ಆನ್​ಲೈನ್ ಶಿಕ್ಷಣದ ಸಾಧಕ-ಬಾಧಕಗಳು

Edu 1
Published on

ಕರೊನಾ ಕಾಲದಲ್ಲಿ ಶಿಕ್ಷಣದ ಸ್ವರೂಪ ಬದಲಾಗಿದೆ. ಮಕ್ಕಳ ಪೂರ್ಣ ಮನೋವಿಕಾಸ ಸಾಧ್ಯವಾಗುತ್ತಿಲ್ಲ. ಆನ್​ಲೈನ್ ಶಿಕ್ಷಣ ಪರ್ಯಾಯವಾಗಿ ಬಳಕೆಯಾಗುತ್ತಿದೆಯಾದರೂ ಅದು ಏಕಾಗ್ರತೆಗೆ ಅಡ್ಡಿ ಮತ್ತು ದೀರ್ಘಾವಧಿಗೆ ಪೂರಕವಲ್ಲ ಎಂಬ ಅಭಿಪ್ರಾಯ ಪಾಲಕರಿಂದ, ಶಿಕ್ಷಣ ತಜ್ಞರಿಂದ ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಕಳವಳಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

| ಡಾ.ಎ. ಶ್ರೀಧರ

ಕಳೆದ ಹದಿನೈದು ತಿಂಗಳುಗಳಿಂದ ಶಾಲಾ ವಯಸ್ಸಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳೆಲ್ಲವೂ ನಡೆಯುತ್ತಿರುವುದು ಮನೆಯ ನಾಲ್ಕುಗೋಡೆಗಳೊಳಗಷ್ಟೇ. ಒಂದು ಅಂದಾಜಿನ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ವಿಶ್ವದಾದ್ಯಂತ ಕೋವಿಡ್ ಕಾರಣದಿಂದ ಶಾಲೆಯತ್ತ ಸುಳಿಯಲು ಸಾಧ್ಯವಾಗಿಲ್ಲವಂತೆ! ಅಂದಮೇಲೆ ಶಾಲೆ ಮೂಲಕ ಗಳಿಸುವ ತಿಳಿವಳಿಕೆ ಜೊತೆಗೆ ಮನೋಸಾಮಾಜಿಕ ಬೆಳವಣಿಗೆ ಹೆಚ್ಚಿಸುವಂಥ ಸನ್ನಿವೇಶಗಳ ಪ್ರಭಾವ ಇಲ್ಲದಂತಾಗಿದೆ. ಇದರ ಪರಿಣಾಮಗಳು ತಕ್ಷಣದಲ್ಲಿ ಊಹಿಸುವುದು ಕಷ್ಟ. ಆದರೂ ಕಲಿಯುವವರ-ಕಲಿಸುವವರ ನಡುವಿನ ಸಂಪರ್ಕ ಸಂಪೂರ್ಣವಾಗಿ ಮುರಿಯದೆ ಮುಂದುವರಿಯುವಂತೆ ಮಾಡಿದೆ ಡಿಜಿಟಲ್ ಮಾಧ್ಯಮದ ಸೌಲಭ್ಯ, ಸಲಕರಣೆಗಳು. ಇದರಿಂದಾಗಿ ತರಗತಿಯ ಕಲಿಕೆಯ ರೀತಿನೀತಿಗಳೆಲ್ಲ ಬದಲಾಗಿದ್ದು, ವಯಸ್ಸಿಗೆ ಅನುಗುಣವಾದ ಕಲಿಯುವ ಸಾಮರ್ಥ್ಯ, ಆಸಕ್ತಿ, ಅವಕಾಶಗಳ ಮೇಲೆ ಹಿಡಿತ ಸಾಧ್ಯವಾಗಿಲ್ಲ. ಆದರೂ ಕಲಿಯುವವರಿಗೆ, ಕಲಿಸುವವರಿಗೆ ಪರ್ಯಾಯ ವ್ಯವಸ್ಥೆಯಾಗಿ ಆನ್​ಲೈನ್ ಶಿಕ್ಷಣ ಒದಗಿಬಂದಿರುವುದು ಸಂತೋಷದ ಸಂಗತಿ. ಹೊಸದೇ ಸ್ವರೂಪದ ಈ ಕಲಿಕಾ ಮಾಧ್ಯಮದ ಇತಿಮಿತಿಗಳು ಯಾವವು ಎನ್ನುವುದಿನ್ನೂ ಸ್ಪಷ್ಟವಿಲ್ಲ. ಬಹುಮುಖ್ಯವಾಗಿ ಬಡವ-ಬಲ್ಲಿದರ ಮಕ್ಕಳ ಶೈಕ್ಷಣಿಕ ಅಂತರವನ್ನಿದು ಹಿಗ್ಗಿಸಲಿರುವುದರಿಂದ ತಂತ್ರಜ್ಞಾನ ವಂಚಿತರಿಗೆ ಇದೊಂದು ಮಹಾಶಾಪ. ಹಾಗಾಗಿ ಉಳ್ಳವರ ಮಕ್ಕಳು ಮತ್ತು ಬಡವರ ಮಕ್ಕಳ ಕಲಿಕೆಯ ವೇಗದಲ್ಲಿಯೂ ದೊಡ್ಡ ಅಂತರ ಸೃಷ್ಟಿಸಬಲ್ಲದ್ದು ಎನ್ನುವ ಆರೋಪ ಆನ್​ಲೈನ್ ಶಿಕ್ಷಣ ಎದುರಿಸಬೇಕಾಗುತ್ತದೆ.

ಮನೆಯೇ ಪಾಠಶಾಲೆ: ಆಧುನಿಕ ತಂತ್ರಜ್ಞಾನದ ಹೊಸತನಗಳನ್ನು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ವಿಸ್ತರಿಸುತ್ತಿರುವ ಪ್ರಯತ್ನಗಳು ದೊಡ್ಡ ಉದ್ದಿಮೆಯ ಸ್ವರೂಪವನ್ನು ಪಡೆದಿವೆ. ಮೊಬೈಲ್, ಅಂತರ್ಜಾಲ, ಟಿವಿ ಮತ್ತು ವಿಡಿಯೋ ಮಾಧ್ಯಮಗಳನ್ನು ಶಾಲಾಮಕ್ಕಳ ಪಠ್ಯಕಲಿಕೆಯತ್ತ ಸಕಾರಾತ್ಮಕವಾಗಿ ವಿಸ್ತರಿಸುತ್ತಿರುವ ದೇಶಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಇಂತಹ ಉದ್ಯಮಗಳಿಗೆ ಪೂರಕ.

ಮಕ್ಕಳ ಭೋಜನ, ವಿಶ್ರಾಂತಿಯ ಸ್ಥಳದಲ್ಲಿಯೇ ಬೋಧನಾ ವೇಳಾಪಟ್ಟಿಯೂ ಸೇರಿಕೊಂಡಿದೆ. ಶಾಲೆ ಸೇರುವ ವಯಸ್ಸಿನ ಮಗುವೊಂದರ ಮೊಟ್ಟಮೊದಲನೆಯ ದಿನವು ಮನೆಯಾವರಣದಿಂದಲೇ ಆರಂಭವಾಗುವಂತಹ ದಿನಗಳಿವು. ನೂತನ ವಿದ್ಯಾರ್ಥಿಗೆ ಕಂಪ್ಯೂಟರ್/ಮೊಬೈಲು ತೆರೆಯೇ ಸ್ಲೇಟು, ಪುಟ್ಟ ಕೈಬೆರಳುಗಳೇ ಬಳಪ. ಆರಂಭದ ಕಲಿಕೆಯ ಈ ವಿನೂತನ ಸ್ಥಿತಿಯಲ್ಲಿ ಮಗುವಿನ ಹುಮ್ಮಸ್ಸು, ಪಾಲಕರ ಕುತೂಹಲ ಸಹಜಶಾಲೆಯ ಪರಿಸ್ಥಿತಿಗಿಂತಲೂ ಭಿನ್ನವೇ ಸೈ.

ಸಾಂಕ್ರಾಮಿಕ ರೋಗದ ಹಾವಳಿಯ ಸದ್ಯದ ಪರಿಸ್ಥಿತಿಯಲ್ಲಿ ಬೋಧನೆ ಮತ್ತು ಕಲಿಯುವಿಕೆ ಸಾಂಪ್ರಾದಾಯಿಕ ರೀತಿಯತ್ತ ಸುಲಭವಾಗಿ ಮತ್ತೆ ಹೊರಳಬಲ್ಲದೆ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಾರದು. ಆದರೆ, ಬಹುಪಾಲು ಮಕ್ಕಳು ಮತ್ತು ಶಿಕ್ಷಕರ ಒಲವು ಆನ್​ಲೈನ್ ಶಿಕ್ಷಣದ ಕಡೆಗೆ ಆಗಿರುತ್ತದೆ. ಈಗ ಶಿಕ್ಷಣಕ್ಕೆ ಸಂಬಂಧಿಸಿದ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಹುದೊಡ್ಡ ಹೂಡಿಕೆಯಾಗುತ್ತಿದ್ದು, ಇನ್ನೊಂದೆಡೆ ಇ-ವಾಣಿಜ್ಯದ ಸೌಲಭ್ಯಗಳೂ ವಿಸ್ತಾರವಾಗಿವೆ. ಆನ್​ಲೈನ್ ಮೂಲಕದ ಕಲಿಕೆಯಲ್ಲಿ ಕಲಿಸುವವರ ಸಾಮರ್ಥ್ಯ, ಕಲಿಸಬೇಕಾಗಿರುವ ಕ್ರಮ ಮತ್ತು ಮೌಲ್ಯಮಾಪನದ ಬಗ್ಗೆಯೂ ಅಗತ್ಯವಾಗಿ ಇರಲೇಬೇಕಾದಂತಹ ಡಿಜಿಟಲ್ ಜ್ಞಾನಕ್ಕೆ ಅನುಗುಣವಾದ ತರಬೇತಿ ಕೆಲವು ದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಹೀಗಾಗಿ ಡಿಜಿಟಲ್ ಕಲಿಕೆ ಈಗಾಗಲೇ ಆಳವಾಗಿ ಬೇರು ಬಿಟ್ಟಿರುವುದಂತೂ ಸ್ಪಷ್ಟ.

ಆದುದರಿಂದಲೇ ತರಗತಿಯಾಚೆಯೂ ಕಲಿಯುವುದಕ್ಕೆ ಸಾಧ್ಯವಿದೆ ಎನ್ನುವಂಥ ಮನೋನಿಶ್ಚಿತತೆ ಗಟ್ಟಿಪಡಿಸುವ ಡಿಜಿಟಲ್ ಕಲಿಕೆಯ ತಂತ್ರಗಳತ್ತ ಗಮನ ಹೆಚ್ಚಾಗಿದೆ. ಅಲ್ಲದೆ, ತರಗತಿಯ ಬೋಧನಾ ಕ್ರಮ ಮತ್ತು ಮನೆಯನ್ನೇ ಶಾಲೆಯಾಗಿಸುವ ಆನ್​ಲೈನ್ ಶಿಕ್ಷಣದ ಪದ್ಧತಿಗಳ ಸೂಕ್ತ ಮಿಶ್ರಣಕ್ಕೆ ಬೆಂಬಲವೂ ಹೆಚ್ಚುತ್ತಿದೆ.

ಡಿಜಿಟಲ್ ಕಲಿಕೆಯ ಅಡ್ಡಪರಿಣಾಮಗಳು: ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಪರ್ಕ ದೂರದೂರ ಸರಿದಿದ್ದರೂ ಮೊಬೈಲ್/ಕಂಪ್ಯೂಟರ್ ತೆರೆಗಳ ಮೂಲಕ ಕಲಿಕೆ ಸಾಧ್ಯವಾಗುತ್ತಿದ್ದು ಅದೇ ಸರಾಗ ಎನ್ನುವ ಅಭಿಪ್ರಾಯವೂ ಬಲವಾಗುತ್ತಿದೆ. ಆದರೆ, ಮಕ್ಕಳ ಸಮಗ್ರ ಮಾನಸಿಕ ವಿಕಾಸದ ಮೇಲೆ ಒಳ್ಳೆಯದಲ್ಲದ ಪರಿಣಾಮಗಳೇ ಹೆಚ್ಚು ಎನ್ನುವ ಅಭಿಪ್ರಾಯ ಪಾಲಕರಲ್ಲಿದೆ. ಇದೇನು ಹುಸಿಭಾವನೆಯಂತೂ ಅಲ್ಲ. ನೂರಾರು ವರ್ಷಗಳ ಹಳೆಯ ಕಲಿಕೆಯ ಪದ್ಧತಿಗಳು ಏಕಾಏಕಿ ಬದಲಾಗಿಬಿಟ್ಟಾಗ ಹೀಗೆನಿಸುವುದು ಸಹಜ. ಕೋವಿಡ್ ಪೂರ್ವದ ವರ್ಷದಲ್ಲಿದ್ದಂತಹ ಶಾಲಾ ಕಲಿಕೆಯ ಅವಧಿ ಮತ್ತು ಕಲಿಸಿದ ವಿಷಯಗಳ ಗ್ರಹಿಕೆ ಕೋವಿಡ್ ಸಮಯದಲ್ಲಿ ಶೇಕಡ 40ಕ್ಕೆ ಇಳಿದಿರುವುದನ್ನು ಕೆಲ ಸಮೀಕ್ಷೆಗಳು ಬೊಟ್ಟುಮಾಡಿವೆ. ಹೌದು, ಮನೆಯ ಆವರಣವೇ ತರಗತಿಯ ತದ್ರೂಪವಾಗಲಾರದು. ಮನೆಯ ವಾತಾವರಣ, ಸಾಧನ, ಸಲಕರಣೆಗಳ ಗುಣಮಟ್ಟ, ಮಾಹಿತಿ ಒದಗಿಬರುವ ವೇಗ ಮತ್ತು ಹೊಸತನದ ಕಾರಣದಿಂದ ಹುಟ್ಟುವಂಥ ಕುತೂಹಲದ ಜೊತೆಯಲ್ಲಿ ಏಕಾಗ್ರತೆಗೆ ಅಡ್ಡಿಪಡಿಸುವಂಥ ಹೊಸ ಆವರಣವೂ ಕಲಿಕೆಗೆ ಅಡ್ಡಿಪಡಿಸುತ್ತವೆ. ಇನ್ನು ಡಿಜಿಟಲ್ ಸೌಲಭ್ಯ ಒದಗಿಸುವ ಮತ್ತು ಡಿಜಿಟಲ್ ಅಂತರವನ್ನು ನೀಗಿಸುವ ಕಾರ್ಯ ಸರ್ಕಾರಗಳ ಬದ್ಧತೆಯನ್ನು ಅವಲಂಬಿಸಿರುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳು ಡಿಜಿಟಲ್ ಕಲಿಕೆಯ ಮುಖ್ಯವಾಹಿನಿಯನ್ನು ಸೇರುವಂತೆ ಮಾಡುವ ಕಾರ್ಯಕ್ರಮಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಭಾಗವಹಿಸುವಿಕೆ ಬಹುಮುಖ್ಯ. ಡಿಜಿಟಲ್ ಕಲಿಕೆಯ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸುವುದು ಸುಲಭದ ಮಾತಲ್ಲ. ಮುಂದಿನ ದಶಕಗಳಲ್ಲಿ ನಿತ್ಯದ ಬದುಕು ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿದೆ ಎನ್ನುವ ಅರಿವು, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮೂಡಿಸಬೇಕಿದೆ.

(ಲೇಖಕರು ಮನೋವಿಜ್ಞಾನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net