

ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭ ದಲ್ಲಿ ಭಾರತ-ಪಾಕ್ ನಡುವಿನ 1971ರ ಬಾಂಗ್ಲಾ ವಿಮೋಚನಾ ಯುದ್ಧದ 50ನೇ ವರ್ಷಾಚರಣೆಯೂ ನಡೆಯುತ್ತಿದೆ. ಈ ಯುದ್ಧ ದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಮಹತ್ವದ ಪಾತ್ರ ನಿರ್ವಹಿಸಿತ್ತು. ಇಂದು 89ನೇ ವಾಯುಪಡೆ ದಿನಾಚರಣೆ. ಹೀಗಾಗಿ ಈ ಸಲದ ದಿನಾಚರಣೆ ‘ಸ್ವರ್ಣಿಮ್ ವಿಜಯ ವರ್ಷ’ ಎಂದು ವಾಯುಪಡೆ ಘೋಷಿಸಿದೆ.
ಉತ್ತರಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆ ಇಂದು ‘ಸ್ವರ್ಣಿಮ್ ವಿಜಯ ವರ್ಷ’ ಆಚರಿಸಲು ಸಜ್ಜಾಗಿದೆ. ಭಾರತೀಯ ವಾಯುಪಡೆ ಬುಧವಾರವೇ ಈ ವಾಯುನೆಲೆಯಲ್ಲಿ 89ನೇ ವಾಯುಪಡೆ ದಿನ ಆಚರಿಸುವುದಕ್ಕೆ ಪೂರ್ವಭಾವಿಯಾಗಿ ಪೂರ್ಣಪ್ರಮಾಣದ ಕವಾಯತು ನಡೆಸಿತ್ತು. ಸಿಂಗಲ್ ಸೀಟ್ ಇಂಟರ್ಸೆಪ್ಟರ್ ಮತ್ತು ಏರ್ ಡಿಫೆನ್ಸ್/ಗ್ರೌಂಡ್ ಅಟ್ಯಾಕ್ ಜಿನ್ಯಾಟ್ ಏರ್ಕ್ರಾಫ್ಟ್ ಸೇರಿ ಅತ್ಯಾಧುನಿಕ ಯುದ್ಧೋಪಕರಣಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ವಾಯುಪಡೆ ದಿನಾಚರಣೆ ನಿಮಿತ್ತ ಹಿಂಡನ್ ವಾಯುನೆಲೆಯಲ್ಲಿ ಬೆಳಗ್ಗೆ 8ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಎಎನ್ 32 ವಿಮಾನದಿಂದ ಆಕಾಶ ಗಂಗಾ ತಂಡದ ಸ್ಕೈ ಡೈವರ್ಗಳು ಧ್ವಜದೊಂದಿಗೆ ಕೆಳಕ್ಕೆ ಜಿಗಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಸಮರ ವಿಮಾನಗಳ ಕಸರತ್ತು ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 10.52ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಮರ ವಿಮಾನಗಳ ವೈಮಾನಿಕ ಪ್ರದರ್ಶನ: ಹೊಸ ರಫೇಲ್ ಜೆಟ್ಗಳು, ಸುಖೋಯಿ-30 ಎಂಕೆಐ, ಲೈಟ್ ಕಾಂಬಾಟ್ ಏರ್ಕ್ರಾಫ್ಟ್ ತೇಜಸ್, ಮಿರಾಜ್-2000, ಮಿಗ್-29, ಜಾಗ್ವಾರ್ ಮತ್ತು ಇತರೆ ಸಮರ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಫ್ಲೈಪಾಸ್ಟ್ ಪ್ರದರ್ಶನದಲ್ಲಿ ಹೆಲಿಕಾಪ್ಟರ್ ಪಡೆ ಮಿಲ್7-ವಿ5 ಕಾಪ್ಟರ್ಗಳು, ಧ್ರುವ, ಚಿನೂಕ್, ಎಂಐ-35, ಅಪಾಚೆ ಕಾಪ್ಟರ್ಗಳು, ಸಿ-17 ಗ್ಲೋಬ್ವಾಸ್ಟರ್ಸ್, ಡೋರ್ನಿಯರ್, ಡಕೋಟಾ ಏರ್ಕ್ರಾಫ್ಟ್ಗಳು ಪ್ರದರ್ಶನ ನೀಡಲಿವೆ. ಸೂರ್ಯಕಿರಣ ಏರೋಬೇಟಿಕ್ ತಂಡ, ಸಾರಂಗ್ ಏರೋಬೇಟಿಕ್ ತಂಡಗಳಿಂದ ಫ್ಲೈಯಿಂಗ್ ಡಿಸ್ಪ್ಲೇ ಕೂಡ ಆಯೋಜಿತವಾಗಿವೆ.
ಹಿಂಡನ್ ವಾಯುನೆಲೆ ಯಾಕೆ?: ಭಾರತೀಯ ವಾಯುಪಡೆ ಈ ವರ್ಷದ ವಾಯು ಪಡೆ ದಿನ ಆಚರಿಸುವುದಕ್ಕೆ ಹಿಂಡನ್ ವಾಯುನೆಲೆ ಆಯ್ಕೆ ಮಾಡಲು ಕಾರಣವಿದೆ. 1971ರ ಯುದ್ಧದಲ್ಲಿ ಈ ವಾಯುನೆಲೆ ಪ್ರಮುಖ ಪಾತ್ರವಹಿಸಿತ್ತು. ಅದನ್ನು ಸ್ಮರಿಸಿಕೊಳ್ಳುವ ಸಲುವಾಗಿ ಈ ಸಲ ಇಲ್ಲೇ ಸ್ವರ್ಣಿಮ ವಿಜಯ ವರ್ಷ ಆಚರಿಸಲಾಗುತ್ತಿದೆ.
ಪ್ರದರ್ಶನದ ಕೇಂದ್ರ ಬಿಂದು ‘Gnat’: ಹಿಂಡನ್ ವಾಯುನೆಲೆಯಲ್ಲಿ ಯುದ್ಧೋಪಕರಣ ಪ್ರದರ್ಶನದ ಕೇಂದ್ರ ಬಿಂದು ’Gnat’ ವಿಮಾನ. ಇದು 1971ರ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಈ ವಿಮಾನ ಹಾರಾಟ ನಡೆಸಲ್ಲ. ಈ ಪ್ರದರ್ಶನದ ಮೂಲಕ ಹುತಾತ್ಮ ಯೋಧರು ಮತ್ತು ಸಮರವೀರರನ್ನು ಗೌರವಿಸಲಾಗುತ್ತದೆ ಎಂದು ವಾಯುಪಡೆ ತಿಳಿಸಿದೆ. ಈ ವಿಮಾನಕ್ಕೆ ಎಚ್ಎಎಲ್ ಅಜಿತ ಎಂದು ಹೆಸರು. ಅಜಿತ ಎಂದರೆ ಸಂಸ್ಕೃತದಲ್ಲಿ ಅಗೋಚರ ಅಥವಾ ಗೆಲ್ಲಲಾಗದ್ದು ಎಂಬ ಅರ್ಥವಿದೆ. ಈ ವಿಮಾನವು ಪಾಕಿಸ್ಥಾನ ಸೇನೆ ಬಳಸುತ್ತಿದ್ದ ಸಾಬರ್ ಜೆಟ್ (ಸಾಬರ್ ಸ್ಲೇಯರ್)ಗಳ ವಿರುದ್ಧ ಮೇಲುಗೈ ಸಾಧಿಸಿತ್ತು.