ಸಂಧ್ಯಾ ಸಮಯ, ಬೇಕು ಆಶ್ರಯ: ಸುಶಿಕ್ಷಿತರು, ಶ್ರೀಮಂತರ ಮನೆಗಳಲ್ಲೇ ಹಿರಿಯರ ಮೇಲೆ ದೌರ್ಜನ್ಯ

Senior
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಬದುಕಿನ ಸಂಧ್ಯಾಕಾಲದಲ್ಲಿ ಆಶ್ರಯ ನೀಡಬೇಕಾದ ಮಕ್ಕಳೇ ದೌರ್ಜನ್ಯ ಎಸಗುತ್ತಿದ್ದಾರೆ... ನಂಬಿದ ಆಪ್ತರೇ ಹಣದಾಸೆಗೆ ಮೋಸ ಮಾಡಿದರು... ಮಕ್ಕಳು ದೂರವಾಗುತ್ತಿದಂತೆ ಮೊಮ್ಮಕ್ಕಳೊಂದಿಗಿನ ಆಟ, ಆ ನಗುವಿನಿಂದ ವಂಚಿತರಾದೆವು...

ಇದು ಹಿರಿಯ ನಾಗರಿಕರಲ್ಲಿನ ನೋವಿನ ಮಾತುಗಳು. ಇತ್ತೀಚೆಗೆ ಹೆಚ್ಚು ಶಿಕ್ಷಿತ ವರ್ಗದಲ್ಲಿಯೇ ಇಂತಹ ಸಂಗತಿಗಳು ಹೆಚ್ಚಾಗುತ್ತಿವೆ. ವಿದ್ಯಾವಂತ ಮತ್ತು ಸುಶಿಕ್ಷಿತ ವರ್ಗದಲ್ಲಿ ಹಿರಿಯರ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ.

ಮಕ್ಕಳು ಆಸ್ತಿ ಹಿಡಿತ ಸಾಧಿಸಲು ಅಥವಾ ತಮ್ಮ ಭಾಗ ಕೈತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಹಿಂಸೆ ಕೊಡುತ್ತಾರೆ. ಅಥವಾ ಮಕ್ಕಳ ನಡುವಿನ ಕಿತ್ತಾಟಕ್ಕೆ ಹಿರಿಯರಿಗೆ ಮಾನಸಿಕ ಹಿಂಸೆ ಕೊಡಲಾಗುತ್ತದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎರಡೂ ಕಡೆಯವರನ್ನು ಕರೆದು ಸಮಾಲೋಚನೆ ನಡೆಸಿದಾಗ ಅಂತಿಮವಾಗಿ ಆಸ್ತಿ ಅಥವಾ ಹಣಕಾಸಿನ ವಿಚಾರಕ್ಕೆ ಬಂದು ನಿಲ್ಲುತ್ತದೆ ಎಂಬುದು ಆಪ್ತ ಸಮಾಲೋಚಕರ ಅಭಿಪ್ರಾಯ. ಇದಲ್ಲದೆ, ಹಿರಿಯ ನಾಗರಿಕರು ತಮ್ಮ ಜೀವನಾಂಶಕ್ಕೆ ಪಡೆಯುವ ಮನೆ ಬಾಡಿಗೆ, ಭೋಗ್ಯದ ಹಣ, ಹೂಡಿಕೆ ಇನ್ನಿತರ ಹಣಕಾಸಿನ ವ್ಯವಹಾರದಲ್ಲಿ ಸಿಲುಕಿ ತೊಂದರೆಗೆ ಒಳಗಾಗುತ್ತಿದ್ದಾರೆ. ಹಿರಿಯ ನಾಗರಿಕರು ಎಂಬ ಕಾರಣಕ್ಕೆ ಬಾಡಿಗೆ ಹಣ ಕೊಡದೆ ಇರುವುದು, ಸಾಲ ವಾಪಸ್ ಕೊಡದೆ ಹಿಂಸೆ ಕೊಡುವ ಪ್ರಸಂಗಗಳು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿವೆ. ಮಕ್ಕಳೊಂದಿಗೆ ಉತ್ತಮ ಸಂಬಂಧ ಇದ್ದರೂ ನೌಕರಿ, ಉದ್ಯಮ, ಮಕ್ಕಳ ಶಿಕ್ಷಣ ಇನ್ನಿತರ ಉದ್ದೇಶಕ್ಕೆ ತಂದೆ-ತಾಯಿಯಿಂದ ಮಕ್ಕಳು ದೂರವಾಗುತ್ತಿದ್ದಾರೆ. ಇದರಿಂದ ಹಣ, ಆಸ್ತಿ ಎಲ್ಲವೂ ಇದ್ದರೂ ಹಿರಿಯ ವಯಸ್ಸಿನಲ್ಲಿ ಒಂಟಿಯಾಗಿ ಜೀವನ ನಡೆಸುವ ಸಂಕಷ್ಟದ ದಿನಗಳನ್ನು ಸಾಕಷ್ಟು ಮಂದಿ ಎದುರಿಸುತ್ತಾರೆ. ಲಾಭದ ಉದ್ದೇಶಕ್ಕೆ ಅಪರಾಧಿಗಳು ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿ ಕೊಲೆ, ಹಲ್ಲೆ, ಬೆದರಿಕೆ, ಸುಲಿಗೆ ಮುಂತಾದ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಹಿರಿಯ ಸಹಾಯವಾಣಿ ಆಪ್ತ ಸಮಾಲೋಚಕರು ಹೇಳುತ್ತಾರೆ.

ಬೆಂಗಳೂರು ಸುರಕ್ಷಿತ ಸ್ಥಳ: ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ ರಾಜ್ಯದಲ್ಲಿ 85 ಹಿರಿಯ ನಾಗರಿಕರ ಕೊಲೆ ನಡೆದಿವೆ. 84 ಕೊಲೆ ಯತ್ನ, 87 ಹಲ್ಲೆ, 120 ಕಳ್ಳತನ, 189 ವಂಚನೆ ಪ್ರಕರಣಗಳು ನಡೆದಿವೆ. ಆದರೆ, ಇತರ ರಾಜ್ಯಗಳಿಗೆ ಮತ್ತು ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮತ್ತು ಅದರಲ್ಲಿಯೂ ಬೆಂಗಳೂರು ನಗರ ಹಿರಿಯ ನಾಗರಿಕರಿಗೆ ಸುರಕ್ಷಿತವಾಗಿದೆ.

ಸಮಾಲೋಚಕರ ಸಲಹೆಗಳು

  • ಒಂಟಿತನ ಕಾಡಿದರೆ ಡೇ ಕೇರ್ ಸೆಂಟರ್​ಗೆ ಸೇರುವುದು ಒಳಿತು
  • ತಮ್ಮ ಶಕ್ತಿಗೆ ತಕ್ಕಂತೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವುದು
  • ಆದಷ್ಟು ಆಸ್ತಿಯ ಮೇಲಿನ ಅಧಿಕಾರ ಬಿಟ್ಟಕೊಡಬಾರದು
  • ಸ್ಥಳೀಯ ಪೊಲೀಸ್ ಠಾಣೆಯ ನಂಬರ್ ಸಂಗ್ರಹಿಸಿ ಇಟ್ಟುಕೊಳ್ಳಿ

10 ಸಾವಿರ ರೂ. ಪಡೆಯಬಹುದು: ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ಪ್ರಕಾರ ಕೋರ್ಟ್​ಗೆ ತಂದೆ-ತಾಯಿ ಅರ್ಜಿ ಸಲ್ಲಿಸಬಹುದು. ಈ ಪ್ರಕಾರ ಮಕ್ಕಳಿಂದ ತಿಂಗಳಿಗೆ ಗರಿಷ್ಠ 10 ಸಾವಿರ ರೂ. ಪಡೆಯಬಹುದು.

  • ನೆರವಿಗಾಗಿ ಕರೆ ಮಾಡಿ:  ಪೊಲೀಸ್ ಕಂಟ್ರೋಲ್ ರೂಮ್ 112
  • ಹಿರಿಯರ ಸಹಾಯವಾಣಿ: 080-2294 3226, 080-2335 2833

ಹಿರಿಯರಿಗೆ ಖುಷಿಪಡಿಸಲು ಆಗದಿದ್ದರೆ ಅಥವಾ ಒಂದು ಹೊತ್ತು ಊಟ ಕೊಡದಿದ್ದರೂ ಪರವಾಗಿಲ್ಲ. ಆದರೆ, ಅವರ ಮನಸ್ಸಿಗೆ ನೋವು ಮಾಡಬೇಡಿ. ನೆಮ್ಮದಿ ಕೊಡಿ. ಎಲ್ಲರಿಗೂ ಮುಪ್ಪು ಬರಲಿದೆ. | ಹಿರಿಯರ ಸಹಾಯವಾಣಿ ಆಪ್ತ ಸಮಾಲೋಚಕರು

ಮೌಖಿಕ ದೂರುಗಳೇ ಹೆಚ್ಚು: ಒಂದು ವರ್ಷದಲ್ಲಿ ಹಿರಿಯರ ಸಹಾಯವಾಣಿಗೆ 8,701 ಕರೆಗಳನ್ನು ಮಾಡಿ ದೂರು ನೀಡಲಾಗಿದೆ. ಇದಲ್ಲದೆ, 205 ಹಿರಿಯರು ಲಿಖಿತ ದೂರು ನೀಡಿದ್ದು, ಈ ಪೈಕಿ 120 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಬೆಸ್ಕಾಂ, ಪೆನ್ಶನ್, ರಸ್ತೆ ಗುಂಡಿ, ಕೌಟುಂಬಿಕ ತೊಂದರೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮೌಖಿಕವಾಗಿ 8701 ದೂರು ನೀಡಲಾಗಿದೆ. ಇದರಲ್ಲಿ 768 ಕೇಸುಗಳನ್ನು ಸಂಬಂಧಪಟ್ಟವರಿಗೆ ಕರೆ ಮಾಡಿ ತಿಳಿಸಲಾಗಿದೆ. 90 ಮುಕ್ತಾಯವಾಗಿವೆ. ಉಳಿದ ಪ್ರಕರಣಗಳ ಸಮಾಲೋಚನೆ ನಡೆಯುತ್ತಿವೆ ಎಂದು ಹಿರಿಯ ಸಹಾಯವಾಣಿ ಆಪ್ತ ಸಮಾಲೋಚಕರು ಮಾಹಿತಿ ನೀಡಿದ್ದಾರೆ.

ಹಿರಿಯ ನಾಗರಿಕರ ಪ್ರಶಸ್ತಿಗೆ ಆರು ಜನ, ಒಂದು ಸಂಸ್ಥೆ ಆಯ್ಕೆ

ಬೆಂಗಳೂರು: ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸರ್ಕಾರದ ವತಿಯಿಂದ ನೀಡುವ ಪ್ರಶಸ್ತಿಗೆ ಆರು ಜನ ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಮಡಿಕೇರಿಯ ಎಂ.ಎಂ. ಬೋಪಯ್ಯ (ಶಿಕ್ಷಣ), ಧಾರವಾಡದ ಡಾ. ಬಿ.ಕೆ. ಬಸವರಾಜ ರಾಜಋಷಿ (ಸಾಹಿತ್ಯ), ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೀಕರ್ (ಕಲೆ), ಕೊಪ್ಪಳದ ಡಾ. ಕೆ.ಜಿ. ಕುಲಕರ್ಣಿ (ಸಮಾಜಸೇವೆ), ಮೈಸೂರಿನ ವಿಜಯ ರಮೇಶ್ (ಕ್ರೀಡೆ), ಬೆಂಗಳೂರಿನ ಡಾ. ಕೋಡೂರು ವೆಂಕಟೇಶ್ (ಕಾನೂನು) ಮತ್ತು ಶಿವಮೊಗ್ಗದ ಸಾವಿತ್ರಮ್ಮ ರಾಮಶರ್ಮ ಸೇವಾ ಟ್ರಸ್ಟ್ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಒಳಗೊಂಡಿದೆ. ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ಅರ್ಹರನ್ನು ಆಯ್ಕೆ ಮಾಡಿದೆ ಎಂದು ಸಚಿವ ಹಾಲಪ್ಪ ಆಚಾರ್ ವಿವರಿಸಿದರು.

ಅನುದಾನ ಹೆಚ್ಚಳ: ರಾಜ್ಯದ 35 ವೃದ್ಧಾಶ್ರಮಗಳಿಗೆ ಸರ್ಕಾರದ ವತಿಯಿಂದ ನೀಡುತ್ತಿದ್ದ ವಾರ್ಷಿಕ 8 ಲಕ್ಷ ರೂ.ಗಳ ಅನುದಾನವನ್ನು 12 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 65 ವರ್ಷ ಮೀರಿದ 41.61 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನವನ್ನು 1200 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net