ಸ್ವದೇಶಿ ವಿಚಾರಧಾರೆಗಳ ಚಿಂತಕ: ಸ್ವಾವಲಂಬಿ ರಾಷ್ಟ್ರ, ಗೋ ಹತ್ಯೆ ನಿಷೇಧ ಪ್ರತಿಪಾದಿಸಿದ ನಾಯಕ

Rajiv Dixti
Published on
ಭಾರತವನ್ನು ಭ್ರಷ್ಟಾಚಾರಮುಕ್ತ ಸ್ವಾವಲಂಬಿ ಸದೃಢ ದೇಶವನ್ನಾಗಿಸುವ ಕನಸು ರಾಜೀವ್ ದೀಕ್ಷಿತ್ ಅವರದ್ದಾಗಿತ್ತು. ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತ ಮತ್ತು ಅತ್ಯವಶ್ಯಕ. ನವೆಂಬರ್ 30 ಅವರ ಜನ್ಮ ದಿನ. ಈ ದಿನವನ್ನು ಭಾರತದಲ್ಲಿ ಸ್ವದೇಶೀ ದಿನವನ್ನಾಗಿ ಆಚರಿಸಲಾಗುತ್ತದೆ.

| ಮಯೂರಲಕ್ಷ್ಮೀ

ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ರಕ್ಷಣೆಯ ದಿಕ್ಕಿನಲ್ಲಿ ಹೊಂಗಿರಣವಾಗಿ ಮೂಡಿಬಂದವರು ರಾಷ್ಟ್ರಬಂಧು ರಾಜೀವ ದೀಕ್ಷಿತ್. ಉತ್ತರ ಪ್ರದೇಶದ ಆಲಿಘಡ್ ಸಮೀಪದ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ಅವರು ಗ್ರಾಮದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಮುಗಿಸಿದ ನಂತರ ಇಂಜಿನಿಯರಿಂಗ್ ಪದವಿ ಪಡೆದರು. ಸಿ.ಎಸ್.ಐ.ಆರ್ ಸಂಸ್ಥೆಯಲ್ಲಿ ವಿಜ್ಞಾನಿ ಹುದ್ದೆ ಸಿಕ್ಕರೂ ದೇಶಹಿತಕ್ಕಾಗಿ ಪದತ್ಯಾಗ ಮಾಡಿದರು.

ಪೊ›ಫೆಸರ್ ಧರ್ಮಪಾಲ್ ಮತ್ತು ಶತಾಯುಷಿ ಸುಧಾಕರ ಚತುರ್ವೆದಿ ಅವರ ಮಾರ್ಗದರ್ಶನದಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ಅಧ್ಯಯನ ಮಾಡಿದರು. ಪ್ರಾಚೀನ ಸಂಸ್ಕೃತಿ ಮತ್ತು ಜ್ಞಾನದಿಂದ ವಿಶ್ವಗುರುವಿನ ಸ್ಥಾನದಲ್ಲಿದ್ದ ಭಾರತ ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಲು ಕಾರಣಗಳನ್ನು ಹುಡುಕತೊಡಗಿದರು. ಆರ್ಥಿಕ ಬಿಕ್ಕಟ್ಟು, ಭ್ರಷ್ಟಾಚಾರ ಮತ್ತು ಸಾಂಸ್ಕೃತಿಕ ಪತನದೊಂದಿಗೆ ವಿದೇಶೀ ವ್ಯಾಮೋಹಗಳಂತಹ ಮೂಲ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿ ನವಭಾರತದ ಪರಿಕಲ್ಪನೆಯನ್ನು, ಅಂಕಿ-ಅಂಶಗಳೊಂದಿಗೆ ಐತಿಹಾಸಿಕ ಸತ್ಯಗಳನ್ನು ಎದುರಿಟ್ಟರು.

ಐನೂರು ವರ್ಷಗಳ ಹಿಂದಿನಿಂದಲೂ ಭಾರತದ ಮೇಲೆ ಆಕ್ರಮಣಗೈದ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷರ ದಾಳಿಗಳನ್ನು ಎದುರಿಸಲಾಗದೆ ತತ್ತರಿಸಿದ್ದ ದೇಶ ಸ್ವಾತಂತ್ರ್ಯ ಪಡೆದ ನಂತರವೂ ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿಲ್ಲವೆಂಬ ಅಂಶವನ್ನು ಮನಗಂಡ ಅವರು ನೈಜ ಇತಿಹಾಸದ ಪರಿಶೋಧನೆಯ ಕಾರ್ಯದಲ್ಲಿ ತೊಡಗಿದರು.

ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ಬಂದು ಇಲ್ಲಿನ ಗುರುಕುಲಗಳಲ್ಲಿ ಸಂಸ್ಕೃತ, ಗಣಿತ, ವಿಜ್ಞಾನ, ಆಯುರ್ವೆದಗಳ ಅಧ್ಯಯನ ಮಾಡಲಾಗುತ್ತಿತ್ತು. ಆದರೆ, ಬ್ರಿಟಿಷರ ದಾಸ್ಯದಿಂದ ಮುಕ್ತವಾದ ಭಾರತದಲ್ಲಿ ಅಭಿವೃದ್ಧಿಯ ಹಾದಿಗೆ ಕಲ್ಲಾಗಿ ಕಾಡುತ್ತಿದ್ದದ್ದು ಮೆಕಾಲೆ ಮನಸ್ಸುಗಳು ಎನ್ನುವುದನ್ನು ಅರಿತರು. ವಿದೇಶೀ ಬ್ಯಾಂಕ್​ಗಳಿಂದ ಪಡೆದ ಕೋಟಿ ಕೋಟಿ ರೂಪಾಯಿಗಳ ಸಾಲದ ಫಲವಾಗಿ ಎದುರಾದದ್ದು ರೂಪಾಯಿಯ ಅಪಮೌಲ್ಯ. ಆರಂಭದಲ್ಲಿ ಭಾರತಕ್ಕೆ ಬಂದಿದ್ದ ಕೆಲವೇ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಸಂಖ್ಯೆ ಬೆಳೆಯುತ್ತಾ, ರಕ್ತಬೀಜಾಸುರರಂತೆ ದೇಶದ ಅರ್ಥವ್ಯವಸ್ಥೆಯ ಮೇಲೆ ನಡೆಸುತ್ತಿರುವ ಆಕ್ರಮಣದ ಅರಿವು ರಾಜೀವರಿಗಾಯಿತು. ಅಂತಹ ಷಡ್ಯಂತ್ರದ ವಿರುದ್ಧ ರಾಜೀವರು ಆಜಾದಿ ಬಚಾವೋ ಅಂದೋಲನ ಸಂಸ್ಥೆಯ ಮುಖ್ಯ ಪ್ರಭಾರಿಗಳಾಗಿ ಕಾರ್ಯನಿರ್ವಹಿಸಿದರು.

ದೇಶದ ಬೆನ್ನೆಲುಬಾದ ರೈತನ ಉಳಿವಿಗಾಗಿ ವಿಶ್ವವ್ಯಾಪಾರ ಒಕ್ಕೂಟದ ನಿಲುವಿನ ವಿರುದ್ಧ, ಗ್ಯಾಟ್ ಒಪ್ಪಂದದ ವಿರುದ್ಧ, ವಿದೇಶೀ ಕಂಪನಿಗಳ ವಿರುದ್ಧ ಹೋರಾಟ ನಡೆಸಿದರು. ದೇಶವನ್ನು ರಕ್ಷಿಸಲು ಸಾಧ್ಯವಿರುವುದು ಕೇವಲ ಸ್ವದೇಶೀ ಚಿಂತನೆ ಮತ್ತು ಭಾರತೀಯತೆಯಿಂದ ಎಂದರಿತು ಈ ಬಗೆಗೆ ಜಾಗೃತಿ ಮೂಡಿಸಲಾರಂಭಿಸಿದರು. ದೇಶದ ಉದ್ದಗಲಕ್ಕೂ ಸಂಚರಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉಪನ್ಯಾಸಗಳಿಂದ ಎಚ್ಚರಿಸಿದರು.

ಗೋ ಹತ್ಯೆ ನಿಷೇಧ, ಬ್ರಿಟಿಷರು ಬಿಟ್ಟು ಹೋದ ಅರ್ಥವಿಲ್ಲದ ಕೆಲವು ಕಾನೂನುಗಳ ಮಾರ್ಪಾಟು, ಟ್ಯಾಕ್ಸ್ ಪದ್ಧತಿಯಲ್ಲಿನ ಬದಲಾವಣೆ, ಸಂಪತ್​ಶಕ್ತಿಗಳ ವಿಕೇಂದ್ರೀಕರಣ, ಕೃಷಿ, ವನ, ಪಶುಪಾಲನ ವ್ಯವಸ್ಥೆಗಳಲ್ಲಿ ಬದಲಾವಣೆ ಮುಂತಾದವು ಅವರ ಪ್ರಮುಖ ವಿಚಾರಗಳು. ವಿದೇಶೀ ಸಾಲದಿಂದ ದೇಶವನ್ನು ಮುಕ್ತಗೊಳಿಸಲು ಕಪ್ಪು ಹಣ ವಾಪಸಾತಿಗಾಗಿ ಹಸ್ತಾಕ್ಷರ ಸಂಗ್ರಹ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಾದಿಯಲ್ಲಿ ಲೋಕ್​ಪಾಲ್​ನಂತಹ ವ್ಯವಸ್ಥೆಯ ಅವಶ್ಯಕತೆ, ನಾಗರಿಕರ ಹಕ್ಕುಗಳ ಕುರಿತು ರೈಟ್ ಟು ರಿಕಾಲ್ ಮುಂತಾದ ಆಲೋಚನೆಗಳನ್ನು ಮುಂದಿಟ್ಟರು.

ಉಪನ್ಯಾಸಗಳಿಂದ ಯುವಜನತೆಯ ಮನಸ್ಸನ್ನು ಆಕರ್ಷಿಸಿದ್ದ ಸ್ವದೇಶೀ ಐಕಾನ್ ರಾಜೀವ್ ದೀಕ್ಷಿತರು ಯುವಕರಿಗೆ ದೇಶವನ್ನು, ನಾಡು-ನುಡಿಯನ್ನು ಪ್ರೀತಿಸಲು ಕಲಿಸಿದರು. ಅಪರಿಮಿತ ಮೇಧಾಶಕ್ತಿ, ಸರಳತೆ, ವಿಷಯ ಮಂಡನೆಯ ಗಾಂಭೀರ್ಯ, ಪ್ರವಾಸಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯೊಂದಿಗೆ ಸರಳತೆ ಅವರ ಮೇರು ವ್ಯಕ್ತಿತ್ವದ ಕುರುಹುಗಳಾಗಿದ್ದವು. ಬಾಬಾ ರಾಮದೇವರ ಭಾರತ್ ಸ್ವಾಭಿಮಾನ್ ಟ್ರಸ್ಟ್​ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡು ಸತತವಾಗಿ ಭಾರತದೆಲ್ಲೆಡೆ ಸಂಚರಿಸಿ ತಮ್ಮ ಜ್ಞಾನದ ದರ್ಶನ ನೀಡಿದರು. 2010ರ ನವೆಂಬರ್ 30ರಂದು ಛತ್ತೀಸಗಢದ ಭಿಲಾಯ್ ಸಮೀಪದಲ್ಲಿ ಭಾರತ ಸ್ವಾಭಿಮಾನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ ವಿಧಿವಶರಾದರು.

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net