

| ವಿಜಯಕುಮಾರ್ ನಾಡಿಗೇರ್ ಶಿಕಾರಿಪುರ
ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ. ವಾತ್ಸಲ್ಯದ ಸಂಕೇತವಾದ ಈ ಹಬ್ಬವನ್ನು ಹೆಣ್ಣುಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದವರು ತವರೂರಿನಲ್ಲಿ ಹೆತ್ತವರೊಡಗೂಡಿ ಹಾಲೆರೆದು ಹಾಲುಂಡ ತವರಿಗೆ ಒಳಿತಾಗಲಿ ಎಂದು ಬೇಡಿಕೊಳ್ಳುತ್ತಾರೆ. ತವರು ಮನೆಯಿಂದ ಶುಭದ ಸಂಕೇತವಾಗಿ ಸಹೋದರಿಯರಿಗೆ ಹೊಸ ಸೀರೆ, ಕಾಯಿ, ಕುಪ್ಪಸ, ಉಂಡೆಗಳನ್ನು ಒಯ್ದು ಕೊಡುತ್ತಾರೆ.
ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ: ಸಾಮಾನ್ಯವಾಗಿ ನಾಗರ ಪಂಚಮಿ ಆರಂಭವಾಗುವುದೇ ನಾಗರ ಅಮಾವಾಸ್ಯೆಯಿಂದ. ಅಮಾವಾಸ್ಯೆಯ ನಂತರ ಮೂರನೆಯ ದಿನ ರೊಟ್ಟಿ ಹಬ್ಬ, ನಾಲ್ಕನೆಯ ದಿನ ಚತುರ್ಥಿ, ಐದನೆಯ ದಿನ ಪಂಚಮಿ ಆಚರಿಸುತ್ತಾರೆ. ರೊಟ್ಟಿ ಹಬ್ಬದಂದು ಮನೆ ಮನೆಯಲ್ಲಿ ಬಗೆ ಬಗೆಯ ಪಲ್ಯೆ, ಚಟ್ನಿ ತಯಾರಿಸಿ ರೊಟ್ಟಿ, ಚಪಾತಿಯನ್ನು ತಯಾರಿಸಿ ಅಕ್ಕಪಕ್ಕದ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ನಾಗರ ಪಂಚಮಿ ಹಬ್ಬದ ನಾಲ್ಕೈದು ದಿನ ಉಂಡೆ, ಹೋಳಿಗೆ ಮಾಡುವುದರಿಂದ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಸಜ್ಜಿ, ಜೋಳದ ಹಿಟ್ಟಿನಲ್ಲಿ ಎಳ್ಳು ಹಾಕಿ ರೊಟ್ಟಿ ತಯಾರಿಸುತ್ತಾರೆ. ಅದನ್ನೇ ಬಾಂಧವ್ಯ ರೂಪದಲ್ಲಿ ಹಂಚಿಕೊಳ್ಳುತ್ತಾರೆ.
ರೊಟ್ಟಿ ಹಬ್ಬದ ನಂತರ ಶೇಂಗಾ ಉಂಡೆ, ಅಳ್ಳಿಟ್ಟು ಉಂಡೆ, ಎಳ್ಳುಂಡೆ ಹಾಗೂ ಚಕ್ಕುಲಿ ಸೇರಿ ಬಗೆ ಬಗೆಯ ಉಂಡೆಗಳನ್ನು ತಯಾರಿಸುತ್ತಾರೆ. ಈ ಉಂಡೆಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಇನ್ನು ಬೇರೆ ಬೇರೆ ಊರುಗಳಲ್ಲಿರುವ ಸಂಬಂಧಿಕರಿಗೆ ಉಂಡೆ ಕೊಟ್ಟು -ತರುವ ಸಂಪ್ರದಾಯವಿದೆ. ಅದರಲ್ಲೂ ತವರು ಮನೆಯಿಂದ ಉಂಡೆ ಬರಲೇಬೇಕು. ಇದು ಸಹೋದರರ ಮಧ್ಯೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ.
ಮರೆಯಾಗುತ್ತಿದೆ ಜೋಕಾಲಿ: ಹಬ್ಬದ ಪ್ರಯುಕ್ತ ಪ್ರತಿ ಮನೆಗಳಲ್ಲದೆ, ಊರ ಮುಂದಿನ ಅರಳಿ ಮುಂತಾದ ಬೃಹತ್ ವೃಕ್ಷಗಳಿಗೆ ದೊಡ್ಡದಾದ ಜೋಕಾಲಿ ಕಟ್ಟಲಾಗುತ್ತಿತ್ತು. ಸದಾ ಮನೆಗೆಲಸಗಳಲ್ಲಿಯೇ ತೊಡಗಿರುವ ಮಹಿಳೆಯರು ವರ್ಷಕ್ಕೊಮ್ಮೆ ಮಕ್ಕಳ ಜತೆಗೆ ಈ ಅಪರೂಪದ ಕ್ರೀಡೆಯಲ್ಲಿ ಪಾಲ್ಗೊಂಡು ಖುಷಿ ಪಡುತ್ತಿದ್ದರು. ಅದರಲ್ಲೂ ಹುಡುಗಿ ಯರಂತೂ ಗೆಳತಿಯರೊಡಗೂಡಿ ಸಂತಸದಿಂದ ಜೋಕಾಲಿ ಆಟವಾ ಡುತ್ತಿದ್ದರು. ಆದರೆ ಈಗ ಆ ಸಂಭ್ರಮ ಕಾಣಸಿಗುತ್ತಿಲ್ಲ. ಕಾಲ ಕಳೆದಂತೆ ಜೋಕಾಲಿ ಮರೆಯಾಗುತ್ತಿದೆ ಎನ್ನುವುದು ಬೇಸರದ ಸಂಗತಿ.
ರೈತರು ಹುತ್ತಕ್ಕೆ ಹಾಲೆರೆಯುವಹಬ್ಬ: ನಾಗರ ಪಂಚಮಿಯು ರೈತರ ಹಬ್ಬವಾಗಿದೆ. ಅದರಲ್ಲಿಯೂ ಮುಂಗಾರು ಬೆಳೆ ಬರುವ ಹಿನ್ನೆಲೆಯಲ್ಲಿ ರೈತರಿಗೆ ಇದು ಸಂಭ್ರಮದ ಹಬ್ಬ. ಹಾವುಗಳು ರೈತರಿಗೆ ಕೃಷಿ ಸ್ನೇಹಿಗಳಾಗಿವೆ. ಮಣ್ಣಿನಲ್ಲಿರುವ ಕೀಟಗಳನ್ನು ತಿನ್ನುವ ಹಾವುಗಳು ಭೂಮಿಯ ಫಲವತ್ತಾದ ಪ್ರದೇಶದಲ್ಲಿಯ ಹುತ್ತದಲ್ಲಿ ವಾಸವಾಗಿರುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ರೈತರು ನಾಗರ ಪಂಚಮಿಯಿಂದ ವಿಷಜಂತುಗಳು ಮನುಷ್ಯರಿಗೆ ಕಾಟ ನೀಡದೆ, ಭೂಮಿಯಲ್ಲಿಯ ಕೀಟಗಳನ್ನು ತಿಂದು ಫಸಲು ಕೈಗೆ ಬರಲಿ ಎಂಬ ಕಾರಣಕ್ಕೆ ಹುತ್ತಕ್ಕೆ ಹಾಲೆರೆಯುತ್ತಾರೆ.