

ಇಂದು ನನ್ನ ನೆನಪಿನಲ್ಲಿ ಅಪ್ಪನ ಚಿತ್ರವಿರುವುದು ಅವರ ಬಗ್ಗೆ ಅಮ್ಮ ಹೇಳುತ್ತಿದ್ದ ಮಾತುಗಳಷ್ಟೇ. ಮದುವೆ ಬಳಿಕ ಅಪ್ಪನ ರಾಜಕೀಯ ಚಟುವಟಿಕೆ ಕಡಿಮೆಯಾಗಿತ್ತು. ಅವರು ಪ್ರವಾಸದಲ್ಲಿದ್ದಾಗ ಅಮ್ಮನಿಗೆ ಬರೆದ ಪತ್ರಗಳು ಅನೇಕ ವರ್ಷ ನಮ್ಮ ಬಳಿಯಿತ್ತು. ಒಂದು ಪತ್ರದಲ್ಲಿ ‘ರಾಮಮನೋಹರನನ್ನು ಕನ್ನಡ ಶಾಲೆಗೆ ಸೇರಿಸು’ ಎಂದು ಬರೆದಿದ್ದರು. ನಾವು ಬೆಂಗಳೂರಿನಲ್ಲಿ ವಾಸವಿದ್ದುದರಿಂದ ಸಮೀಪದಲ್ಲಿ ಎಲ್ಲೂ ಕನ್ನಡ ಶಾಲೆಗಳೇ ಇರಲಿಲ್ಲ. ಹೀಗಾಗಿ ನನ್ನ ಶಿಕ್ಷಣವೆಲ್ಲ ಆಂಗ್ಲ ಮಾಧ್ಯಮದಲ್ಲೇ ನಡೆಯಿತು. ನಾನೊಮ್ಮೆ ಅಪ್ಪನ ಆಷ್ ಟ್ರೇ ಒಡೆದಾಗ ಸಿಟ್ಟಿಗೆದ್ದ ಅಪ್ಪ ಕೈತಿರುವಿ ಗದರಿದ್ದು ಇನ್ನೂ ನೆನಪಿದೆ. ಹೀಗಾಗಿ ಒಡೆದ ಅಪ್ಪನ ಆಷ್ ಟ್ರೇ ಇನ್ನೂ ನನ್ನ ಬಳಿ ಇದೆ. ಅಪ್ಪ ತೀರಿಕೊಂಡ ಸುಮಾರು 10-12 ವರ್ಷ ನಮ್ಮ ಮನೆಗೆ ಬಂದವರೆಲ್ಲರೂ ಗೋಪಾಲಗೌಡರ ನೆನಪಿಗೆಂದು ಅವರು ಬಳಸುತ್ತಿದ್ದ ಅನೇಕ ವಸ್ತುಗಳನ್ನು ಕೊಂಡೊಯ್ದರು. ಅಪರೂಪದ ಫೋಟೋಗಳು, ಅವರ ಲೇಖನ, ಪತ್ರಗಳು ಹೀಗೆ ಎಲ್ಲವೂ ಬೇರೆಯವರ ಪಾಲಾಯಿತು. ನಮ್ಮ ಕುಟುಂಬದ ಒಂದು ಫೋಟೋ ಮಾತ್ರ ಉಳಿದಿದೆ.
1972ರ ಚುನಾವಣೆಯಲ್ಲಿ ಕೋಣಂದೂರು ಲಿಂಗಪ್ಪ ಸ್ಪರ್ಧಿಸಿದಾಗ ನನಗೆ ನಾಲ್ಕು ವರ್ಷ. ಬಳಿಕ ಕಡಿದಾಳ್ ದಿವಾಕರ್, ಪಟಮಕ್ಕಿ ರತ್ನಾಕರ್... ಹೀಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿದವರೆಲ್ಲರೂ ನಮ್ಮ ಮನೆಗೆ ಬಂದು ಅಪ್ಪನ ಫೋಟೋಗೆ ಪೂಜೆ ಮಾಡ್ತಿದ್ರು. ಹೀಗೆ ಬಂದವರೆಲ್ಲರೂ ರಾಮಮನೋಹರನಿಗೆ 18 ವರ್ಷವಾದ ಬಳಿಕ ತೀರ್ಥಹಳ್ಳಿ ಕ್ಷೇತ್ರ ಆತನಿಗೆ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ರು. ನನಗೆ 18 ವರ್ಷವಾದ ಬಳಿಕ ಯಾರೂ ನಮ್ಮನೆ ಹತ್ತಿರ ಬರಲೇ ಇಲ್ಲ! 2004ರಲ್ಲಿ ಅನಿವಾರ್ಯ ಸಂದರ್ಭದಲ್ಲಿ ಚುನಾವಣೆ ಎದುರಿಸಬೇಕಾಯಿತು. ಆದರೆ ಅಷ್ಟರಲ್ಲಾಗಲೇ ಕ್ಷೇತ್ರದ ಜನರು ಗೋಪಾಲಗೌಡರನ್ನೇ ಮರೆತಿದ್ದರು ಎಂಬುದು ಫಲಿತಾಂಶ ಬಂದಾಗಲೇ ನನಗೆ ತಿಳಿದಿದ್ದು. ಮತ್ತೆಂದೂ ನಾನು ಚುನಾವಣೆ ಬಗ್ಗೆ ಯೋಚಿಸಲೇ ಇಲ್ಲ. ಚುನಾವಣೆಯ ದೃಷ್ಟಿಯಲ್ಲಿ ಹೇಳುವುದಾದರೆ ಪ್ರತಿ 20 ವರ್ಷಕ್ಕೆ ಹೊಸಪೀಳಿಗೆ ಸೃಷ್ಟಿಯಾಗುತ್ತದೆ. ಗೋಪಾಲಗೌಡರನ್ನು ನಂತರದ ಪೀಳಿಗೆಗೆ ತಲುಪಿಸುವಲ್ಲಿ ನಮ್ಮ ಹಿರಿಯರು ಸೋತಿದ್ದಾರೆ. ಭೂಒಡೆತನ ಪಡೆದವರೇ ಮರೆತ ಮೇಲೆ ಉಳಿದವರು ನೆನಪಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆಯೇ ತಪ್ಪು.
| ರಾಮಮನೋಹರ (ಗೋಪಾಲಗೌಡರ ಪುತ್ರ)
| ಕಿಮ್ಮನೆ ರತ್ನಾಕರ್ ಮಾಜಿ ಸಚಿವ
ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವವನ್ನು ಸೋಮವಾರ ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ವಿಧಾನಸೌಧ ಎದುರಿನ ಶಾಂತವೇರಿ ಗೋಪಾಲಗೌಡ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ಹಾಗೂ ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಆಚರಣೆ ಸಮಿತಿಗಳು ಈ ಕಾರ್ಯಕ್ರಮ ಆಯೋಜಿಸಿವೆ.
ಶಾಂತವೇರಿ ಗೋಪಾಲಗೌಡರು.
ಆರಗದವರು ಸುಲಭಕ್ಕೆ ಅರಗದವರು
ಹೊಯ್ಸಳನ ನೆನಪಿನವರು
ತೀರ್ಥಹಳ್ಳಿಯವರು-ಹಳಿ ತಪ್ಪದವರು
ಶಾಸ್ತ್ರಿ, ನರಸಿಂಹರ ಶಿಷ್ಯರು.
ಕಳ್ಳ-ಸುಳ್ಳರ ಹಿಂಡು,
ದುಡ್ಡಿನ -ಧಿಮಾಕಿನವರ ಕಂಡು
ಶಾಂತವೇರಿ, ಶಾಂತ-ವೈರಿಯಾದದ್ದುಂಟು.
ಗತ್ತು-ಗೈರತ್ತು-ಗಮ್ಮತ್ತು ಎಲ್ಲ ಗೊತ್ತಿತ್ತು
ಅವರು ದೇವರಲ್ಲ, ತಾಜಾ ಮನುಷ್ಯ ಹೌದು.
ಬಡವರಿಗೆ ಹೃದಯ ಮೀಸಲಿತ್ತು.
ನೇಗಿಲು, ಲೇಖನಿ, ಅಕ್ಷರ, ನೆಲ ಉತ್ತಿ ಬರೆದಿದ್ದು
ಬಡವರೊಡಲಿನ ಅಗ್ನಿಗೆ ಅವರ ತಲೆ ಹೊತ್ತಿತ್ತು.
‘ಉಳುವವನೇ ಹೊಲದೊಡೆಯ’ ಕರ್ನಾಟಕ
ಅವರ ತಲೆ ಮುತ್ತಿತ್ತು, ಎದೆಯೂ ಹೊತ್ತಿತ್ತು.
ಅಭಿಮಾನ ಧನಿಕ, ಫಲದ ಚಾಲಕ ಕೊನೆತನಕ ಚಿಂತಕ.
ಪ್ರಾಮಾಣಿಕ, ಬುದ್ಧಿ ವೈಜ್ಞಾನಿಕ.
ಬಡವರೊಡಲಿನ ಧ್ಯಾನದಲಿ ಮುನಿಯಾಗಿದ್ದು
ಆಗಾಗ ಶಿಖೆಯನುಗುಳುತ್ತಿದ್ದು
ಒಮ್ಮೆನೇ ಒತ್ತಡಕೆ....ಎತ್ತರಕ್ಕೇರಿ
ಉರಿದೊಡೆದ ಜ್ವಾಲಾಮುಖಿ!
ಸಾಗರದ ಅಲೆಗಳಪ್ಪಳದ ಸಪ್ಪಳ
ಅಡಗಿ ಹೋಗಿತ್ತು.
ಸಿಡಿದ ಕಿಡಿಗಳು ಈಗಲೂ ಕೆಂಪಗಿವೆ
ಲೋಹದ ತಂತಿಯ...
ಶಾಖದ ಬೆಂಕಿ-
ಆರಿಲ್ಲ ಜೋಕೆ.
ಗೋಪಾಲ, ಭೂಪಾಲನಾದಾಗ
ಭಂಡ-ತುಂಡು ಮಂಡಲಾಧಿಪರ
ಆರೋಪದ ಪ್ರಲಾಪ ವಿಶ್ವವ್ಯಾಪಿ.
ಅವರು,
ಕಡಿದು ನಗುವವರಲ್ಲ ಗಹಗಿಸಿ
ಅಳುವವರೂ ಅಲ್ಲ ಬಿಕ್ಕಳಿಸಿ
ಇಡಿ ಹಿಡಿದು ಅಲ್ಲಾಡಿಸುವ ಹವ್ಯಾಸಿ.
ಸಂಗೀತ-ಸಾಹಿತ್ಯ-ಯಕ್ಷಗಾನ-ಜಾಗರ
ತತ್ವ-ಸಿದ್ಧಾಂತ-ಜಿಜ್ಞಾಸೆ-ಸಮಾಜವಾದ
ಸತ್ಯ-ಶಿವ-ಸುಂದರಕೆ ಅವರೆದೆಯ ಮಂದಾರ
ಇವಕಾಸರೆ ವೈದ್ಯ ಚಂದ್ರಶೇಖರ.
ಗುರಿ ತೋರಿದರು ಗಾಂಧಿ, ರಾಮಮನೋಹರ
ಧೀರತೆಯ ಎರೆದರು ಕಾಳಿಂಗಯ್ಯನ ರಾಘವೇಂದ್ರರಾಯ.
ನೀರೆರೆದು ಬೆಳೆಸಿದರು ಮಾರುತಿ ಮುದ್ರಣಾಲಯದ ಉಡುಪಿ ರಾಜಗೋಪಾಲಾಚಾರ್ಯ.
ಅನ್ಯಾಯಗಳೆದುರು ಪ್ರತಿಭಟನೆ,
ಉದ್ವೇಗ-ಉದ್ರೇಕ
ಬುಸುಗುಟ್ಟರೂ ಕಚ್ಚದಿರುವ ವಿವೇಕ
ಸತ್ಯದಾವೇಶಗೊಂಡಾಗ,
ವಿಧಾನಸೌಧ-ಗಡಗಡ.
ಅವರಿದ್ದಾಗ, ಬಿದ್ದಾಗ, ಸೋತಾಗ, ಸತ್ತಾಗ
ಕಾಣದೇ ಇದ್ದವರೆಲ್ಲ, ಅಷ್ಟೇ ಅಲ್ಲ,
ಅವರ ಜುಬ್ಬದ ಖಾಲಿ ಜೇಬಿಗೆ-
-ಜೀವ ಬಿಟ್ಟೋಡಿದ ಜುಗ್ಗರೆಲ್ಲ,
ಮಾತಾಡಿಸದ ಮೂಕರೆಲ್ಲ,
ಈಗ, ಅವರ ಹೆಸರಿನಲೆ ಬಸುರಾಗ ಹೊರಟಿದ್ದಾರೆ ಜೋಕೆ!
ನನಗೊಬ್ಬಗೇ ಇರುವುದೀ ಅಧಿಕಾರ ಹೇಳಲಿಕ್ಕೆ.
| ಕೋಣಂದೂರು ಲಿಂಗಪ್ಪ, ಮಾಜಿ ಶಾಸಕ (ಗೋಪಾಲಗೌಡರ ಶಿಷ್ಯ)