ಕೈಹಿಡಿದು ಮುನ್ನಡೆಸ ಬನ್ನಿ…; ಇಂದು ವಿಶ್ವ ಹಿರಿಯ ನಾಗರಿಕರ ದಿನ

Senior citizens day
Published on

ಬೆಂಗಳೂರು: ಹಿರಿಯರು ಇರುವ ಮನೆ ಸದ್ವಿಚಾರ, ಸದ್ಗುಣಗಳಿರುವ ತಾಣ. ಶಿಸ್ತು, ಸಂಯಮ, ಸಂಪ್ರದಾಯ, ಸಂಸ್ಕೃತಿಯನ್ನು ಬೆಳೆಸುವ ಹಿರಿತಲೆಗಳು ಕುಟುಂಬಕ್ಕೆ ಕಲಶಪ್ರಾಯ. ಇಂಥ ಅಪರೂಪದ ವಿಶೇಷತೆಗಳುಳ್ಳ ಸಾಮಾಜಿಕ ವ್ಯವಸ್ಥೆ ಭಾರತದ ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಕಾಣಬಹುದು.

ಇತ್ತೀಚಿಗೆ ಬದಲಾದ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ವಿಭಕ್ತ ಕುಟುಂಬಗಳೇ ವಿಜೃಂಭಿಸುತ್ತಿವೆ. ಪತಿ-ಪತ್ನಿ, ಮಕ್ಕಳು ಮಾತ್ರ ಕುಟುಂಬ ಎಂದು ಭಾವಿಸುವ ಈಗಿನ ಯುವಪೀಳಿಗೆಯ ಮನಸ್ಥಿತಿಯಿಂದಾಗಿ ಆ ಮನೆಯಲ್ಲಿರಬೇಕಾದ ಹಿರಿಯರಿಗೆ ಜಾಗ ಇಲ್ಲದಂತಾಗುತ್ತಿದೆ. ಇದ್ದರೂ ಆ ಹಿರಿ ಜೀವಿಗಳಿಗೆ ಸಿಗಬೇಕಾದ ಗೌರವ, ಸ್ಥಾನಮಾನಕ್ಕೆ ಧಕ್ಕೆ ಉಂಟಾಗುತ್ತಿರುವ ಪರಿಣಾಮ ಅವರು ಖಿನ್ನತೆಗೆ ಒಳಾಗುತ್ತಿದ್ದಾರೆ. ಮಾನಸಿಕ ಕಾಯಿಲೆ ಸಹಿತ ಇನ್ನಿತರ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ವೃದ್ಧರು ಕುಟುಂಬಕ್ಕೆ ಭಾರ ಎಂಬ ಕಾರಣಕ್ಕೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಉದಾಹರಣೆಗಳೂ ಇವೆ. ಇಂತಹ ಸಮಸ್ಯೆಗಳನ್ನು ಸಂಧ್ಯಾಕಾಲದಲ್ಲಿ ಎದುರಿಸುತ್ತಿರುವವರಿಗೆ ಕೈಹಿಡಿದು ನಡೆಸಲು ಸರ್ಕಾರ ಊರುಗೋಲು ಆಗಬೇಕಿದೆ ಎಂದು ನೈಂಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಧಾ ಮೂರ್ತಿ ಹಾಗೂ ಸೈಕಿಯಾಟ್ರಿ ಪೊ›ಫೆಸರ್, ನಿಮ್ಹಾನ್ಸ್​ನ ಜೀರಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಪಿ.ಟಿ. ಶಿವಕುಮಾರ್ ತಿಳಿಸಿದ್ದಾರೆ.

ವಿಶ್ವ ಹಿರಿಯ ನಾಗರಿಕರ ದಿನ (ಅ.1) ಪ್ರಯುಕ್ತ ‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರೂ ತಜ್ಞರು, ವೃದ್ಧರ ಕುರಿತು ಸರ್ಕಾರ ಹಾಗೂ ಸಮಾಜ ವಹಿಸಬೇಕಾದ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾಯ್ದೆ ಜಾರಿಗೆ ಆದ್ಯತೆ ಸಿಗಲಿ: ಕರ್ನಾಟಕವೂ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಿರುವ ಕಾಯ್ದೆ ಕಾಗದದ ಮೇಲಷ್ಟೇ ಉಳಿದಿದೆ. ಈ ಕಾಯ್ದೆ ಜಾರಿ ಮಾಡುವ ಹೊಣೆಯನ್ನು ನಿರ್ದಿಷ್ಟ ಇಲಾಖೆ/ಸಂಸ್ಥೆಗೆ ವಹಿಸಬೇಕಿದೆ. ಜನರಲ್ಲಿ ಅರಿವು ಮೂಡಿಸುವ ಜತೆಗೆ ಒಂದಿಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಿರಿಯರಿಗೆ ಸೌಲಭ್ಯಗಳನ್ನು ಒದಗಿಸಲು ಆಸ್ಥೆ ವಹಿಸಬೇಕಿದೆ. ಹಿರಿಯ ನಾಗರಿಕರ ಮೇಲಾಗುವ ದೌರ್ಜನ್ಯ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿವಾರಿಸಲು ಪೊಲೀಸ್ ಇಲಾಖೆ ಸಹಕಾರ ಅಗತ್ಯ. ಇವು ಪೂರ್ಣವಾಗಿ ಅನುಷ್ಠಾನಕ್ಕೆ ಬಂದಲ್ಲಿ ಹಿರಿಯ ನಾಗರಿಕರಿಗೆ ಒಂದಿಷ್ಟು ಸಾಂತ್ವನ ಸಿಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

ವಯೋ ಮಾನಸ ಸಂಜೀವಿನಿ: ಮಾನಸಿಕ ಆರೋಗ್ಯ ಸಮಸ್ಯೆ, ಮರೆವು, ಖಿನ್ನತೆ, ಹಠಮಾರಿತನ, ಆನಾರೋಗ್ಯ ಸೇರಿ ನಾನಾ ಸಮಸ್ಯೆಗಳನ್ನು ಹೊಂದಿರುವ ಹಿರಿಯ ನಾಗರಿಕರನ್ನು ಯಾವ ರೀತಿ ನಿಭಾಯಿಸಬಹುದು ಎಂಬ ಬಗ್ಗೆ ಸಲಹೆ ನೀಡಲು ‘ವಯೋ ಮಾನಸ ಸಂಜೀವಿನಿ’ ಆನ್​ಲೈನ್ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಯೂಟ್ಯೂಬ್ ಚಾನಲ್ ಮೂಲಕ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಲಹೆಗಳನ್ನು ತಜ್ಞರು ಮಾಹಿತಿ ನೀಡಲಿದ್ದಾರೆ.

ಗೃಹ ಆರೋಗ್ಯ: ಅಸಾಂಕ್ರಾಮಿಕ ರೋಗಗಳ ಪತ್ತೆಗೆ ಆರೋಗ್ಯ ಇಲಾಖೆ ರೂಪಿಸಿರುವ ‘ಗೃಹ ಆರೋಗ್ಯ’ ಯೋಜನೆಯ ಭಾಗವಾಗಿ ಮರೆವಿನ ಸಮಸ್ಯೆ ಹಾಗೂ ಬುದ್ಧಿಮಾಂದ್ಯತೆ ಸೇರಿ ಮಾನಸಿಕ ಆರೋಗ್ಯ ಸಮಸ್ಯೆ ಪ್ರಕರಣಗಳ ಪತ್ತೆಗೂ ಆದ್ಯತೆ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ಐದು ಲಕ್ಷ ಮಂದಿ ಮರೆವಿನ ಸಮಸ್ಯೆಯೊಂದಿಗೆ ಜೀವಿಸುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ 2036ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ, ರಾಜ್ಯದಲ್ಲಿ ಮರೆವು ಸಮಸ್ಯೆ ಹೊಂದಿರುವವರಲ್ಲಿ ಶೇ.10 ಮಂದಿಗೆ ಮಾತ್ರ ರೋಗನಿರ್ಣಯ ಮತ್ತು ಚಿಕಿತ್ಸೆ ದೊರೆಯುತ್ತಿದೆ. ಹಾಗಾಗಿ ಗೃಹ ಆರೋಗ್ಯ ಯೋಜನೆ ಮೂಲಕ ಇಂತಹ ಸಮಸ್ಯೆಗಳ ಪತ್ತೆಗೂ ಕ್ರಮ ವಹಿಸಲಾಗುವುದು.

ಟೆಲಿ ಮನಸ್: ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ಟೆಲಿ ಮನಸ್ ಸಹಾಯವಾಣಿ 3.50 ಲಕ್ಷಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದೆ. ಇವರಲ್ಲಿ ವೃದ್ಧಾಪ್ಯದಲ್ಲಿ ಕಾಡುವ ಮರೆವು, ಖಿನ್ನತೆ, ಮಾನಸಿಕ ಸಮಸ್ಯೆಗಳಿಗೆ ಬಹಳಷ್ಟು ಮಂದಿಗೆ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ನೈಂಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಧಾ ಮೂರ್ತಿ ತಿಳಿಸಿದರು.

ನಿವೃತ್ತಿ ಜೀವನಕ್ಕೆ ಸಜ್ಜಾಗಿ: ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ನಿವೃತ್ತಿ ಜೀವನವನ್ನು ಉತ್ತಮವಾಗಿ ನಡೆಸಲು ರಿಟೈರ್​ವೆುಂಟ್ ಪೂರ್ವದಲ್ಲೇ ಸಿದ್ಧತೆ ಆರಂಭಿಸಬೇಕು. ನಿವೃತ್ತಿ ಬಳಿಕ ಹೊಂದಿಷ್ಟು ಹೊಂದಾಣಿಕೆ ಮಾಡಿಕೊಂಡಲ್ಲಿ ಪಿಂಚಣಿ ಹಣದಲ್ಲೇ ಸಂಧ್ಯಾಕಾಲ ಭಾರ ಎನಿಸದು. ಇತ್ತೀಚೆಗೆ ಕೆಲ ಕಂಪನಿಗಳಲ್ಲಿ ನಿವೃತ್ತಿ ಮುಂಚೆಯೇ ತರಬೇತಿ ನೀಡಲಾಗುತ್ತಿದೆ. ಇದು ಇನ್ನಷ್ಟು ವ್ಯಾಪಕಗೊಂಡಲ್ಲಿ ನಿವೃತ್ತರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಸೈಕಿಯಾಟ್ರಿ ಪೊ›ಫೆಸರ್, ನಿಮ್ಹಾನ್ಸ್ ನ ಜೀರಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಪಿ.ಟಿ. ಶಿವಕುಮಾರ್ ಸಲಹೆ ನೀಡಿದರು.

ಕ್ರಿಯಾ ಯೋಜನೆ: ಹಿರಿಯ ನಾಗರಿಕರನ್ನು ಕಾಡುವ ಮರೆವಿನ (ಈಛಿಞಛ್ಞಿಠಿಜಿಚ) ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಹಾಗೂ ಕಳಂಕ ತಾರತಮ್ಯ ತೊಡೆದು ಹಾಕಲು ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಹಾಗೂ ಡಿಮೆನ್ಶಿಯಾ ಇಂಡಿಯಾ ಅಲೈಯನ್ಸ್ ಸಹಯೋಗದಲ್ಲಿ ಮರೆವಿನ ಕಾಯಿಲೆ ಹೊಂದಿದವರ ಆರೈಕೆ ಮಾಡುವವರಿಗೆ ಸಲಹೆ ನೀಡಲು ಹಾಗೂ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಲು ಕ್ರಿಯಾ ಯೋಜನೆ ರೂಪಿಸಿದೆ. ಮರೆವಿನ ಕಾಯಿಲೆಯನ್ನು ತಗ್ಗಿಸಲು ರೋಗನಿರ್ಣಯ ಪ್ರೋತ್ಸಾಹಿಸುವ ಅಗತ್ಯವಿದೆ. ಇದರಿಂದ ಆರಂಭಿಕ ಹಂತದಲ್ಲೇ ರೋಗ ಲಕ್ಷಣಗಳನ್ನು ಆಧರಿಸಿ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ವೈದ್ಯರು, ಸಲಹೆಗಾರರು ಮತ್ತು ಮನ:ಶಾಸ್ತ್ರಜ್ಞರಿಗೆ ಅಗತ್ಯ ತರಬೇತಿ ಒದಗಿಸಲು ಇಲಾಖೆ ಮುಂದಾಗಿದೆ.

ಹಿರಿಯರ ಸಹಾಯವಾಣಿ

  • ನಿಂದನೆ, ಕಿರುಕುಳ ಹಾಗೂ ಶೋಷಣೆಗೆ ಒಳಗಾದವರಿಗೆ ಸಹಾಯಹಸ್ತ 
  • ನಿರ್ವಹಣೆ ಕಾಯ್ದೆಯಡಿ ನ್ಯಾಯಮಂಡಳಿ ಮೂಲಕ ನೆರವು
  • ಒಂಟಿತನ ಮತ್ತು ಖಿನ್ನತೆಗೆ ಮಾನಸಿಕ ಸ್ವಾಸ್ಥ್ಯದ ಸಮಾಲೋಚನೆ
  • ಕಾಣೆಯಾದ ಹಿರಿಯರ ಪತ್ತೆ 
  • ಕಾನೂನು ಸಲಹೆ, ಆಪ್ತಸಮಾಲೋಚನೆ 
  • ನಿರ್ಗತಿಕ ಹಿರಿಯರ ರಕ್ಷಣೆ, ಭದ್ರತೆ 
  • ಪಿಂಚಣಿ/ಸಬ್ಸಿಡಿ ಪಡೆಯಲು ಸಹಾಯ್ಞ
  • ವೈದ್ಯಕೀಯ ಮಾರ್ಗದರ್ಶನ

ಬಂದಿದೆ ಜಿಪಿಎಸ್ ಪೆಂಡೆಂಟ್: ಮರೆವು ಸೇರಿ ವಿವಿಧ ಕಾರಣಗಳಿಂದ ತಪ್ಪಿಸಿಕೊಳ್ಳುವ ಹಿರಿಯ ನಾಗರಿಕರ ಪತ್ತೆಗೆ ಈಗ ಜಿಪಿಎಸ್ ಟ್ರಾ್ಯಕಿಂಗ್ ಆಧಾರಿತ ಪೆಂಡೆಂಟ್ ಹಾಗೂ ವಾಚ್​ಗಳು ಲಭ್ಯ ಇವೆ. ಇವುಗಳನ್ನು ಸಮಸ್ಯೆಯುಳ್ಳವರಿಗೆ ಅಳವಡಿಸುವುದರಿಂದ ಅವರು ತಪ್ಪಿಸಿಕೊಂಡಾಗ ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಜಿಪಿಎಸ್ ಟ್ರಾ್ಯಕಿಂಗ್ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು. ಇದನ್ನು ಬಳಸುವವರು ಸಂಬಂಧಪಟ್ಟ ಸರ್ಕಾರಿ ಸಂಸ್ಥೆ, ಎನ್​ಜಿಓಗಳೊಂದಿಗೆ ನೋಂದಣಿ ಮಾಡಿಸಿ ಕೊಳ್ಳುವುದರಿಂದ ಇನ್ನೂ ಸುಲಭವಾಗಲಿದೆ.

ಸಹಾಯವಾಣಿ

  • ಟೆಲಿ ಮನಸ್ 24 ಗಂಟೆಗೆ ನಿರಂತರ ಸೇವೆಗಾಗಿ ಟೋಲ್ ಫ್ರೀ ನಂ: 14416 ಅಥವಾ ವೆಬ್​ಸೈಟ್ https://telemanas.mohfw.gov.in ಸಂಪರ್ಕಿಸಬಹುದು.
  • ಹಿರಿಯರ ಸಹಾಯವಾಣಿ 1090 ವೆಬ್​ಸೈಟ್ http://www.stopelderabuse.in
  • ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ 8ಪಿ6, 3ನೇ ‘ಎ’ ಅಡ್ಡರಸ್ತೆ, ಕಸ್ತೂರಿನಗರ, ಬೆಂಗಳೂರು - 560043 ದೂ: 080-42426565 ವೆಬ್​ಸೈಟ್ http://www.nightingaleseldercare.com
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net