

| ರಮೇಶ ದೊಡ್ಡಪುರ ಬೆಂಗಳೂರು
ಮೂರು ವರ್ಷಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬೈಲಾ ಬದಲಾವಣೆಯಿಂದಾಗಿ 2021ರ ಮೇ 9ಕ್ಕೆ ನಿಗದಿಯಾಗಿ ಕರೊನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದು ಇದೀಗ ನ.21ರಂದು ನಡೆಯಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಂತೆ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯಲ್ಲಿ ಮತದಾರ ರನ್ನು ತಮ್ಮತ್ತ ಸೆಳೆಯಲು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಮತದಾರರಲ್ಲೂ ಅನೇಕ ವಿಷಯಗಳ ಚರ್ಚೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕಸಾಪ ಚುನಾವಣೆ ಯಲ್ಲಿ ಸಾಮಾಜಿಕ ಜಾಲತಾಣ ಅದರಲ್ಲೂ ವಾಟ್ಸಆಪ್ ಮಾಧ್ಯಮವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸದ್ಯದ ಸ್ಥಿತಿ ಹಾಗೂ ಮುಂದಿನ ಒಂದು ತಿಂಗಳ ಪ್ರಚಾರ ಕಾರ್ಯದ ಕುರಿತು ಪ್ರಮುಖ ಅಭ್ಯರ್ಥಿಗಳು ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.
ರಾಜ್ಯದ ಎಲ್ಲ ತಾಲೂಕು ಕೇಂದ್ರ ಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 27 ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಈ ಬಾರಿ 3,10,109 ಮತದಾರರು ಅರ್ಹರಾಗಿದ್ದಾರೆ. ನ.21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ನ.24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಡೀಕರಿಸಿ ಫಲಿತಾಂಶ ಘೋಷಿಸಲಾಗುತ್ತದೆ.