ನಷ್ಟದ ಸುಳಿಯಲ್ಲಿ 14 ಸಾವಿರ ಸಹಕಾರ ಬ್ಯಾಂಕ್; ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಲಾಸ್, ಸಂಪೂರ್ಣ ನಿಷ್ಕ್ರಿಯವಾಗಿವೆ 2,521 ಸಂಘಗಳು

Co op bank
Published on

| ಬೇಲೂರು ಹರೀಶ ಬೆಂಗಳೂರು

ವ್ಯಾಪಕ ಭ್ರಷ್ಟಾಚಾರ, ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡುವಿಕೆ, ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 44,571 ಸಹಕಾರ ಸಂಘಗಳ ಪೈಕಿ 14,265 ಸಂಘಗಳು ನಷ್ಟದಲ್ಲಿವೆ. 4,212 ಸಂಘಗಳು ಲಾಭ ಹಾಗೂ ನಷ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ 2,521 ಸಂಘಗಳು ನಷ್ಟದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ.

ಇಲಾಖೆ ನಿಯಮದಂತೆ ಪ್ರತಿವರ್ಷವೂ ಸಹಕಾರ ಸಂಘ ಹಾಗೂ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಅಂದಾಜು ಸಾವಿರಾರು ಸಂಘಗಳು ನವೀಕರಣಗೊಂಡಿಲ್ಲ. ಹೀಗಾಗಿ ನವೀಕರಣದ

ಶುಲ್ಕದಿಂದ ಬರಬೇಕಿದ್ದ ನೂರಾರು ಕೋಟಿ ರೂ. ಆದಾಯವೂ ಖೋತಾ ಆಗಿದೆ. ಹಾಗಾಗಿ, ನವೀಕರಣಗೊಳ್ಳದ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆ ಚಿಂತನೆ ನಡೆಸಿದೆ. ಕೆಲ ಸಂಘಗಳು ಉತ್ತುಂಗಕ್ಕೂ ಏರದೆ, ಇತ್ತ ಪಾತಾಳಕ್ಕೂ ಕುಸಿಯದೆ ಮಧ್ಯಮ ಸ್ಥಿತಿಯಲ್ಲಿವೆ. ಇಂತಹ ಸಹಕಾರ ಸಂಘಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಮುಖ್ಯವಾಗಿ ಸಹಕಾರಿ ರಂಗಕ್ಕೆ ಹಾಗೂ ರೈತರಿಗೆ ಜೀವಾಳವಾಗಿರುವ ಸಹಕಾರಿ ಸಂಘಗಳನ್ನು ಗುರುತಿಸಿ ಪುನಶ್ಚೇತನ ನೀಡುವ ಕೆಲಸವನ್ನು ಸರ್ಕಾರ ಮುಂದಾಗಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಎಲ್ಲೆಲ್ಲಿ ಎಷ್ಟು ಸಂಘ ನಿಷ್ಕ್ರಿಯ?: ಮಂಗಳೂರಿನಲ್ಲಿ 16, ಚಾಮರಾಜನಗರ 70, ಉಡುಪಿ 2, ಬೆಳಗಾವಿ 232, ವಿಜಯಪುರ 35, ಧಾರವಾಡ 156, ಕಾರವಾರ 21, ಹಾವೇರಿ 39, ಗದಗ 43, ಬಾಗಲಕೋಟೆ 62, ಕಲಬುರಗಿ 121, ರಾಯಚೂರು 237, ಬೀದರ್ 342, ಬಳ್ಳಾರಿ 85, ಕೊಪ್ಪಳ 117 ಹಾಗೂ ಯಾದಗಿರಿಯಲ್ಲಿ 215 ಸೇರಿ ಒಟ್ಟು 2,521 ಸಂಘಗಳು ನಿಷ್ಕ್ರಿಯಗೊಂಡಿವೆ.

ಆಡಿಟ್ ಆಗಿಲ್ಲ: 18 ಬಹುರಾಜ್ಯ ಮಟ್ಟದ ಸಹಕಾರ ಸಂಘ, 320 ರಾಜ್ಯಮಟ್ಟದ ಮಹಾಮಂಡಳ, 664 ಜಿಲ್ಲಾ ಮಟ್ಟ ಮೀರಿ ರಾಜ್ಯಮಟ್ಟದ ಒಳಗಿರುವ ಸಂಘ, 649 ಜಿಲ್ಲಾ ಮಟ್ಟದ ಸಹಕಾರ ಸಂಘ, 1,404 ತಾಲೂಕು ಮಟ್ಟ ಮೀರಿ ಜಿಲ್ಲಾ ಮಟ್ಟ ಒಳಗಿರುವ ಸಂಘ, 3,004 ತಾಲೂಕು ಮಟ್ಟದ ಸಂಘ ಹಾಗೂ 38,512 ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸಂಘಗಳು ಸೇರಿ ಒಟ್ಟು 44,571 ಸಂಘಗಳಿವೆ. ಇದರಲ್ಲಿ 2,742 ‘ಎ‘ ವರ್ಗೀಕರಣ, 12,446 ‘ಬಿ‘ ವರ್ಗೀಕರಣ, 21,395 ‘ಸಿ‘ ವರ್ಗೀಕರಣ ಹಾಗೂ 3,703 ‘ಡಿ‘ ವರ್ಗೀಕರಣಗಳಾಗಿ ವಿಂಗಡಿಸಲಾಗಿದೆ. ಜತೆಗೆ, 4,285 ‘ಎನ್’ ಲೆಕ್ಕ ಪರಿಶೋಧನೆಯಾಗದೆ ಇರುವ ಸಂಘಗಳಿವೆ ಎಂದು ಸಹಕಾರ ಇಲಾಖೆ ನೀಡಿರುವ ಅಂಕಿ-ಅಂಶಗಳಲ್ಲಿ ತಿಳಿದುಬಂದಿದೆ.

50 ವಿವಿಧ ಬಗೆಯ ಸಂಘಗಳು: 15 ಬಹುರಾಜ್ಯಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 180 ಗ್ರಾಮೀಣ ಬ್ಯಾಂಕ್, 5,844 ಕೃಷಿ ಪತ್ತಿನ ಸಹಕಾರ ಬ್ಯಾಂಕ್, 25 ಲ್ಯಾಂಪ್ಸ್ ಸಹಕಾರ ಬ್ಯಾಂಕ್, 43 ರೇಷ್ಮೆ ಬೆಳೆಗಾರ ಬ್ಯಾಂಕ್, 105 ಸಹಕಾರ ಗ್ರೇನ್ ಬ್ಯಾಂಕ್, 284 ಪಟ್ಟಣ ಸಹಕಾರ ಬ್ಯಾಂಕ್, 3,554 ಪತ್ತಿನ ಸಹಕಾರ ಬ್ಯಾಂಕ್, 1,258 ನೌಕರರ ಪತ್ತಿನ ಬ್ಯಾಂಕ್, 243 ಟಿಎಪಿಸಿಎಂಎಸ್, 106 ಮರಾಟ ಸಹಕಾರ ಬ್ಯಾಂಕ್, 37 ಸಹಕಾರಿ ಸಕ್ಕರೆ ಕಾರ್ಖಾನೆ, 156 ಸಂಸ್ಕರಣ ಸಹಕಾರ ಸಂಘ, 16 ಸಹಕಾರಿ ನೂಲಿನ ಗಿರಣಿ ಸೇರಿ 50 ವಿವಿಧ ಬಗೆಯ ಸಂಘಗಳಿವೆ.

ನಷ್ಟ ಉಂಟಾಗಲು ಕಾರಣಗಳಿವು

  • ಲಾಭಾಂಶ ಹಂಚಿಕೊಳ್ಳುವುದು
  • ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು
  • ವ್ಯಾಪಕ ಭ್ರಷ್ಟಾಚಾರ
  • ಖಾತೆದಾರರು ಹಣವನ್ನು ಲಪಟಾಯಿಸುವುದು
  • ಅಧಿಕ ಲಾಭದ ಆಸೆಗೆ ಬೇರೆ ಕಡೆಗಳಲ್ಲಿ ಠೇವಣಿ ಇಡುವುದು
  • ನಕಲಿ ದಾಖಲೆ ಪಡೆದು ಸಾಲ ನೀಡಿಕೆ
  • ಆಸ್ತಿ ಮೌಲ್ಯಕಿಂತ ಹೆಚ್ಚಿನ ಸಾಲ ನೀಡಿಕೆ
  • ಸಾಲ ವಸೂಲಾತಿ ಮಾಡಲು ವಿಫಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net