

ಮಾಧ್ವ ಸಿದ್ಧಾಂತವೆಂಬೊ ಗಗನದಲ್ಲಿ ಪ್ರಕಾಶಿಸಿದ ಪ್ರಖರವಾದ ಜ್ಞಾನ ಕಿರಣ ಶ್ರೀ ಜಯತೀರ್ಥರು. ಅವರ ಹೆಸರಿನ ಮೊದಲೆರಡು ಕ್ಷೇತ್ರಗಳು ಸೂಚಿಸುವಂತೆ ವೇದಾಂತ ಸಾಮ್ರಾಜ್ಯದಲ್ಲಿ ಜಯದ ಮಾಲೆಯನ್ನು ಧರಿಸಿದ ಮಹಾನುಭಾವರು. ಜಯ ಎಂದರೆ ಇಂದ್ರಿಯಗಳನ್ನು ಜಯಿಸಿದವರೂ, ತೀರ್ಥ ಎಂದರೆ ಜ್ಞಾನ ಸಂಪನ್ನರೂ ಎಂದು ಅರ್ಥೈಸಿದ್ದಾರೆ. ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ಚಿಕ್ಕ ವಯಸ್ಸಿನಲ್ಲಿಯೇ ಸಕಲ ವೈಭೋಗಗಳನ್ನೂ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆದವರು.
ನಾದಬ್ರಹ್ಮ ಪಾಂಡುರಂಗ ವಿಠಲನು ನೆಲೆಸಿರುವ ಪಂಢರಪುರದ ಹತ್ತಿರವಿರುವ ಮಂಗಳವೇಡೆ ಎಂಬ ಊರಿನಲ್ಲಿ ಹುಟ್ಟಿದವರು ಜಯತೀರ್ಥರು. ಇವರಿಗೆ ತಂದೆ- ತಾಯಿಗಳು ಇಟ್ಟ ಹೆಸರು ರಘುನಾಥ ಎಂದು. ಮಗ ಗಟ್ಟಿಮುಟ್ಟಾಗಿ ಬೆಳೆಯಲಿ ಎಂದು ಪ್ರೀತಿಯಿಂದ ಧೋಂಡೋಪಂಥ ಎಂದು ಕರೆಯುತ್ತಾರೆ. ಧೋಂಡೋ ಎಂದರೆ ಮರಾಠಿಯಲ್ಲಿ ಕಲ್ಲು ಎಂದರ್ಥ. ಶ್ರೀ ಅಕ್ಷೋಭ್ಯತೀರ್ಥರು ಇವರ ಆಶ್ರಮ ಗುರುಗಳು ಮತ್ತು ವಿದ್ಯಾಗುರುಗಳೂ ಹೌದು. ಧೋಂಡೋಪಂಥ ಒಂದು ಸಾರಿ ಅಶ್ವ ಸವಾರಿಯೊಂದಿಗೆ ಬೇಟೆಯಾಡಲು ಕಾಡಿಗೆ ಹೋಗುತ್ತಾನೆ. ಬಿಸಿಲಿನ ಬೇಗೆಯಿಂದ ಬಾಯಾರಿ ನೀರು ಕುಡಿಯಲೆಂದು ಕಾಡಿನ ಹತ್ತಿರದಲ್ಲೇ ಹರಿಯುತ್ತಿದ್ದ ಭೀಮಾ ನದಿಗೆ ನೀರು ಕುಡಿಯಲೆಂದು ಬರುತ್ತಾನೆ. ಕುದುರೆಯ ಮೇಲೆ ಕುಳಿತುಕೊಂಡೇ ನದಿಯಲ್ಲಿ ಪ್ರಾಣಿಗಳು ಕುಡಿಯುವ ಹಾಗೆ ನೀರನ್ನು ಕುಡಿಯುತ್ತಾನೆ.ಈ ದೃಶ್ಯವನ್ನು ನದಿಯ ದಡದಲ್ಲಿ ಬೀಡುಬಿಟ್ಟಿದ್ದ ಶ್ರೀ ಅಕ್ಷೋಭ್ಯತೀರ್ಥರು ನೋಡುತ್ತಾರೆ. ಯತಿಗಳನ್ನು ನೋಡಿದ ಧೋಂಡೋಪಂಥನು ಶ್ರೀ ಅಕ್ಷೋಭ್ಯತೀರ್ಥ ಗುರುಗಳ ಆಶೀರ್ವಾದ ಪಡೆಯಲು ಬರುತ್ತಾನೆ. ಅಕ್ಷೋಭ್ಯತೀರ್ಥರುಕಿಂ ಪಶು ಪೂರ್ವದೇಹೇ? (ನೀನು ಹಿಂದಿನ ಜನ್ಮದಲ್ಲಿ ಪಶುವಾಗಿದ್ದೆಯಾ?) ಎಂದು ಧೋಂಡೋಪಂಥನಿಗೆ ಕೇಳುತ್ತಾರೆ. ಗುರುಗಳ ಈ ಪ್ರಶ್ನೆ ಧೋಂಡೋಪಂಥನ ಮನಸ್ಸನ್ನು ಜಾಗೃತಗೊಳಿಸಿತು. ತನ್ನ ಹಿಂದಿನ ಜನ್ಮದಲ್ಲಿ ಪಶುವಾಗಿ ಅವತರಿಸಿದ್ದು, ಆಚಾರ್ಯ ಮಧ್ವರ ಗ್ರಂಥಗಳನ್ನು ಬೆನ್ನ ಮೇಲೆ ಹೊತ್ತಿದು, ಆಚಾರ್ಯರ ಪಾಠಗಳನ್ನು ಆಲಿಸಿದ್ದು ಎಲ್ಲಾ ಸ್ಮರಣೆಗೆ ಬರುತ್ತದೆ. ಧೋಂಡೋಪಂಥನು ಭಕ್ತಿಯಿಂದ ನಮಸ್ಕರಿಸುತ್ತಾರೆ. ಅಕ್ಷೋಭ್ಯತೀರ್ಥರು ತಮ್ಮ ಉತ್ತರಾಧಿಕಾರಿಗೆ ಹುಡುಕುತ್ತಿದ್ದರು. ತಮಗಾದ ಸ್ವಪ್ನ ಸೂಚನೆಯಂತೆ ತಮ್ಮ ಹತ್ತಿರ ಬಂದು ಆಶೀರ್ವಾದ ಪಡೆದ ಧೋಂಡೋಪಂಥನ ಪ್ರಾರ್ಥನೆಯಂತೆ ಆಶ್ರಮ ನೀಡಿ ಜಯತೀರ್ಥರು ಎಂದು ನಾಮಕರಣ ಮಾಡುತ್ತಾರೆ.
ಶ್ರೀ ಜಯತೀರ್ಥರು ಶ್ರೀಮನ್ಯಾಯಸುಧಾ ಎಂಬ ಶ್ರೇಷ್ಠ ಗ್ರಂಥವನ್ನು ರಚಿಸಿದ್ದಾರೆ. ಜಯತೀರ್ಥರನ್ನು ಟೀಕಾರಾಯರು, ಟೀಕಾಚಾರ್ಯರೆಂದೂ ಕರೆಯುತ್ತಾರೆ. ಶ್ರೀಜಯತೀರ್ಥರು ತಮ್ಮ ಬಹಳಷ್ಟು ಟೀಕಾ ಗ್ರಂಥಗಳನ್ನು ಯರಗೋಳ ಗುಹೆಯಲ್ಲಿ ರಚಿಸಿದ್ದಾರೆ. ಶ್ರೀವ್ಯಾಸರಾಜರು ಜಯತೀರ್ಥರು ಕುರಿತು ಎದುರಾರೈ ಗುರುವೇ ಸಮರಾರೈ ಎಂದಿದ್ದಾರೆ. ಹರಿದಾಸರುಗಳು ಶ್ರೀಜಯತೀರ್ಥರನ್ನು ಹಾಡಿ ಹೊಗಳಿದ್ದಾರೆ. ಶ್ರೀವಿಜಯದಾಸರು ‘ಸಾರಿ ಭಜಿಸಿರೋ ಟೀಕರಾಯರಂಘಿಯ, ಘೊರಪಾರಕಾಂಬುಧಿಯ ದೂರ ಮಾಳ್ಪರಾ’ ಎಂದು ಹಾಡಿ ಹೊಗಳಿದ್ದಾರೆ. ಶ್ರೀಗಳವರು ಆಷಾಢ ಕೃಷ್ಣ ಪಂಚಮಿಯಂದು ವೃಂದಾವನಸ್ಥರಾದರು. ಕಲಬುರಗಿಯ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಅವರ ವೃಂದಾವನವಿದೆ. ಅವರ ಆರಾಧನೆಯ ದಿನವಾದ ಆಷಾಢ ಕೃಷ್ಣ ಪಂಚಮಿಯಂದು ನಾವೂ ಶ್ರೀಗಳ ಸ್ಮರಣೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
| ಎನ್.ಜಯಭೀಮ್ ಜೊಯ್ಸ್ ಶಿವಮೊಗ್ಗ