ಕಾರುಣ್ಯದಿಂದಲೇ ಕತ್ತಲೆ ಕಳೆದವರು: ಇಂದು ಶ್ರೀಧರ ಜಯಂತಿ

Sridhar swamy
Published on

ಶ್ರೀ ಶ್ರೀಧರ ಸ್ವಾಮಿಗಳು ವಿಶ್ವಸಂತ. ಅವರೊಂದು ಪವಿತ್ರ ದೈವಿಕಶಕ್ತಿ, ಕಾರುಣ್ಯಮೂರ್ತಿ. ಧರ್ಮಪ್ರಸಾರ, ತತ್ತ್ವಸಂದೇಶದ ಮೂಲಕ ಆಂತರ್ಯದ ಕತ್ತಲೆ ಕಳೆದ ಮಹಾನ್ ಸಂತ. ಅವರು ಮೂಲತಃ, ಈಗಿನ ಮಹಾರಾಷ್ಟ್ರಕ್ಕೆ ಸೇರಿದ ನಾಂದೇಡ್ ಜಿಲ್ಲೆಯ ದೇಗಲೂರು ಗ್ರಾಮದವರು. ಅಲ್ಲಿ ಪತಕಿ ಎಂಬ ಅಡ್ಡಹೆಸರಿನ ಒಂದು ಬ್ರಾಹ್ಮಣ ಮನೆತನವಿದೆ. ಅದಕ್ಕೆ ಸೇರಿದ ನಾರಾಯಣರಾಯರು ಮತ್ತು ಕಮಲಾಬಾಯಿ ದಂಪತಿಯ ಪುತ್ರರೇ ಲೋಕವಿಖ್ಯಾತರಾದ ಈ ಶ್ರೀಧರರು. ಈ ದಂಪತಿಯ ಇಬ್ಬರು ಗಂಡುಮಕ್ಕಳ ಪೈಕಿ ಎರಡನೆಯವನ ನಿಧನವಾಯಿತು. ಅದೇ ವೇಳೆಗೆ ವಿದ್ವಾಂಸರೊಬ್ಬರು ‘ನಿಮ್ಮ ವಂಶದ ಉದ್ಧಾರಕ್ಕಾಗಿ ಶ್ರೀ ದತ್ತಕ್ಷೇತ್ರವಾದ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯರ ಸೇವೆಮಾಡಿರಿ’ ಎಂದು ಹೇಳಿದರು. ಅಂತೆಯೇ ಗಾಣಗಾಪುರಕ್ಕೆ ಹೋಗಿ ವ್ರತವನ್ನು ಪೂರ್ಣಗೊಳಿಸಿ ಬಂದ ಕಮಲಾಬಾಯಿ ಗರ್ಭಿಣಿಯಾದರು, ಹಿರಿಯ ಸೋದರಿ ವಾಸವಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮಕ್ಕೆ ಪ್ರಸವಕ್ಕಾಗಿ ತೆರಳಿದರು. ಅಲ್ಲಿ ದತ್ತಜಯಂತಿಯ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಕೀಲಕ ಸಂವತ್ಸರದ ಮಾರ್ಗಶಿರ ಮಾಸದ ಪೌರ್ಣಮಿಯಂದು (07/12/1908) ಸೋಮವಾರ ರಾತ್ರಿ 07:28 ಕ್ಕೆ ದತ್ತಾತ್ರೇಯರ ಪಲ್ಲಕ್ಕಿ ಉತ್ಸವ ಮನೆಯ ಮುಂದೆ ಬಂದ ಸಮಯದಲ್ಲೇ ಕಮಲಾಬಾಯಿಯವರಿಗೆ ಪುತ್ರೋತ್ಸವವಾಯಿತು. ಆ ಪುತ್ರರೇ ದತ್ತಾತ್ರೇಯರ ಅವತಾರವಾದ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.

ದೀರ್ಘ ತಪಸ್ಸು: ತಪಸ್ಸು, ಧ್ಯಾನದ ಉತ್ತುಂಗ ತಲುಪುತ್ತಿದ್ದ ಶ್ರೀಧರ ಸ್ವಾಮಿಗಳು ಶಿವಮೊಗ್ಗ ಜಿಲ್ಲೆ ಸಾಗರ ಬಳಿಯ ವರದಪುರದಲ್ಲಿ ಆರು ವರ್ಷಗಳ ಏಕಾಂತದಲ್ಲಿದ್ದರು. ಈ ಸಂದರ್ಭದಲ್ಲಿ ಭಕ್ತರಿಗೆ ದರ್ಶನ ನೀಡದೆ, ಅಧ್ಯಾತ್ಮದ ಹೆಚ್ಚಿನ ಸಾಧನೆಯಲ್ಲಿ ತೊಡಗಿಕೊಂಡರು. ಈ ಮೊದಲು, ಸಜ್ಜನಗಢದಲ್ಲಿ ಗುರುಸೇವೆ ಮಾಡುತ್ತಿದ್ದ ಸಂದರ್ಭದಲ್ಲಿ ಹಲವು ಕಷ್ಟ, ಯಾತನೆಗಳನ್ನು ಸಹಿಸಿದ ಅವರು, ಎಷ್ಟೋ ವರ್ಷಗಳನ್ನು ಮಧುಕರಿಯಿಂದಲೇ ಕಳೆದರು. ಎಷ್ಟೋ ಬಾರಿ ಮಧುಕರಿ ಸಿಗದಿದ್ದಾಗ ಬರೀ ನೀರು ಕುಡಿದು ಅಥವಾ ಗಿಡದ ಎಲೆ ತಿಂದು ದಿನಕಳೆದರು. ಸಜ್ಜನಗಢಕ್ಕೆ ಬರುವ ಭಕ್ತಾದಿಗಳನ್ನು ಆದರದಿಂದ ಕಾಣುತ್ತಿದ್ದರು. ನಿರಂತರ ತಪಸ್ಸು, ಗುರುವನ್ನು ಕಾಣುವ ತವಕದ ಪರಿಣಾಮ ಸಮರ್ಥ ರಾಮದಾಸ ಸ್ವಾಮಿಗಳು ದರ್ಶನವಿತ್ತು, ಧರ್ಮ ಪ್ರಸಾರಕ್ಕಾಗಿ ದಕ್ಷಿಣ ದಿಕ್ಕಿಗೆ ತೆರಳುವಂತೆ ಆದೇಶಿಸಿದರು. ಅದರಂತೆ, ಅವರು ದಕ್ಷಿಣ ದಿಕ್ಕಿನೆಡೆಗೆ ಪಯಣ ಆರಂಭಿಸಿದಾಗ ಕರ್ನಾಟಕಕ್ಕೆ ಬಂದರು. ಗೋಕರ್ಣ, ಶಿರಸಿ, ಶಿಗೇಹಳ್ಳಿ ಸೇರಿ ಹಲವೆಡೆ ಧರ್ಮಬೋಧನೆ ಮಾಡಿದರು.

ಶ್ರೀಗುರುವಾಣಿ

  • ಆನಂದವೇ ನಾನು, ಆನಂದವೇ ನೀವು, ಆನಂದವೇ ಈ ಎಲ್ಲ ಜಗತ್ತು. ಈ ನಿರ್ವಿಕಲ್ಪ ಅದ್ವಿತೀಯ ಆನಂದದ ಹೊರತು ಇನ್ನೊಂದಿಲ್ಲ ಎಂಬುದೇ ಸತ್ಯ.
  • ಲೌಕಿಕ ವ್ಯವಹಾರದಲ್ಲೂ ಸಹ ಪ್ರೀತಿಗೆ ಸಮನಾದ ಬೇರೆ ಯಾವ ಬಂಧನವೂ ಇಲ್ಲ. ನಾನಾ ಪ್ರಕಾರಗಳ ಪಾಶಗಳಿದ್ದರೂ ಪ್ರೀತಿಪಾಶದಂತಹ ಬೇರೆ ಯಾವುದೇ ಪಾಶವಿಲ್ಲ. ಪ್ರೇಮಪಾಶದ ಲಕ್ಷಣ ಅತಿಶಯ ವಿಲಕ್ಷಣವಾದದ್ದು. ಪ್ರೇಮಪಾಶವು ಕಬ್ಬಿಣದ ಸರಳಿಗಿಂತಲೂ ಮಹಾಕಠಿಣ ವಾಗಿದೆ. ಪ್ರೇಮಪಾಶವನ್ನು ಮುರಿಯುವುದು ಯಾರಿಗೂ ಸಾಧ್ಯವಿಲ್ಲ.

ಭಾರತದ ಮಹತ್ವವನ್ನು ವಿವರಿಸಿದ ಪರಿ

ದೇಶ ಅಂದರೆ ಒಂದು ಆಶ್ರಯಸ್ಥಾನವೇ. ನಮ್ಮ ಭರತವರ್ಷದಲ್ಲಿ ದೇಶಭಕ್ತಿ ವಿಶೇಷವಾಗಿ ತೋರುತ್ತಿದೆ. ಭಾರತದ ಹಿರಿಮೆ, ದೇವತೆಗಳಿಗೂ ಒಲುಮೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂಬ ಮಾತಿನಂತೆ ತಾಯಿ ಮತ್ತು ತಾಯಿನಾಡು ಇವುಗಳ ಯೋಗ್ಯತೆ ಸ್ವರ್ಗಕ್ಕಿಂತಲೂ ಹೆಚ್ಚಿನದೇ ಸರಿ. ದೇವತೆಗಳು ಸಹಾ ಈ ಭಾರತವನ್ನು ಬಾಯ್ತುಂಬಾ ಹೊಗಳುವರು. ದೇವತೆಗಳೇ ಹೊಗಳುತ್ತಾರೆ ಎಂದಾದ ಮೇಲೆ ಮನುಷ್ಯರ ಪಾಡೇನು?

ಭಾರತ ಇಷ್ಟೊಂದು ಗೌರವಕ್ಕೆ ಪಾತ್ರವಾಗಿರುವು ದೇಕೆ? ತನ್ನ ಗುಣಗಳಿಂದ, ಯೋಗ್ಯತೆಯಿಂದ, ಮಾಹಾತ್ಮ್ಯಂದ. ದೇವತೆಗಳು ಕೂಡ ‘ಧನ್ಯಾಸ್ತು ತೇ ಭಾರತದಿಗ್ವಿಭಾಗೇ’- ಅಂದರೆ ಈ ಭಾರತದಲ್ಲಿ ಜನ್ಮ ಎತ್ತುವವರು ಧನ್ಯಧನ್ಯರು ಎಂದು ಹಾಡಿ ಪೊಗಳುವರು. ಭಾರತದ ಮಾಹಾತ್ಮ್ಯೇ, ಹೆಚ್ಚುಗಾರಿಕೆಯೇ ಅದಕ್ಕೆ ಕಾರಣ. ದೇವತೆಗಳು ಆಲೋಚನೆ ಮಾಡುವರು- ‘‘ಈ ಭಾರತವರ್ಷದಲ್ಲಿ ಜನಿಸಿರುತ್ತಾರಲ್ಲ, ಅವರು ಅಂಥದ್ದು ಏನು ಪುಣ್ಯ ಮಾಡಿರಲಿಕ್ಕೆ ಸಾಕು? ಈ ಭಾರತದೇಶದಲ್ಲಿ ಜನ್ಮ ಎತ್ತಿದ ಜನರ ಸೌಭಾಗ್ಯ ಅಹೋಭಾಗ್ಯ! ಆಹಾ! ಅವರು ಏನು ಪುಣ್ಯ ಮಾಡಿರುತ್ತಾರೋ? ಅದು ದೊಡ್ಡದಿರಬೇಕು. ಇಲ್ಲವಾದರೆ ಸಾಮಾನ್ಯ ಪುಣ್ಯಕ್ಕೆ ಅಲ್ಲಿ ಜನ್ಮ ಎತ್ತಲಿಕ್ಕೆ ಸಾಧ್ಯವಿಲ್ಲ. ಅಥವಾ- ಈ ಭಾರತವರ್ಷದಲ್ಲಿ ಜನ್ಮ ಎತ್ತಿದ ಮಾತ್ರಕ್ಕೇ ಶ್ರೀಹರಿಯು ಅಷ್ಟು ಸಂತುಷ್ಟನಾಗು ತ್ತಾನೋ ಹೇಗೆ? ಅದು ಕೂಡ ಸಂಭವನೀಯವಾದುದೇ ಸರಿ. ಪರಮಾತ್ಮನ ಸೇವೆಗಾಗಿ ಎಲ್ಲ ವಿಧದಿಂದಲೂ ಯೋಗ್ಯವಾಗಿ ರುವ ಅಥವಾ ಸಾಧನವಾದ ಭಾರತ ವರ್ಷದಲ್ಲಿ ಎತ್ತಿರುವ ಜನ್ಮ ಯಾರಿಗೆ ಲಭಿಸಿರುವುದೋ ಅವರು ನಿಜವಾಗಿಯೂ ಧನ್ಯರು. ಆ ಬಯಕೆ ನಮಗೂ ಇದೆ. ನಾವು ಕೂಡ ಅಲ್ಲಿ ಜನಿಸಿ ಜ್ಞಾನ, ವೈರಾಗ್ಯ, ಭಕ್ತಿ ಈ ಭಾಗ್ಯಗಳನ್ನು ಮನದಣಿಯೇ ಅನುಭವಿಸಬೇಕು ಎಂಬುವಂತಹ ಬಲವತ್ತಾದ ಇಚ್ಛೆ ನಮ್ಮಲ್ಲಿಯೂ ಇದೆ’. ದೇವತೆಗಳಿಗೂ ಭಾರತದಲ್ಲಿ ಜನ್ಮ ಎತ್ತಲಿಕ್ಕೆ ಇಷ್ಟು ಪ್ರಿಯವಾದುದು ಎಂದಾದರೆ ಮನುಷ್ಯರಿಗೆ ಇರುವುದು ಸಹಜವಲ್ಲವೇ? ಈ ಭಾರತವರ್ಷಕ್ಕೆ ‘ಅಜನಾಭವರ್ಷ’ ಎಂದು ಮೊದಲನೇ ಹೆಸರು. ಅದಕ್ಕಿಂತಲೂ ಮೊದಲು ‘ಹಿಮವರ್ಷ’. ಇದಕ್ಕೆ ‘ಆರ್ಯಾವರ್ತ’ ಎಂಬುದಾಗಿಯೂ ಒಂದು ಹೆಸರಿದೆ. ‘ಹಿಂದುಸ್ಥಾನ’ ಎಂಬುದು ಜನಜನಿತವಾಗಿರುವಂತಹ ಹೆಸರು.

ಇಲ್ಲೇ ಹುಟ್ಟಿದ ಜನರಿಗೆ ಈ ಭಾರತ ವರ್ಷದ ಆಕರ್ಷಣೆಯು ಇರುವುದು ಹೆಚ್ಚಿನದಲ್ಲ. ಆದರೆ ಬೇರೆ ದೇಶದವರೂ ಭಾರತವನ್ನು ಹೊಗಳಿರುವುದನ್ನು ಗಮನಿ ಸಿದರೆ ಭಾರತಲ್ಲಿರುವ ಮಹತ್ವ ಸ್ಪಷ್ಟವಾಗುತ್ತದೆ. ‘ಭಾರತವು ತತ್ತ್ವಜ್ಞಾನದ ತಾಯ್ನಾಡು’ ಎಂದಿದ್ದಾರೆ ಪಾಶ್ಚಾತ್ಯರು. ಮ್ಯಾಕ್ಸ್ ಮುಲ್ಲರ್ ಎಂಬ ಪಾಶ್ಚಾತ್ಯ ವಿದ್ವಾಂಸ 1858ರಲ್ಲಿ ವಿಕ್ಟೋರಿಯಾ ರಾಣಿಗೆ ಕಳಿಸಿದ ಪತ್ರದಲ್ಲಿ, ಭಾರತವನ್ನು ಬಾಯ್ತುಂಬಾ ಹೊಗಳಿದ್ದಾನೆ. ಪರದೇಶದವರೂ ಭಾರತವನ್ನು ಎಷ್ಟು ಶ್ರದ್ಧೆಭಕ್ತಿಯಿಂದ ಮನಮುಟ್ಟಿ ಹೊಗಳುತ್ತಾರೆ ಎಂಬುದಕ್ಕೆ ಈ ಪತ್ರವೇ ಒಂದು ಸಾಕ್ಷಿಯಾಗಿರುವುದು. ಸಂಸ್ಕಾರ ಏನೂ ಇರದೇ ಭಾರತದಲ್ಲಿ ಜನಿಸಿದ ಮಾತ್ರದಿಂದ ನಾವು ಮುಕ್ತಿಭಾಗಿಗಳೂ, ನರಶ್ರೇಷ್ಠರೂ, ಮೋಕ್ಷಾ ವಲಂಬಿಗಳೂ, ದೈವೀ ಸಂಪತ್ತಿನಿಂದ ಕೂಡಿಕೊಂಡಿರುವ ಸಮೃದ್ಧ ಜೀವನದ ಭಾಗ್ಯಶಾಲಿಗಳೂ ಆಗಿ ಬಾಳಬೇಕು.

(ಶ್ರೀಧರ ವಚನಾಮೃತ- ಧಾರೆ 14’ ಕೃತಿಯ ಆಯ್ದ ಭಾಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net