ಪ್ರಾತಃಸ್ಮರಣೀಯ ಶ್ರೀಪಾದರಾಜರು: ಇಂದು ಆರಾಧನೆ

Padaraja
Published on

| ಎನ್.ಜಯಭೀಮ್ ಜೊಯ್ಸ್ ಶಿವಮೊಗ್ಗ

‘ನನ್ನನ್ನು ನೋಡಿ, ಈ ದನಕರುಗಳನ್ನು ನೋಡಿ, ಆಕಾಶದಲ್ಲಿರುವ ಸೂರ್ಯನನ್ನು ನೋಡಿ. ನಿಮಗೆ ಅಬ್ಬೂರು ಎಷ್ಟು ದೂರವಿದೆಯೆಂಬುದು ತಿಳಿಯುತ್ತೆ’- ಇದು ಲಕ್ಷ್ಮೀನಾರಾಯಣನೆಂಬ ಬಾಲಕ ಶ್ರೀರಂಗಂನಿಂದ ಅಬ್ಬೂರಿಗೆ ಬರುತ್ತಿದ್ದ ಶ್ರೀಸ್ವರ್ಣವರ್ಣತೀರ್ಥರಿಗೆ ಕೊಟ್ಟ ಉತ್ತರ.

ಈ ಬಾಲಕನೇ ಇಂದು ಎಲ್ಲರಿಂದ ವಂದ್ಯರಾಗಿರುವ ಶ್ರೀಪಾದರಾಜರೆಂಬ ಮಹಾನುಭಾವರು. ಪ್ರಾತಃಕಾಲದಲ್ಲಿ ಇವರ ಸ್ಮರಣೆ ಬಂದರೆ ಸಾಕು ಸೊಗಸಾದ ಊಟದ ಅನುಗ್ರಹ ಅಂದು. ಇದು ಭಕ್ತರ ಅನುಭವದ ಮಾತು.

ಕರ್ನಾಟಕದ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಎಂಬ ಪುಟ್ಟ ಗ್ರಾಮದಲ್ಲಿ ಅರಳಿದ ಬಂಗಾರದ ಹೂವು ಶ್ರೀಪಾದರಾಜರು. ದೇಶದಲ್ಲೆಲ್ಲಾ ದ್ವೈತ ಸಿದ್ಧಾಂತದ ಪರಿಮಳ ಬೀರಿದ ಮಹಾನುಭಾವರು.

ಇವರ ಜನ್ಮನಾಮ ಲಕ್ಷ್ಮೀನಾರಾಯಣ. ಮುಳಬಾಗಿಲು ಮಠದ ಪರಂಪರೆಯಲ್ಲಿ ಬರುವ ಶ್ರೀಸ್ವರ್ಣವರ್ಣತೀರ್ಥ ಯತಿಗಳಿಂದ ಸನ್ಯಾಸಾಶ್ರಮ ದೀಕ್ಷೆ ಪಡೆದು ‘ಲಕ್ಷ್ಮೀನಾರಾಯಣ ತೀರ್ಥ’ರೆಂದು ನಾಮಕರಣ ಹೊಂದುತ್ತಾರೆ. ಶ್ರೀವಿಬುಧೇಂದ್ರ ತೀರ್ಥ ಶ್ರೀಪಾದಂಗಳವರಲ್ಲಿ ಹೆಚ್ಚಿನ ವೇದಾಂತ ಶಾಸ್ತ್ರಗಳ ಅಭ್ಯಾಸ ಮಾಡುತ್ತಾರೆ. ಅಂದಿನ ಶ್ರೀಉತ್ತರಾಧಿಮಠದ ಪೀಠಾಧಿಪತಿಗಳಾಗಿದ್ದ ಶ್ರೀ ರಘುನಾಥತೀರ್ಥರು ಇವರ ಮೇಧಾಶಕ್ತಿ ಮತ್ತು ಪ್ರಕಾಂಡ ವಿದ್ಯಾಪ್ರೌಢಿಮೆ ಮೆಚ್ಚಿ ಶ್ರೀಪಾದರಾಜರೆಂದು ಹೆಸರು ಕೊಟ್ಟು ಆಶೀರ್ವಾದ ಮಾಡುತ್ತಾರೆ.

ಮುಂದೆ ಸಕಲ ವಿದ್ಯಾಶಾಸ್ತ್ರ ಪಾರಂಗತರಾಗಿ ಶ್ರೀರಂಗಂಗೆ ಗುರುಗಳಾದ ಶ್ರೀಸ್ವರ್ಣವರ್ಣತೀರ್ಥರ ಬಳಿ ಹಿಂದಿರುಗುತ್ತಾರೆ. ಶ್ರೀಸ್ವರ್ಣವರ್ಣತೀರ್ಥರು ಶ್ರೀಪಾದರಾಜರನ್ನು ತಮ್ಮ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡುತ್ತಾರೆ. ಶ್ರೀಪದ್ಮನಾಭತೀರ್ಥರು ದೇಶ ಸಂಚಾರ ಮಾಡುತ್ತ ಮುಳಬಾಗಿಲು ಮಠಕ್ಕೆ ಬರುತ್ತಾರೆ. ಇಲ್ಲಿ ಒಂದು ವಿದ್ಯಾಪೀಠ ಸ್ಥಾಪನೆ ಮಾಡುತ್ತಾರೆ. ಈ ವಿದ್ಯಾಪೀಠದಲ್ಲಿ ಬಹಳ ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಇವರಲ್ಲಿ ಪ್ರಮುಖರಾದವರು ಶ್ರೀವ್ಯಾಸತೀರ್ಥರು. ಇವರು ಸುಮಾರು12 ವರ್ಷಗಳ ಕಾಲ ಶ್ರೀಪಾದರಾಜರಲ್ಲಿ ಅಭ್ಯಾಸ ಮಾಡುತ್ತಾರೆ. ಒಂದು ದಿನ ವ್ಯಾಸತೀರ್ಥರು ಅಂದಿನ ಪಾಠಗಳನ್ನು ಮನನ ಮಾಡಿ ನಿದ್ರೆಗೆ ಜಾರಿದಾಗ ದೊಡ್ಡ ಸರ್ಪವೊಂದು ಅವರನ್ನು ನುಂಗಲು ಬಂದಿತ್ತು. ಇದು ತಿಳಿದ ಶ್ರೀಪಾದರಾಜರು ಸರ್ಪದ ಭಾಷೆಯಲ್ಲಿ ಮಾತನಾಡಿ ಅದು ಹಿಂದೆ ಸರಿದುಹೋಗುವಂತೆ ಮಾಡುತ್ತಾರೆ.

ಶ್ರೀಪಾದರಾಜರು ಮತ್ತು ಶ್ರೀವ್ಯಾಸತೀರ್ಥರು ಒಟ್ಟಿಗೇ ಸಂಚಾರ ಮಾಡುತ್ತಾ ಭೀಮಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ರಂಗವಿಠಲ ಮತ್ತು ವೇಣುಗೋಪಾಲದೇವರ ವಿಗ್ರಹಗಳು ದೊರಕುತ್ತವೆ. ಶ್ರೀಪಾದರಾಜರು ರಂಗವಿಠಲ ಎಂಬ ಅಂಕಿತ ನಾಮದೊಂದಿಗೆ ಕೀರ್ತನೆಗಳನ್ನು ರಚಿಸಿದ್ದಾರೆ. ವಾಯುದೇವರ ಮೂರವತಾರ ವರ್ಣಿಸುವ ಕೀರ್ತನೆಯಾದ ಮಧ್ವನಾಮ ರಚಿಸಿದ ಮಹಾನುಭಾವರು. ಇವರ ಮಧ್ಯಾರಾಧನೆಯನ್ನು ಜ್ಯೇಷ್ಠ ಶುದ್ಧ ಚತುರ್ದಶಿಯಂದು ಅವರ ಮೂಲ ಬೃಂದಾವನವಿರುವ ಮುಳಬಾಗಿಲಿನಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ.

ನಮಃ ಶ್ರೀಪಾದರಾಜಾಯ / ನಮಸ್ತೇ ವ್ಯಾಸಯೋಗಿನೇ

ನಮಃ ಪುರಂದರಾರ್ಯಾಯ / ವಿಜಯರಾಜಾಯ ನಮಃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net