

| ಜಿ. ಚಂದ್ರಕಾಂತ
ರೈತರು ಸಸ್ಯ ಮತ್ತು ಭೂತಾಯಿಯನ್ನು ಆರಾಧಿಸುವ, ಗೌರವಿಸುವ, ಸತ್ಕರಿಸುವ ವಿಶೇಷ ಹಬ್ಬಗಳಲ್ಲಿ ಎಳ್ಳಮಾವಾಸ್ಯೆ ಪ್ರಾಚೀನವಾದುದು. ಈ ಹಬ್ಬ ಸ್ನೇಹ-ಸೌಹಾರ್ದ ಮತ್ತು ಸಂಸ್ಕೃತಿಯ ಸಂಕೇತ. ಅಲ್ಲದೆ ವೈಜ್ಞಾನಿಕ, ಸಾಮಾಜಿಕ, ಸಾಂಪ್ರದಾಯಿಕ ಮೌಲ್ಯಗಳ ನೆಲೆಗಟ್ಟಿನ ಮೇಲೆ ನಿಂತಿದೆ. ಇದನ್ನು ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ಹಲವು ಜಿಲ್ಲೆಗಳ ರೈತರು ಇಂದು (ಜ. 2) ಆಚರಿಸುತ್ತಾರೆ.
‘ಯವ್ವಾ! ಒಕ್ಕಲಿಗ್ಯಾನ ಹೆಂಡತಿ ನಾನ, ಚರಗ ಹೊಡೀಬೇಕ ಎಳ್ಳಮಾಸಿ ದಿನ’ ಎಂಬ ಜನಪದ ಹಾಡು ಸಸ್ಯ ಮತ್ತು ರೈತರ ಅವಿನಾಭಾವ ಸಂಬಂಧ ನೀರು-ಮೀನಿನಂತಿರುವುದನ್ನು ಸಾರುತ್ತದೆ. ದೀಪಾವಳಿಯಿಂದ ಕ್ರಮೇಣ ಹೆಚ್ಚಾಗುವ ಚಳಿಯು ಎಳ್ಳ ಅಮಾವಾಸ್ಯೆಯಿಂದ ಎಳ್ಳು ಕಾಳಿನಷ್ಟು ಕಡಿಮೆಯಾಗುತ್ತದೆಯಂತೆ. ಮರಾಠಿಯ ದರ್ಶವೇಳಾ ಅಮಾವಾಸ್ಯೆ, ಎಂದರೆ ಸಮಯದ ವೀಕ್ಷಣೆ ಎಂಬರ್ಥದಲ್ಲಿ ಎಳ್ಳ ಅಮಾವಾಸ್ಯೆ ಹೆಸರು ಬಂದಿರಬಹುದು. ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಬಯಕೆಯೂಟ ನೀಡಿದಂತೆ ಹಸಿರಿನಿಂದ ಕಂಗೊಳಿಸುತ್ತಿರುವ ಭೂತಾಯಿಗೆ ರೈತರು ಬಯಕೆಯೂಟ ನೀಡಿ ಕುಪ್ಪಸ (ಸೀಮಂತ) ಕಾರ್ಯಕ್ರಮ ಮಾಡುವರೆಂಬ ನಂಬಿಕೆಯಿದೆ. ಇದಕ್ಕಾಗಿ ಹೊಲದ ಕೊಂಪಿಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಪಾಂಡವರಿಗೆ ಮತ್ತು ಲಕ್ಷ್ಮೀಗೆ ತರಹೇವಾರಿ ಭಕ್ಷ್ಯಗಳ ನೈವೇದ್ಯವನ್ನು ಅರ್ಪಿಸುತ್ತಾರೆ. ಹಬ್ಬದ ಮುನ್ನಾ ದಿನವೇ ಮಹಿಳೆಯರು ಮಾಗಿ ಚಳಿಗೆ ತಕ್ಕುದಾದ ಮತ್ತು ವೈಜ್ಞಾನಿಕ ಹಿನ್ನೆಲೆಯ ಪರಂಪರಾಗತ ಹಬ್ಬದೂಟವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಮೆಂತ್ಯ, ಪಾಲಕ್, ಕೊತ್ತಂಬರಿ, ಈರುಳ್ಳಿ ಸೊಪ್ಪುಗಳನ್ನು; ಅವರೆ, ತೊಗರಿ, ಬಟಾಣಿ, ಶೇಂಗಾ, ಕಡಲೆಯ ಹಸಿಕಾಳುಗಳು; ಕಡಲೆಹಿಟ್ಟು, ಹಸಿ ಮೆಣಸಿನಕಾಯಿ, ಹುಣಸೆಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ, ಮುಂತಾದವನ್ನು ಬಳಸಿ ಭಜ್ಜಿಪಲ್ಯೆ ತಯಾರಿಸುತ್ತಾರೆ. ಇದರೊಂದಿಗೆ ಸಜ್ಜೆ-ಜೋಳದ ರೊಟ್ಟಿ ಮತ್ತು ಹಸಿ ಈರುಳ್ಳಿ, ಶೇಂಗಾ, ಅಗಸಿ ಚಟ್ನಿಗಳು, ಎಣ್ಣೆಗಾಯಿ ಬದನೆಕಾಯಿ ಪಲ್ಯೆ, ಜೋಳದ ಅನ್ನ, ಅಂಬಲಿ, ಬೆಲ್ಲದ ಕರಚಿಕಾಯಿ, ಸಜ್ಜೆ ಮತ್ತು ಜೋಳದ ಕಡುಬು, ಶೇಂಗಾ ಹೂರಣ ಹೋಳಿಗೆ ಇತ್ಯಾದಿ ತಯಾರಿಸುತ್ತಾರೆ. ಹಬ್ಬದಂದು ನಸುಕಿನಲ್ಲೇ ಹೊಲದಲ್ಲಿ ಅಂಬಲಿ ಗಡಿಗೆ ತಂದಿಡುತ್ತಾರೆ. ಬಳಿಕ ಕುಟುಂಬದವರು, ಸ್ನೇಹಿತರು, ನೆರೆಹೊರೆಯವರೊಂದಿಗೆ ಹೊಲಕ್ಕೆ ಬಂದು ಹೊಲದಲ್ಲಿ ಸಾಮೂಹಿಕ ಪೂಜೆ ಮಾಡಿ, ಹಬ್ಬದೂಟ ಮಾಡುವುದೊಂದು ವಿಶೇಷ. ಅಂತೆಯೇ ‘ಎಳ್ಳಮಾಸಿ ಹಬ್ಬಕ್ಕ ಊಟಕ್ಕೆ ಕರಿಯದವರು ಯಾರಿಲ್ಲ, ಹೋಳಿ ಹಬ್ಬಕ್ಕೆ ಬೊಬ್ಬೆ ಹೊಡಿಯದವರು ಯಾರಿಲ್ಲ’ ಎಂಬ ಗಾದೆ ಮಾತಿದೆ. ಜಾನಪದ ಕಥೆಯೊಂದರಲ್ಲಿ ಈ ದಿನದಂದು ಮಾರುವೇಷದ ಹೆಣ್ಣು ದೇವತೆಗೆ ರೈತನೊಬ್ಬ ಊಟಬಡಿಸದೇ ಇದ್ದುದಕ್ಕೆ ಅವಳ ಕಣ್ಣಿನಿಂದ ಉದುರಿದ ಕಾಡಿಗೆಯಿಂದ ಮರುದಿನ ಜೋಳದ ತೆನೆಗಳೆಲ್ಲ ಕಾಡಿಗೆ ತೆನೆಗಳಾಗಿದ್ದವೆಂಬ ಹಿನ್ನೆಲೆ ಇದೆ. ಅದಕ್ಕಾಗಿಯೇ ಹಬ್ಬದ ದಿನ ಹೊಲಕ್ಕೆ ಬಂದವರಿಗೆಲ್ಲ ರೈತರು ಊಟ ಮಾಡಿಸುತ್ತಾರೆ. ಊಟದ ಬಳಿಕ ಗಾಳಿಪಟ ಹಾರಿಸುವ ಮತ್ತು ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಭುಲಾಯಿ, ಜೋಕಾಲಿಯಂತಹ ಚಟುವಟಿಕೆಗಳು ನಡೆಯುತ್ತವೆ.
ಸಂಜೆ ಹಾಲುಕ್ಕಿಸಿ ಬುಟ್ಟಿಯಲ್ಲಿ ಜೋಳದ ಐದು ದಂಟುಗಳಿಗೆ
ಕುಪ್ಪಸ ಬಟ್ಟೆ/ಶಾಲು ಹೊದಿಸಿ ದೀಪವಿಟ್ಟು ಊರಿನ ಹನುಮಂತನಿಗೆ
ನಮಸ್ಕರಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ರಾತ್ರಿ ಬಡಿಗೆ ತಿರುಗಿಸುವ,
ಕೀಲು ಕುದುರೆ ಮತ್ತು ಬೆಂಕಿ ನೃತ್ಯ ಮಾಡುವ ಸಂಪ್ರದಾಯವಿದೆ. ಹಬ್ಬದಂದು ನಗರ ಪ್ರದೇಶದ ಸಾವಿರಾರು ಜನರು ಬಂಧು-ಮಿತ್ರ ರೊಡಗೂಡಿ ಉದ್ಯಾನವನ, ಅರಣ್ಯವನ, ವಿಹಾರಧಾಮಗಳಲ್ಲಿ ಸಾಮೂಹಿಕ ಭೋಜನ ಮಾಡುತ್ತಾರೆ. ಈ ಹಬ್ಬವು ಅಪ್ಪಟ ಕೃಷಿ ಮತ್ತು ಜನಪದ ಸಂಸ್ಕೃತಿ, ಪರಂಪರೆಗೆ ಜೀವಂತ ಸಾಕ್ಷಿಯಾಗಿದೆ.
ಚರಗ ಚೆಲ್ಲುವ ಪದ್ಧತಿ: ಅಡುಗೆಯನ್ನೆಲ್ಲ ಮಿಶ್ರಣ ಮಾಡಿ ‘ಓಲಗ್ಯಾ-ಓಲಗ್ಯಾ ಚಲ್ಲಂ ಪೋಲಗ್ಯಾ’ ಮತ್ತು ‘ಯಾವ ತಾಯಿ ಕೊಟ್ಟಳು, ಭೂತಾಯಿ ಕೊಟ್ಟಳು’, ಕೆಲವೆಡೆ ‘ಹುಲ್ಲುಲ್ಲಗೋ ಚಲ್ಲಂಬರಗೋ, ಹುಲಿಗೋ ಹುಲಿಗೋ ಸಲಾ ಪೊಲಿಗೋ’ ಎನ್ನುತ್ತ ಹೊಲದ ನಾಲ್ಕೂ ಮೂಲೆಯಲ್ಲೆಲ್ಲ ಚರಗ ಸಿಂಪಡಿಸಿ ಫಸಲು ಹುಲುಸಾಗಿ ಬೆಳೆಯಲೆಂದು ಪ್ರಾರ್ಥಿಸುತ್ತಾರೆ. ಮಹಾಭಾರತದಲ್ಲಿಯೂ ಚರಗ ಚೆಲ್ಲಿರುವ ಉಲ್ಲೇಖವಿದೆ. ಅಂತೆಯೇ ಪ್ರಪಂಚದಾದ್ಯಂತ ಮತ್ತು ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರೈತರು ತಾವು ಬೆಳೆದ ಬೆಳೆಯ ರಕ್ಷಣೆಗಾಗಿ ಹೊಲದ ತುಂಬ ಚರಗ, ಚರುಗ, ಸರುಗ ಚೆಲ್ಲುವ ಪದ್ಧತಿಯಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಶೀಗೆ ಹುಣ್ಣಿಮೆಗೆ ಈ ತರಹದ ಚರಗ ಚೆಲ್ಲಿ ಕಟುಂಬದವರೆಲ್ಲ ಸಾಮೂಹಿಕ ಭೋಜನ ಮಾಡುವುದು ರೂಢಿಯಲ್ಲಿದೆ.
(ಲೇಖಕರು ನಿವೃತ್ತ ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ)