

ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಜೆ.ಎಚ್. ಪಟೇಲರು ಪ್ರತಿಪಕ್ಷದ ಶಾಸಕರಾಗಿದ್ದರು. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಇಬ್ಬರ ನಡುವೆ ಏಕವಚನದಲ್ಲಿ ದೊಡ್ಡ ಗಲಾಟೆಯಾಯಿತು. ಗುಂಡೂರಾವ್ ಜತೆ ಕೈ ಕೈ ಮಿಲಾಯಿಸಲು ಪಟೇಲ್ ಮುಂದಾಗಿದ್ದರು. ಆದರೆ, ಮಾರನೇ ದಿನವೇ ಅದೆಲ್ಲವನ್ನೂ ಮರೆತು ಅವರೊಂದಿಗೆ ಸ್ನೇಹದಿಂದ ಇದ್ದರು. ಇಂತಹ ವ್ಯಕ್ತಿತ್ವ ಪಟೇಲರದು. ಇವತ್ತಿನ ಕೆಸರೆರಚಾಟ ಮಾಡಿಕೊಳ್ಳುವ ರಾಜಕಾರಣಿಗಳು ಪಟೇಲರ ಬಗ್ಗೆ ತಿಳಿದುಕೊಳ್ಳಬೇಕು.
ಪಟೇಲರು ಯಾವತ್ತೂ ಸ್ಥಿತಪ್ರಜ್ಞರಾಗಿರುತ್ತಿದ್ದರು. ದೇವರಾಜ ಅರಸು ನಿಧನರಾದ ನಂತರ ಕ್ರಾಂತಿರಂಗದ ಅಧ್ಯಕ್ಷ ಸ್ಥಾನಕ್ಕೆ ಪಟೇಲ್ ಮತ್ತು ಬಂಗಾರಪ್ಪ ನಡುವೆ ಪೈಪೋಟಿ ಇತ್ತು. ಕ್ರಾಂತಿರಂಗದ ಕಚೇರಿಯಲ್ಲಿ ಬಂಗಾರಪ್ಪ ಬೆಂಬಲಿಗರು ಪಟೇಲರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಅಂತಹ ಸಂದರ್ಭದಲ್ಲಿ ಸಹ ಪಟೇಲರು ವಿಚಲಿತರಾಗಲಿಲ್ಲ.
1980ರಲ್ಲಿ ಜನತಾ ಪರಿವಾರ ಒಡೆಯಿತು. ಕೆಲವರು ಜನಸಂಘದಲ್ಲಿಯೂ ಇದ್ದರು, ಜನತಾ ಪರಿವಾರದಲ್ಲಿಯೂ ಇದ್ದರು. ಅದೇ ವಿಚಾರದಲ್ಲಿ ಪಕ್ಷ ಇಬ್ಭಾಗವಾಯಿತು. ಈ ವಿಚಾರದಲ್ಲಿ ಸಿಟ್ಟಾದ ಪಟೇಲರು, ಹಿಂದುಳಿದ ವರ್ಗಗಳ ಬಹುದೊಡ್ಡ ನಾಯಕ, ರೈತಪರ ನಾಯಕರಾಗಿದ್ದ ದೇವರಾಜ ಅರಸು ಅವರೊಂದಿಗೆ ಸೇರಿದರು. ಲಿಂಗಾಯತ ಸಮುದಾಯದ ಪಟೇಲರ ಈ ನಿರ್ಧಾರ ಅವರೊಬ್ಬ ಎಲ್ಲ ಸಮುದಾಯದ ನಾಯಕ ಎಂಬುದನ್ನು ನಿರೂಪಿಸಿತು.
ಅವರ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಅವರು ಹಿರಿಯ ಮಂತ್ರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿ ನಾಲ್ಕು ಬಜೆಟ್ ಮಂಡಿಸಿದರು. ನನಗೆ ಮೊದಲು ಸಾರಿಗೆ, ನಂತರ ಗೃಹ ಖಾತೆ ನೀಡಿದರು. ನಾನು ಕೇಳಿದ ಅಧಿಕಾರಿಗಳನ್ನು, ಇಲಾಖೆಗೆ ಬೇಕಾದ ಅನುದಾನವನ್ನು ಕೇಳಿದ ಕೂಡಲೇ ಕೊಡುತ್ತಿದ್ದರು. ನಾನು ಮುಖ್ಯಮಂತ್ರಿ, ನೀವು ಮಂತ್ರಿಗಳು ಎಂಬ ಭಾವನೆಯನ್ನು ಅವರು ಯಾವತ್ತೂ ತೋರಿಸಲಿಲ್ಲ. ಅಂತಹ ವ್ಯಕ್ತಿತ್ವದ ಅಪರೂಪದ ನಾಯಕ. ನನ್ನನ್ನು ‘ಕ್ಯಾಪ್ಟನ್’ ಎಂದೇ ಕರೆಯುತ್ತಿದ್ದರು. ಅವರ ಮಕ್ಕಳಲ್ಲಿ ರಾಜಕೀಯ ಆಸಕ್ತಿ ಇತ್ತು. ಆದರೆ, ಪಟೇಲರು ಅವರನ್ನು ರಾಜಕೀಯಕ್ಕೆ ತರುವ ಪ್ರಯತ್ನ ಮಾಡಲಿಲ್ಲ. ಅದು ಅವರ ವಿಶೇಷ ಗುಣ.
ಜೆ.ಎಚ್. ಪಟೇಲ್ ವ್ಯಕ್ತಿತ್ವ ಉಳಿದವರಿಗಿಂತ ಭಿನ್ನವಾದದ್ದು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಪಟೇಲ್, ಜಾಲಪ್ಪ, ಆಳ್ವ, ದೇವೇಗೌಡ ಹೀಗೆ ಆ ಕಾಲದ ರಾಜಕಾರಣಿಗಳಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ವ್ಯಕ್ತಿತ್ವ. ಜನರಿಗೆ ಪ್ರಿಯ ಎನಿಸುವ ಹೆಗಡೆ ಮೇಲೆ ಬೇರೆ ಬೇರೆ ಆರೋಪ ಬಂದರೂ ಪಟೇಲರ ಮೇಲೆ ಗಂಭೀರ ಆರೋಪಗಳು ಬರಲಿಲ್ಲ; ಆದರೆ ಅವರ ಬಗ್ಗೆ ಅಪಪ್ರಚಾರ ನಡೆದವು. ಅದು ಅವರ ದೌರ್ಬಲ್ಯವೂ ಹೌದು, ಸಾಧನೆಯೂ ಹೌದು. ‘ಮದ್ಯ, ಮಾನಿನಿ ನನ್ನ ದೌರ್ಬಲ್ಯ’ಎಂದು ಪಟೇಲ್ ನೇರವಾಗಿ ಹೇಳಿಕೊಂಡರು. ಯಾವುದೇ ಮುಚ್ಚುಮರೆ ಇಲ್ಲದೆ ಹೇಳುವ ಧೈರ್ಯ ತೋರಿಸಿದ್ದು ಇವತ್ತಿಗೂ ಮೆಚ್ಚುಗೆಯಾಗುತ್ತದೆ.
ಅವರು ಅಪಾರ ಸಮಯಪ್ರಜ್ಞೆಯ ಅಪ್ರತಿಮ ಮಾತುಗಾರರಾಗಿದ್ದರು. ಒಮ್ಮೆ ವಿರೋಧ ಪಕ್ಷದ ನಾಯಕರೊಬ್ಬರು ‘ನಮ್ಮನ್ನು ಏನೆಂದು ತಿಳಿದಿದ್ದೀರಿ, ದನ ಕಾಯೋಕೆ ಇಲ್ಲಿಗೆ ಬಂದಿದ್ದೇವಾ’ ಎಂದು ಪಟೇಲರ ವಿರುದ್ಧ ಹರಿಹಾಯ್ದರು. ಪಟೇಲರು ಅಷ್ಟೇ ಕೂಲಾಗಿ ‘ನನಗೆ ಅದೇ ಅನುಮಾನ’ ಎಂದು ಹೇಳಿದಾಗ ಆ ನಾಯಕರಿಗೆ ನಗುವಲ್ಲದೇ ಬೇರೆ ಮಾತೇ ಇರಲಿಲ್ಲ. ಇಂತಹ ಮಾತಿನ ಶೈಲಿ ಪಟೇಲರಿಗಲ್ಲದೆ ಬೇರೆಯವರಲ್ಲಿ ಕಾಣಲು ಸಾಧ್ಯವಾಗಲಿಲ್ಲ. ಪಟೇಲರಿಗೆ ಅಪಾರ ಜ್ಞಾನ ಇತ್ತು. ದೇಶ-ವಿದೇಶಗಳ ವಿಚಾರ ಸ್ವಲ್ಪ ಕೆದಕಿದರೆ ಸಾಕು ವಿವರವಾಗಿ ಹೇಳುತ್ತಿದ್ದರು. ಬೇರೆ ಬೇರೆ ದೇಶಗಳಲ್ಲಿನ ಧಾರ್ವಿುಕ ಸಂಗತಿಗಳು, ಸಾಮಾಜಿಕ ಸ್ಥಿತಿಗತಿ, ತಂತ್ರಜ್ಞಾನದ ಬಗ್ಗೆ ಹೇಳುತ್ತ, ‘ನಮ್ಮ ದೇಶ ಸಾಕಷ್ಟು ಹಿಂದುಳಿದಿದೆ’ ಎಂದು ಹೇಳುತ್ತಿದ್ದ ಪ್ರಗತಿಪರ ಚಿಂತಕ ಅವರು. ನಾನು ಒಮ್ಮೆ ಅವರೊಂದಿಗೆ ತುಂಬಾ ಜಗಳ ಮಾಡಿದ್ದೆ. ಅಸೆಂಬ್ಲಿಯಲ್ಲಿ ನಾನು ‘ಬಂಜಾರ ಸಮುದಾಯದ ಜನಸಂಖ್ಯೆ ಎಷ್ಟು’ ಎಂಬ ಪ್ರಶ್ನೆ ಕೇಳಿದ್ದೆ. ಅದಕ್ಕೆ ಪಟೇಲರು ‘ಕಾಗೆ ಗೂಬೆಗಳ ಸಂಖ್ಯೆ ಯಾರಿಗೆ ಗೊತ್ತಿರುತ್ತದೆ’ ಎಂಬ ಉತ್ತರ ನೀಡಿದರು. ನಾನು ಆಕ್ರೋಶ ವ್ಯಕ್ತಪಡಿಸಿದಾಗ, ಸಮಾಧಾನ ಮಾಡುತ್ತ ‘ಇಲ್ಲಮ್ಮ ತಮಾಷೆಗೆ ಮಾತನಾಡಿದೆ. ಪ್ರಾಣಿಪಕ್ಷಿಗಳು ನಮಗಿಂತ ಬುದ್ಧಿವಂತರಿರುತ್ತವೆ’ ಎಂದು ಪಶ್ಚಾತ್ತಾಪದ ದನಿಯಲ್ಲಿ ಹೇಳಿದರು. ತಮಾಷೆಯಾಗಿ ಮಾತನಾಡುವ ಕಲೆ ಒಂದೆಡೆಯಾದರೆ ಅವರಲ್ಲಿನ ಜ್ಞಾನ, ಪಾಂಡಿತ್ಯ, ನೊಂದವರ ಬಗೆಗೆ ಮಿಡಿಯುವ ಗುಣ ಅವರ ಬಗ್ಗೆ ಗೌರವವನ್ನು ಇಮ್ಮಡಿಗೊಳಿಸುತ್ತದೆ.
ಜೆ.ಎಚ್. ಪಟೇಲ್ ಎಂದರೆ ನೆನಪಾಗುವುದು ಅವರೊಬ್ಬ ದ್ವೇಷರಹಿತ ವ್ಯಕ್ತಿ ಎಂಬುದು. ಪಟೇಲ್ ನಿಜವಾದ ಜಾತ್ಯತೀತ ನಾಯಕ. ಹುಟ್ಟು ಶ್ರೀಮಂತರಾಗಿದ್ದರು ಸಹ ಹಣದ ವ್ಯಾಮೋಹ ಇರಲಿಲ್ಲ. ಸಮಾಜವಾದವನ್ನು ಮೈಗೂಡಿಸಿಕೊಂಡು ಬೆಳೆದರು. ಪಾದರಸದಂತಹ ವ್ಯಕ್ತಿತ್ವ. ಅವರ ಮಾತುಗಳು ಮೇಲುನೋಟಕ್ಕೆ ತಮಾಷೆ ಎನಿಸಿದರೂ ಆಳದಲ್ಲಿ ಚಿಂತನೆಗೆ ಹಚ್ಚುತ್ತಿದ್ದವು. ಅಪಾರ ಜ್ಞಾನ ಹೊಂದಿದ್ದರು. ನಿರಂತರ ಓದು ಅವರನ್ನು ಚಿಂತಕನನ್ನಾಗಿ, ಮುತ್ಸದ್ದಿಯನ್ನಾಗಿ ರೂಪಿಸಿತ್ತು.
ಒಮ್ಮೆ ವಿಧಾನಸಭೆಯಲ್ಲಿ ಸೌಂದರ್ಯದ ವಿಚಾರ ಚರ್ಚೆಗೆ ಬಂತು. ಅನೇಕರು ‘ಎಲ್ಲಿದೆ ಸೌಂದರ್ಯ’ ಎಂದು ಟೀಕಿಸಿದರು. ಆಗ ಪಟೇಲ್ ‘ಎಕ್ಸರೇ ಕಣ್ಣಲ್ಲಿ ನೋಡಿದರೆ ಸೌಂದರ್ಯ ಎಲ್ಲಿ ಕಾಣುತ್ತದೆ’ ಎಂದು ನಗೆಗಡಲಿನಲ್ಲಿ ತೇಲಿಸಿದರು.
ಪಟೇಲ್ ಕೈಗಾರಿಕಾ ಸಚಿವರಾಗಿದ್ದಾಗ ಒಮ್ಮೆ ಅಸೆಂಬ್ಲಿಯಲ್ಲಿ ‘ರಾಜ್ಯದಲ್ಲಿ ಎಷ್ಟು ಕೈಗಾರಿಕೆಗಳಿವೆ’ ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ‘ರಾಜ್ಯದಲ್ಲಿ ಕಾಗೆಗಳ ಸಂಖ್ಯೆ ಎಷ್ಟು ಎಂಬು ದನ್ನು ಹೇಳಲು ಸಾಧ್ಯವೇ?’ ಎನ್ನುವ ಮೂಲಕ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.
ಒಮ್ಮೆ ಪಟೇಲ್, ಸಿದ್ದರಾಮಯ್ಯ, ಪ್ರಕಾಶ್ ಮತ್ತು ನಾನು ಮೈಸೂರು ಜಿಲ್ಲೆಯ ಟೀ ನರಸೀಪುರಕ್ಕೆ ಹೋಗುತ್ತಿದ್ದೆವು. ರಸ್ತೆ ತುಂಬಾ ಹಾಳಾಗಿತ್ತು. ಅರ್ಧ ಗಂಟೆಯ ಪ್ರಯಾಣ ಆಗ ಎರಡು ಮೂರು ಗಂಟೆ ತೆಗೆದುಕೊಳ್ಳುತ್ತಿತ್ತು. ನಾನು ಆ ಭಾಗದ ಕತೆ ಹೇಳುತ್ತಿದ್ದೆ. ಅವರು ನನ್ನನ್ನು ‘ಡಾಕ್ಟರೇ’ ಎಂದೇ ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಕತೆ ಹೇಳಿದರು. ‘ಒಬ್ಬ ವ್ಯಕ್ತಿಯನ್ನು ಸೈಕಲ್, ಸ್ಕೂಟರ್, ಕಾರು, ಬಸ್, ಲಾರಿ, ವಿಮಾನ ಓಡಿಸಲು ಬರುತ್ತದೆಯೇ ಎಂದು ಕೇಳಿದರಂತೆ, ಆತ ಎಲ್ಲವೂ ಬರುತ್ತದೆ ಎಂದನಂತೆ. ಕೊನೆಗೆ ರೈಲು ಬಿಡುತ್ತೀಯಾ ಎಂದರಂತೆ, ಅದಕ್ಕೆ ಆತ ಇಷ್ಟು ಹೊತ್ತು ಬಿಟ್ಟಿದ್ದು ಏನು ಎಂದು ಮರುಪ್ರಶ್ನೆ ಹಾಕಿದನಂತೆ’ ಎಂದು ನನ್ನನ್ನು ರೇಗಿಸಿದರು.
ನೇರವಾಗಿ, ಮುಚ್ಚುಮರೆ ಇಲ್ಲದೆ ಮಾತನಾಡುವುದು ಅವರ ಶೈಲಿ. ಭ್ರಷ್ಟರನ್ನು ನೇರವಾಗಿ ‘ನೀನು ಭ್ರಷ್ಟ’ ಎಂದು ಹೇಳುತ್ತಿದ್ದರು. ಆಡಳಿತದಲ್ಲಿ ಸಹೋದ್ಯೋಗಿಗಳಿಗೆ ಮುಕ್ತ ಅವಕಾಶ ನೀಡಿದ್ದರು. ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಜನರಿಗೆ, ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದಷ್ಟೇ ಅವರ ಉದ್ದೇಶವಾಗಿತ್ತು. ಜಾತ್ಯತೀತ ನಾಯಕನಾದ್ದರಿಂದಲೇ ಬಿ.ಎಲ್. ಶಂಕರ್, ಕೆ.ಎನ್. ನಾಗೇಗೌಡ, ಸಿ. ಬೈರೇಗೌಡ ಸೇರಿದಂತೆ ಒಕ್ಕಲಿಗರು ಸಹ ಅವರೊಂದಿಗೆ ನಿಂತರು. ಆದರೆ, ಕೊನೆಗೆ ತಮ್ಮ ಸಂಪುಟಕ್ಕೆ ಹೆಚ್ಚು ಜನ ಲಿಂಗಾಯತರನ್ನು ಮಂತ್ರಿಗಳನ್ನಾಗಿ ಮಾಡಿಕೊಂಡರು. ಈ ಬಗ್ಗೆ ನಾವು ಕೇಳಿದಾಗ ‘ಕರ್ನಾಟಕ ಬಿಟ್ಟು ಬಿಹಾರದಲ್ಲಿ ಲಿಂಗಾಯತರನ್ನು ಮಂತ್ರಿ ಮಾಡಲು ಸಾಧ್ಯವೇ’ ಎಂಬ ಪ್ರಶ್ನೆಯ ಮೂಲಕ ನಮ್ಮ ಬಾಯಿ ಮುಚ್ಚಿಸಿದರು.
ಸಿದ್ದರಾಮಯ್ಯ ಪ್ರತಿಸ್ಪರ್ಧಿ ಎಂದು ಗೊತ್ತಿದ್ದರೂ ಖಜಾನೆಯ ಬೀಗದ ಕೀಯನ್ನು (ಹಣಕಾಸು ಖಾತೆ) ಅವರಿಗೆ ಕೊಟ್ಟಿದ್ದರು. ಅದು ಅವರ ದೊಡ್ಡಗುಣ. ಅಧಿಕಾರಿಗಳನ್ನು ಸಹ ಪ್ರೀತಿಯಿಂದ, ಮಾವ, ತಮ್ಮ, ಅಣ್ಣ, ಅಳಿಯ ಎಂದು ಸ್ವಂತ ಕುಟುಂಬದವರ ರೀತಿಯಲ್ಲಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ನಿಜಾರ್ಥದಲ್ಲಿ ಸ್ನೇಹಮಯಿ.