ಮಾತೃಭಾಷೆಯಿಂದ ಹೆಚ್ಚಿನ ಜ್ಞಾನ ಸುಂದರ ಜಗತ್ತು; ಇಂದು ಮಾತೃಭಾಷೆ ದಿನ

Mother Language
Published on

| ರಮೇಶ ದೊಡ್ಡಪುರ

ವಿಶ್ವದ ಎಲ್ಲ ದೇಶಗಳೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಫೆ.21ನ್ನು ಆಚರಿಸಬೇಕು ಎಂದು ವಿಶ್ವಸಂಸ್ಥೆ 1999ರ ನ.17ರಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿತು. ಮಾತೃಭಾಷಾ ದಿನವನ್ನಾಗಿ ಆಚರಣೆ ಮಾಡಬೇಕು ಎಂಬ ಬೇಡಿಕೆ ಬಂದದ್ದು ನಮ್ಮ ನೆರೆಯ ಬಾಂಗ್ಲಾದೇಶದಿಂದ. ಇದಕ್ಕೊಂದು ರೋಚಕ ಇತಿಹಾಸವಿದೆ. 1947ರಲ್ಲಿ ಭಾರತ ಸ್ವತಂತ್ರವಾಯಿತು, ಜತೆಗೇ ವಿಭಜನೆಯೂ ಆಯಿತು. ಪಾಕಿಸ್ತಾನವನ್ನು ಹೊಸದಾಗಿ ರಚನೆ ಮಾಡಿ, ಅದರಲ್ಲಿ ಈಗಿರುವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನ, ಈಗಿನ ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ತಾನ ಎಂದು ಸಂಬೋಧಿಸ ಲಾಗುತ್ತಿತ್ತು. ಎರಡೂ ಪ್ರದೇಶಗಳಲ್ಲಿದ್ದ ಸಮಾನತೆ ಎಂದರೆ ಇಸ್ಲಾಂ ಅನುಯಾಯಿಗಳು. ಇದೇ ಕಾರಣಕ್ಕೆ ಮುಸ್ಲಿಂರೆಲ್ಲ ಒಂದೇ ದೇಶದಲ್ಲಿರಬಹುದು ಎಂಬ ಅಂದಾಜಿನಲ್ಲಿ ಒಂದೇ ದೇಶ ಎಂದು ಘೋಷಣೆ ಮಾಡಲಾಯಿತು. ಆದರೆ ಕೇವಲ ಒಂದೇ ವರ್ಷದಲ್ಲಿ ಈ ಅಂದಾಜು ಸುಳ್ಳಾಯಿತು. ಪಶ್ಚಿಮ ಪಾಕಿಸ್ತಾನದಲ್ಲಿನ ಮುಸ್ಲಿಂರು ಮಾತನಾಡುತ್ತಿದ್ದದ್ದು ಉರ್ದುವಾದರೆ, ಪೂರ್ವ ಪಾಕಿಸ್ತಾನದ ಮುಸ್ಲಿಂರು ಹಾಗೂ ಇನ್ನಿತರ ಎಲ್ಲ ಸಮುದಾಯದವರೂ ಬಾಂಗ್ಲಾ ಮಾತನಾಡುತ್ತಿದ್ದರು. ಒಟ್ಟಾರೆ ಜನಸಂಖ್ಯೆಯಲ್ಲಿ ಪೂರ್ವ ಪಾಕಿಸ್ತಾನವೇ ದೊಡ್ಡದು. ಆದರೆ ಉರ್ದುವನ್ನೇ ಪಾಕಿಸ್ತಾನದ ಏಕಮಾತ್ರ ರಾಷ್ಟ್ರಭಾಷೆ ಎಂಬ ನಿರ್ಣಯವನ್ನು 1948ರಲ್ಲಿ ಕೈಗೊಳ್ಳಲಾಯಿತು. ಉರ್ದು ಇರಲಿ, ಬಾಂಗ್ಲಾವನ್ನು ಮತ್ತೊಂದು ರಾಷ್ಟ್ರಭಾಷೆ ಎಂದು ಪರಿಗಣಿಸಿ ಎಂಬ ಪೂರ್ವ ಪಾಕಿಸ್ತಾನದ ಬೇಡಿಕೆಗೆ ಮನ್ನಣೆ ಸಿಗಲೇ ಇಲ್ಲ. ದಿನೇದಿನೆ ಭಾಷೆ ಕುರಿತ ಸಂಘರ್ಷ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪಶ್ಚಿಮ ಪಾಕಿಸ್ತಾನ, ಸಾರ್ವಜನಿಕ ರ್ಯಾಲಿ, ಪ್ರತಿಭಟನೆಗಳನ್ನು ನಿಷೇಧಿಸಿತು. ಸಾರ್ವಜನಿಕರ ಸಹಾಯದೊಂದಿಗೆ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೃಹತ್ ರ್ಯಾಲಿಗಳನ್ನು ಆಯೋಜಿಸಲು ಮುಂದಾದರು. ಇಂಥದ್ದೇ ರ‍್ಯಾಲಿ ಮೇಲೆ 1952ರ ಫೆ.21ರಂದು ಪೊಲೀಸರು ಗುಂಡಿನ ದಾಳಿ ನಡೆಸಿದರು, ಐವರು ಪ್ರತಿಭಟನಾಕಾರರು ಮೃತಪಟ್ಟು ನೂರಾರು ಜನರು ಗಾಯಗೊಂಡರು. ವಿಶ್ವದಲ್ಲಿ ಧರ್ಮದ ಕಾರಣಕ್ಕೆ ಅನೇಕರು ಮೃತಪಟ್ಟಿದ್ದಾರಾದರೂ ಭಾಷೆಯ ಕಾರಣಕ್ಕೆ ಬಲಿದಾನಗೈದ ಕೆಲವೇ ಉದಾಹರಣೆಗಳಲ್ಲಿ ಇದೂ ಒಂದು. 1953ರಿಂದ, ಆ ದಿನವನ್ನು ಬಾಂಗ್ಲಾದೇಶೀಯರು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಿದ್ದಾರೆ.

ತಂತ್ರಜ್ಞಾನದ ಸಹಾಯ: ಪ್ರಾರಂಭದ ದಿನಗಳಲ್ಲಿ 8ನೇ ಪರಿಚ್ಛೇದದ 22 ಭಾಷೆಗಳಲ್ಲಷ್ಟೆ ವಿವಿಧ ಯೋಜನೆಗಳು ನಡೆಯುತ್ತಿದ್ದವು. ಆ ಭಾಷೆಗಳೆಲ್ಲದರ ಕುರಿತು ಹಾಗೂ ಅವುಗಳ ಜ್ಞಾನ ಎಲ್ಲರಿಗೂ ಲಭಿಸಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತವಾಣಿ ಯೋಜನೆಯನ್ನು 2016ರಲ್ಲಿ ಆರಂಭಿಸಿತು. 22 ಭಾಷೆಗಳಷ್ಟೆ ಅಲ್ಲದೆ, ಗುರುತಿಸಲ್ಪಟ್ಟ 234 ಭಾಷೆಗಳ ಕಲಿಕೆ, ಎನ್​ಸೈಕ್ಲೋಪೀಡಿಯಾ, ಪಠ್ಯಪುಸ್ತಕಗಳು, ನಿಘಂಟು ಹಾಗೂ ಮಲ್ಟಿಮೀಡಿಯಾ ಮೂಲಕ ನೀಡಲಾಗುತ್ತಿದೆ.

1998ರಲ್ಲಿ ಪ್ರಸ್ತಾವನೆ: ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ವಿಶ್ವಾದ್ಯಂತ ಮಾತೃಭಾಷೆಗಳ ಉಳಿವಿನ ದಿನವನ್ನಾಗಿ ಆಚರಿಸಲು ನಿರ್ಣಯ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯನ್ನು 1998ರಲ್ಲಿ ಕೋರಲಾಯಿತು. ಬಾಂಗ್ಲಾದೇಶದ ಜತೆಗೆ ಸೌದಿ ಆರೇಬಿಯಾವೂ ಸಲ್ಲಿಸಿದ ಪ್ರಸ್ತಾವನೆಗೆ 1999ರಲ್ಲಿ ವಿಶ್ವಸಂಸ್ಥೆ ಸರ್ವಾನುಮತದಿಂದ ಅಂಗೀಕಾರ ನೀಡಿತು. ಅಂದಿನಿಂದ ಪ್ರತಿವರ್ಷ, ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಉಳಿಸಲು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಪ್ರಸ್ತಾವನೆಗೆ ಒಮನ್, ಶ್ರೀಲಂಕಾ, ಈಜಿಪ್ತ್, ಭಾರತ ಸೇರಿ 24 ದೇಶಗಳು ಬೆಂಬಲ ನೀಡಿದವು, ಅದರಲ್ಲಿ ಪಾಕಿಸ್ತಾನವೂ ಸೇರಿತ್ತು.

ಇಂಗ್ಲಿಷ್ ಅಧಿಕೃತವಲ್ಲ: ಯಾವ ದೇಶದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟೂ ವೈವಿಧ್ಯತೆಯಿದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಪಪುವಾ ನ್ಯೂ ಗಿನಿಯಾ ಎಂಬ ಕೇವಲ 89 ಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ 840 ಭಾಷೆಗಳಿದ್ದು, ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಇಂಡೋನೇಷ್ಯಾ (710), ನೈಜೀರಿಯಾ (524) ಹಾಗೂ ನಾಲ್ಕನೇ ಸ್ಥಾನದಲ್ಲಿ ಭಾರತವಿದೆ (447). ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ಅಂತರ ಸರ್ಕಾರಗಳ ನಡುವಿನ ಸಂಭಾಷಣೆ, ಸಂವಹನಕ್ಕೆ ಮೊದಲು ಹಿಂದಿಯನ್ನು ಅಧಿಕೃತ ಭಾಷೆ ಎಂದು ಪರಿಗಣಿಸಲಾಗಿತ್ತು. ನಂತರದಲ್ಲಿ ಅದರ ಜತೆಗೆ ಇಂಗ್ಲಿಷ್ ಸೇರಿಸಲಾಗಿದೆ. ಭಾರತವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆ ಮಾಡಿದ್ದರಿಂದಾಗಿ ಅನೇಕ ರಾಜ್ಯಗಳಲ್ಲಿ ವಿಭಿನ್ನ ಭಾಷೆಗಳನ್ನು ಅಧಿಕೃತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕನ್ನಡ, ಹಿಂದಿ, ಸಂಸ್ಕೃತ ಸೇರಿ ದೇಶದ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಇಂಗ್ಲಿಷ್ ಇಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಮಾತೃಭಾಷಿಕರು ಇರುವ ಭಾಷೆ ಎಂದರೆ ಚೈನೀಸ್ ಮ್ಯಾಂಡರೀನ್ (ಶೇಕಡ 11.9), ಎರಡನೇ ಸ್ಥಾನದಲ್ಲಿ ಸ್ಪಾ ್ಯಷ್ (ಶೇ.5.99), ನಂತರದಲ್ಲಿ ಇಂಗ್ಲಿಷ್(ಶೇ.4.99), ನಾಲ್ಕನೇ ಸ್ಥಾನದಲ್ಲಿ ಹಿಂದಿ (ಶೇ.4.42) ಇದೆ. ಕನ್ನಡ(ಶೇ.0.566) 31ನೇ ಸ್ಥಾನದಲ್ಲಿದೆ.

ಮಾತೃಭಾಷೆಯ ಮಹತ್ವ: ಯಾವುದೇ ವ್ಯಕ್ತಿಯು ಜನ್ಮದಿಂದ ಮಾತನಾಡುತ್ತಿರುವ ಅಥವಾ ಆ ವ್ಯಕ್ತಿಯ ಮನೆಯಲ್ಲಿ ಮಾತನಾಡುವ ಭಾಷೆಯನ್ನು ಮಾತೃಭಾಷೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಈ ಭಾಷೆಯಲ್ಲಿ ಜ್ಞಾನವನ್ನು ನೀಡಿದರೆ ಹೆಚ್ಚು ಪರಿಣಾಮಕಾರಿ ಯಾಗಿ ಅರ್ಥವಾಗುತ್ತದೆ ಎಂದು ಅನೇಕ ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನಾದರೂ ಮಾತೃಭಾಷೆಯಲ್ಲಿ ನೀಡಬೇಕು ಎಂಬ ಆಧಾರದಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಸರ್ಕಾರ ಕಡ್ಡಾಯ ಮಾಡಿತು. ಆದರೆ ಈ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯಿತು. ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವುದನ್ನು ಮಕ್ಕಳ ಪಾಲಕರು ನಿರ್ಧರಿಸಬೇಕೆ ಹೊರತು ಸರ್ಕಾರವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಈ ಪ್ರಯತ್ನ ಅಲ್ಲಿಗೇ ನಿಂತಿತು. ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಐದನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ತಿಳಿಸಲಾಗಿದೆ. ಆದರೆ ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಎರಡು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಅದರಲ್ಲಿ ಕನ್ನಡವನ್ನು ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ಭಾಷಾ ಬೆಳವಣಿಗೆಗೆ ಹಾಗೂ ಇತರ ಭಾಷೆಗಳನ್ನು ಬೋಧಿಸುವವರಿಗೆ ತೊಂದರೆಯಾಗಿದೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net