು ಶತಕೋಟಿಯಷ್ಟಾಗಲು ಸಾವಿರಾರು ವರ್ಷಗಳು ಬೇಕಾಗಿತ್ತು. ನಂತರ ಕೇವಲ 200 ವರ್ಷಗಳಲ್ಲಿ ಏಳುಪಟ್ಟು ಹೆಚ್ಚಾಯಿತು. 2011ರಲ್ಲಿ ಜಾಗತಿಕ ಜನಸಂಖ್ಯೆ 7 ಶತಕೋಟಿ ಮುಟ್ಟಿತ್ತು. ಪ್ರಸ್ತುತ ಸುಮಾರು 8 ಶತಕೋಟಿ ಜನಸಂಖ್ಯೆ ಇದೆ. 2030ರಲ್ಲಿ ಅಂದಾಜು 8.5 ಕೋಟಿ ಶತಕೋಟಿ ಇದ್ದರೆ, 2050ರ ವೇಳೆಗೆ ಇದು 9.7 ಶತಕೋಟಿಗೆ ಏರಿಕೆಯಾಗಲಿದೆ. 2100ರ ಹೊತ್ತಿಗೆ 10.9 ಶತಕೋಟಿಗೆ ಮುಟ್ಟಲಿದೆ. 2050ರ ವೇಳೆಗೆ ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ 9 ದೇಶಗಳ ಪಾಲೇ ಶೇ.50 ಇರಲಿದೆ. ಕರ್ನಾಟಕದಲ್ಲಿ ಪ್ರಸ್ತುತ ಅಂದಾಜು 7 ಕೋಟಿ ಸೇರಿ ಭಾರತದ ಜನಸಂಖ್ಯೆ 140 ಕೋಟಿ ಇದೆ. ಮೊದಲ ಸ್ಥಾನದಲ್ಲಿರುವ ಚೀನಾದ ಜನಸಂಖ್ಯೆ 144 ಕೋಟಿಯಷ್ಟಿದೆ. ಮುಂದಿನ ಏಳೆಂಟು ವರ್ಷಗಳಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಅತಿಹೆಚ್ಚು ಜನರನ್ನು ಹೊಂದಿದ ದೇಶವಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ತಗ್ಗುತ್ತಿರುವ ಕಾರಣದಿಂದಾಗಿ ‘ಒಂದೇ ಮಗು’ ನೀತಿಯನ್ನು ಈಗ ಸಡಿಲಿಸಲಾಗಿದೆಯಾದರೂ, ಸರ್ಕಾರದ ಉಸಿರುಗಟ್ಟಿಸುವ ಆಡಳಿತ ನೀತಿ, ಹೆಚ್ಚುತ್ತಿರುವ ಜೀವನಮಟ್ಟ, ಆರ್ಥಿಕ ಪರಿಸ್ಥಿತಿ ಮುಂತಾದ ಕಾರಣಕ್ಕೆ ಹೆಚ್ಚು ಮಕ್ಕಳನ್ನು ಹೊಂದಲು ಜನರು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಜೀವಿತಾವಧಿ ಹೆಚ್ಚಳ: ಇತ್ತೀಚಿನ ದಿನಗಳಲ್ಲಿ ಫಲವತ್ತತೆ ಮತ್ತು ಜೀವಿತಾವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 1970ರ ದಶಕದಲ್ಲಿ ಮಹಿಳೆಯರು ಸರಾಸರಿ 4.5 ಮಕ್ಕಳನ್ನು ಹೊಂದಿದ್ದರು. 2015ರ ವೇಳೆಗೆ ಫಲವತ್ತತೆ ಪ್ರತಿ ಮಹಿಳೆಗೆ ಸರಾಸರಿ 2.5ಕ್ಕಿಂತ ಕಡಿಮೆಯಾಗಿದೆ. ಜಾಗತಿಕ ಜೀವಿತಾವಧಿಯು 1990ರ ದಶಕದ ಆರಂಭದಲ್ಲಿದ್ದ 64.6 ವರ್ಷಗಳಿಂದ 2019ರಲ್ಲಿ 72.6 ವರ್ಷಗಳಿಗೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net