ವಿಕಿರಣಗಳ ಪ್ರಭಾವ ನಾಶಗೊಳಿಸಬಲ್ಲ ಯಜ್ಞವಿಧಿ ಅಗ್ನಿಹೋತ್ರ!: ಇಂದು ವಿಶ್ವ ಅಗ್ನಿಹೋತ್ರ ದಿನ

Agnihothra
Published on

ಅಗ್ನಿಹೋತ್ರ ಹೋಮವು ಧಾರ್ವಿುಕ ದೃಷ್ಟಿಯಲ್ಲಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಾಕಷ್ಟು ಮಹತ್ವವನ್ನು ಪಡೆದಿದೆ. 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದಲ್ಲಿ ಸುಮಾರು 10 ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದವರು ಮರಣ ಹೊಂದಿದರು. ಆದರೆ 1 ಕಿಲೋಮೀಟರ್ ದೂರದಲ್ಲಿದ್ದ ನಾಲ್ಕು ಕುಟುಂಬಕ್ಕೆ ಏನೂ ಆಗಲಿಲ್ಲ. ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರ ಮನೆಯನ್ನು ಅಧ್ಯಯನಕ್ಕೆ ಒಳಪಡಿಸಿ ದಾಗ ಆ ಮನೆಗಳಲ್ಲಿ ನಿಯಮಿತವಾಗಿ ಎರಡು ಹೊತ್ತು ಅಗ್ನಿಹೋತ್ರ ಹೋಮವನ್ನು ಮಾಡುತ್ತಿದ್ದರು ಎಂದು ತಿಳಿಯಿತು. ನಂತರ ಸಂಶೋಧಕರು ಈ ಹೋಮವನ್ನು ರೋಗಿಗಳ ಮೇಲೆ ಪ್ರಯೋಗಿಸಿದಾಗಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಗುಣಮುಖರಾದರು.

ಸೂರ್ಯನು ಶಕ್ತಿಯನ್ನು ಕೊಡುತ್ತಾನೆ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಪ್ರದೂಷಣೆಯನ್ನು ನಾಶಗೊಳಿಸಲು ಯಾವ ಸ್ಥಿತಿಯು ಆವಶ್ಯಕ ಮತ್ತು ಪೂರಕವಾಗಿರುತ್ತದೆಯೋ, ಅದು ತಾನಾಗಿಯೇ ನಿರ್ವಣವಾಗುತ್ತದೆ. ಇದರಿಂದ ಪೃಥ್ವಿಗೆ ಶಾಂತಸ್ಥಿತಿ ಪ್ರಾಪ್ತವಾಗುತ್ತದೆ. ಅಗ್ನಿಹೋತ್ರವು ಉತ್ಪಾದಕ ಯಂತ್ರವಾಗಿದೆ ಮತ್ತು ಅದರಲ್ಲಿನ ಅಗ್ನಿ ಜ್ವಾಲೆಯು ಹವೆಯಂತ್ರವಾಗಿದೆ. ಅಗ್ನಿಯ ಮಾಧ್ಯಮದಿಂದ ಆಕಳ ಬೆರಣಿ, ಆಕಳ ತುಪ್ಪ ಮತ್ತು ಅಕ್ಷತೆಯ ಅಕ್ಕಿ ಈ ಘಟಕಗಳು ಪರಸ್ಪರ ಸಂಯೋಗಗೊಂಡು ಅಪೂರ್ವ ಶಕ್ತಿಯು ನಿರ್ವಣವಾಗುತ್ತದೆ ಹಾಗೂ ಸುತ್ತಮುತ್ತಲಿನ ವಸ್ತುಗಳ ಸುತ್ತಲೂ ಹರಡುತ್ತದೆ. ಅವುಗಳಲ್ಲಿನ ವಿಘಾತಕ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ. ಆಮೇಲೆ ಆ ವಾತಾವರಣದಲ್ಲಿನ ಸಾವಯವ (ಜೈವಿಕ) ದ್ರವ್ಯಗಳಿಗೆ ಬದುಕಲು, ವೃದ್ಧಿಯಾಗಲು ಮತ್ತು ವಿಸ್ತಾರವಾಗಲು ಪೂರಕ ಇಂಧನಗಳ ಪೂರೈಕೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಅಗ್ನಿಹೋತ್ರ ಪ್ರಕ್ರಿಯೆಯು ವಾಯುಮಂಡಲದ ಹಾನಿ ಯನ್ನು ತಪ್ಪಿಸುತ್ತದೆ.

ಹವನ ಪಾತ್ರೆ: ಅಗ್ನಿಹೋತ್ರವನ್ನು ಮಾಡಲು ವಿಶಿಷ್ಟ ಆಕಾರದ ತಾಮ್ರದ ಪಿರಾಮಿಡ್ ಪಾತ್ರೆ ಆವಶ್ಯಕ. ತಾಮ್ರದ ಧಾತುವಿನಲ್ಲಿ ವಾಹಕ ಗುಣವಿದೆ. ಬೆಳಗ್ಗಿನ ಅಗ್ನಿಹೋತ್ರದ ಸಮಯದಲ್ಲಿ ಎಲ್ಲ ರೀತಿಯ ಇಂಧನಗಳು ತಾಮ್ರದ ಪಾತ್ರೆಯ ಕಡೆಗೆ ಆಕರ್ಷಿತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಈ ಇಂಧನಗಳು ಪಿರಮಿಡ್ ಆಕಾರದಿಂದಾಗಿ ಪಾತ್ರೆಯಿಂದ ಮತ್ತೊಮ್ಮೆ ವೇಗದಿಂದ ಹೊರಹಾಕಲ್ಪಡುತ್ತವೆ. ತಾಮ್ರದ ಪಾತ್ರೆಯಲ್ಲಿ ಮಾಡಿದ ಹವನದಿಂದ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ತೇಜವು ಹೊರಗೆ ಹೋಗುತ್ತದೆ. ಹವನ ಮಾಡುವಾಗ ಆಕಳ (ಹಸುವಿನ) ಬೆರಣಿ, ಆಕಳ ತುಪ್ಪ ಮತ್ತು ಅಖಂಡ ಅಕ್ಕಿ (ಅಕ್ಷತೆ)ಯನ್ನು ಉಪಯೋಗಿಸಿದರೆ, ಈ ಘಟಕಗಳು ಆಯಾ ತತ್ತ್ವದ ಸ್ತರದಲ್ಲಿ ಅಗ್ನಿಯ ಸಂಯೋಗದಿಂದ ಸೂಕ್ಷ್ಮ ವಾಯುವನ್ನು ನಿರ್ವಿುಸುತ್ತವೆ.

ಅಗ್ನಿಹೋತ್ರ ಮಾಡುವ ವಿಧಾನ: ಹವನ ಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ 2-3 ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳುಗಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು. ಅಗ್ನಿಯು ಧೂಮರಹಿತವಾಗಿ ಪ್ರಜ್ವಲಿಸಬೇಕು.

ಪಠಿಸಬೇಕಾದ ಮಂತ್ರ: ಸೂರ್ಯೋದಯದ ಸಮಯದಲ್ಲಿ:

1. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಮ್ ನ ಮಮ

2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ.

ಸೂರ್ಯಾಸ್ತದ ಸಮಯದಲ್ಲಿ: 1. ಅಗ್ನಯೇ ಸ್ವಾಹಾ ಅಗ್ನಯೇ ಇದಮ್ ನ ಮಮ 2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ. ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೆಯೇ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಮೊದಲನೆಯ ಮಂತ್ರವನ್ನು ಒಂದು ಬಾರಿ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮಾ (ಮಧ್ಯದ ಬೆರಳು), ಅನಾಮಿಕಾ (ಉಂಗುರ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ ಅಕ್ಕಿ-ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) ಆಮೇಲೆ ಎರಡನೇ ಬಾರಿ ಮಂತ್ರವನ್ನು ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ-ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.

(ಸಂಗ್ರಹ : ವಿನೋದ ಕಾಮತ, ರಾಜ್ಯ ವಕ್ತಾರರು, ಸನಾತನ ಸಂಸ್ಥೆ, ಸಂಪರ್ಕ : 9342599299)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net