

ಬೆಂಗಳೂರು: ಸೊಳ್ಳೆಗಳಿಂದ ಕಾಯಿಲೆ ಹರಡಿತ್ತು ಎನ್ನುವುದಕ್ಕೆ ಸಾವಿರಾರು ವರ್ಷಗಳ ಹಿಂದಿನ ಕುರುಹುಗಳು ದೊರೆತಿವೆ. ಇದನ್ನು ‘ಮಲೇರಿಯಾ’ ಎಂದು ಗುರುತಿಸಿ 140 ವರ್ಷಗಳಾಗಿವೆ. ಅಂದಿನಿಂದಲೂ ಇದಕ್ಕೆ ಹಲವು ಬಗೆಯ ಔಷಧ, ಚಿಕಿತ್ಸಾ ವಿಧಾನಗಳನ್ನು ಪ್ರಯೋಗಿಸಲಾಗುತ್ತಿದೆ, ಆವಿಷ್ಕಾರ ಮಾಡಲಾಗುತ್ತಿದೆ. ಹೀಗಿದ್ದರೂ ಇದರ ಮೂಲೋತ್ಪಾಟನೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯತೆಯನ್ನು ಬಳಸಿಕೊಂಡು ರೋಗದ ತೀವ್ರತೆ ಹಾಗೂ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ. ಈ ವರ್ಷದ ಮಲೇರಿಯಾ ದಿನಾಚರಣೆಯ ಧ್ಯೇಯವೂ ಇದೇ ಆಗಿದೆ. ಮಲೇರಿಯಾವು ಅನಾಫಿಲಿಸ್ ಎಂಬ ಹೆಣ್ಣುಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ರೋಗದ ಲಕ್ಷಣಗಳು ಕಂಡುಬಂದರೂ ಸೂಕ್ತ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಲ್ಲಿ ಜನರು ಹಿಂದೇಟು ಹಾಕುತ್ತಾರೆ. ಜತೆಗೆ, ಕೋವಿಡ್ ಅವಧಿಯಲ್ಲಿ ಎಲ್ಲ ಮಾದರಿಯ ಜ್ವರವನ್ನೂ ಕರೊನಾ ಸೋಂಕು ಎಂದು ಭಾವಿಸಿದ ಪರಿಣಾಮವಾಗಿ ಮಲೇರಿಯಾವು ರಾಜ್ಯದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ.
2021ರಲ್ಲಿ ರಾಜ್ಯದಲ್ಲಿ ಒಟ್ಟು 80,57,440 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 913 ಮಂದಿಗೆ ರೋಗ ದೃಢಪಟ್ಟಿದೆ. ಅಧಿಕ ಮಲೇರಿಯಾ ಕಂಡುಬರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ 689 ಮಂದಿಯಲ್ಲಿ ರೋಗ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ‘ಮಲೇರಿಯಾ ರೋಗದ ಹೊರೆ ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ನಾವೀನ್ಯತೆಗಳನ್ನು ಬಳಸಿಕೊಳ್ಳಿ’ ಎಂಬುದು ಈ ಸಲದ ಮಲೇರಿಯಾ ದಿನದ ಘೋಷವಾಕ್ಯ. ಪ್ರಸ್ತುತ ಲಭ್ಯವಿರುವ ಯಾವುದೇ ಉಪಕರಣವು ಮಲೇರಿಯಾ ಸಮಸ್ಯೆಯನ್ನು ಪೂರ್ತಿಯಾಗಿ ಪರಿಹರಿಸುವುದಿಲ್ಲ. ಹೀಗಾಗಿ, ಮಲೇರಿಯಾ ವಿರುದ್ಧದ ಹೋರಾಟವನ್ನು ಇನ್ನಷ್ಟು ವೇಗಗೊಳಿಸಲು ಕೀಟ ನಿಯಂತ್ರಣ ವಿಧಾನಗಳು, ರೋಗನಿರ್ಣಯ, ಮಲೇರಿಯಾ ನಿರೋಧಕ ಔಷಧಗಳು ಮತ್ತು ಇತರ ಸಾಧನಗಳ ತಯಾರಿಕೆಗೆ ಕರೆ ನೀಡಲಾಗಿದೆ. 2030ರ ವೇಳೆಗೆ ‘ಮಲೇರಿಯಾ ಶೂನ್ಯ ಹಂತ’ ಸಾಧಿಸುವ ನಿಟ್ಟಿನಲ್ಲಿ ಸಂಘಟಿತ ಕ್ರಮಗಳ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೊಳ್ಳೆ ಕಚ್ಚುವುದರಿಂದ ಡೆಂಘಿ ಹಾಗೂ ಚಿಕೂನ್ಗುನ್ಯಾ ಮಾತ್ರವಲ್ಲದೇ ಮಲೇರಿಯಾವೂ ಬಾಧಿಸುತ್ತದೆ. ಸಾಮಾನ್ಯವಾಗಿ ಡೆಂಘಿ ಶುದ್ಧ ನೀರಿನಲ್ಲಿ ಉಲ್ಬಣಿಸುವ ಹಾಗೂ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಿಂದ ಬರುತ್ತದೆ. ಕಲುಷಿತ ನೀರಿನಲ್ಲಿ ಉಲ್ಬಣಿಸುವ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ಹೀಗಾಗಿ, ಯಾವುದೇ ರೀತಿಯ ಸೊಳ್ಳೆಗಳಿರಲಿ ಅದರಿಂದ ರಕ್ಷಣೆ ಪಡೆಯುವುದು ಉತ್ತಮ. ಇದಕ್ಕಾಗಿ ಮನೆ ಹಾಗೂ ಸುತ್ತಮುತ್ತಲ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸದ ರಾಶಿ ಇರದಂತೆ, ಮನೆ ಮುಂದಿನ ಸ್ಥಳ, ರಸ್ತೆ, ಚರಂಡಿ ಹಾಗೂ ತಾರಸಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಉಲ್ಬಣಿಸದಂತೆ ಎಚ್ಚರ ವಹಿಸಿದರೆ ಮಲೇರಿಯಾ ಸೇರಿ ಸೊಳ್ಳೆಗಳಿಂದ ಹರಡಬಹುದಾದ ರೋಗಗಳಿಂದ ಮುಕ್ತಿ ಹೊಂದಬಹುದು.
ಮಲೇರಿಯಾ ಬಂದಾಗ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿ ದೇಹ ನಿರ್ಜಲೀಕರಣಗೊಳ್ಳುತ್ತದೆ. ಹೀಗಾಗಿ, ಹೆಚ್ಚು ನೀರು ಸೇವಿಸಬೇಕು. ಜತೆಗೆ, ಕಬ್ಬಿನ ರಸ, ಹಣ್ಣಿನ ರಸ, ಓಆರ್ಎಸ್, ಎಳನೀರು, ನಿಂಬೆ ಹಣ್ಣಿನ ರಸ ಇತ್ಯಾದಿ ಪಾನೀಯ ಸೇವನೆ ಮಾಡಬೇಕು. ಜ್ವರದಿಂದ ಹೊಟ್ಟೆ ಹಸಿವು ಆಗುವುದಿಲ್ಲ. ಇದರಿಂದಾಗಿ ಪ್ರೋಟಿನ್ ವಿಟಮಿನ್ ಕೊರತೆ ಉಂಟಾಗುತ್ತದೆ. ಆ ಸಮಯದಲ್ಲಿ ಸಿಟ್ರಸ್ ಹಾಗೂ ವಿಟಮಿನ್ ‘ಸಿ’ ಅಂಶ ಇರುವ ಕಿತ್ತಳೆ ಹಣ್ಣು ಹಾಗೂ ಪರಂಗಿ ಹಣ್ಣು, ಹಾಲು, ಮೊಸರು, ಮಜ್ಜಿಗೆ, ಮೊಟ್ಟೆ ಸೇವಿಸಬೇಕು. ಕೊಬ್ಬಿನ ಅಂಶ ಇರುವ ಆಹಾರ ಸೇವಿಸಬಾರದು.
ಜ್ವರ, ಕೆಲವರಿಗೆ ವಿಪರೀತ ಜ್ವರ ಹಾಗೂ ಬಿಟ್ಟು ಬಿಟ್ಟು ಜ್ವರ ಕಂಡುಬರುತ್ತದೆ. ಚಳಿಜ್ವರವೂ ಕಾಣಿಸಿಕೊಳ್ಳುತ್ತದೆ. ಅತಿಯಾದ ತಲೆನೋವು, ಆಯಾಸ, ಸುಸ್ತು ಕಂಡುಬಂದ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಮೇರೆಗೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ಖಚಿತವಾದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ (ಏ.25) ‘ನವೀನ ವಿಧಾನಗಳನ್ನು ಬಳಸೋಣ- ಮಲೇರಿಯಾ ಕಡಿಮೆ ಮಾಡಿ, ಜೀವ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯಮಟ್ಟದ ಮಲೇರಿಯಾ ದಿನಾಚರಣೆ ಆಯೋಜಿಸಲಾಗಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಕೆ. ರವಿ, ಐಎಂಎ ರಾಜ್ಯಾಧ್ಯಕ್ಷ ಡಾ. ಕಟೀಲ್ ಸುರೇಶ್ ಕುಡ್ವ, ಫನಾ ಅಧ್ಯಕ್ಷ ಡಾ.ಎಚ್.ಎಂ. ಪ್ರಸನ್ನ ಮತ್ತಿತರರು ಭಾಗವಹಿಸಲಿದ್ದಾರೆ.