

ಋಷಿಗಳನ್ನು ತ್ರಿಕಾಲ ಜ್ಞಾನಿಗಳೆಂದು ಹೇಳುವ ಪದ್ಧತಿ ನಮ್ಮ ಪರಂಪರೆಯಲ್ಲಿದೆ. ಮೂರು ಕಾಲಗಳನ್ನು ಬಲ್ಲವರೆಂದರೆ ಭೂತಕಾಲದ ಬಗೆಗೆ ಸರಿಯಾದ ತಿಳಿವಳಿಕೆಯೂ ವರ್ತಮಾನ ಕಾಲವನ್ನು ಚೆನ್ನಾಗಿ ವಿಮಶಿಸಬಲ್ಲ ಒಳನೋಟವೂ ಭವಿಷತ್ಕಾಲದ ಬಗೆಗೆ ಸೂಕ್ಷ್ಮವಾದ ಚಿಂತನೆ ಮೂಲಕ ದಾರಿ ತೋರಬಲ್ಲ ಸಾಮರ್ಥ್ಯವೂ ಇರುವವರು. ಅಂತಹ ಋಷಿಗಳು ತಮ್ಮ ಸುತ್ತಲೂ ಸೇರಿಕೊಂಡವರ ಮೇಲೆ ಮಾತ್ರವಲ್ಲ, ‘ಕಾಲಕ್ಕೆ ಕಾರಣ’ವೆಂದು ಹೇಳಲ್ಪಟ್ಟ ರಾಜನ ಮೇಲೂ (ಆಡಳಿತ ವ್ಯವಸ್ಥೆಯ ಮೇಲೂ) ಪರಿಣಾಮವನ್ನುಂಟು ಮಾಡಿ ಲೋಕಜೀವನವನ್ನು ಉನ್ನತಸ್ಥಿತಿಗೊಯ್ಯಬಲ್ಲವರು. ಅಂತಹ ಧೀಮಂತರು ‘ಭುವನದ ಭಾಗ್ಯ’ವಾಗಿ, ಅಧುನಿಕ ಕಾಲದಲ್ಲಿ ಕನ್ನಡ ನಾಡಿನಲ್ಲಿ ಆಗಿಹೋದ ಹಿರಿಯರ ಸಾಲಿನಲ್ಲಿ ಡಿವಿಜಿ ಎಂದೇ ಪ್ರಸಿದ್ಧರಾದ ಡಿ.ವಿ.ಗುಂಡಪ್ಪನವರು ಆ ಋಷಿ ಪರಂಪರೆಯನ್ನು ಅನುಸಂಧಾನ ಮಾಡಿ ಆಧುನಿಕ ಕಾಲದ ಋಷಿಗಳಾದವರು. ಅವರ ವ್ಯಕ್ತಿತ್ವವನ್ನು ಮನದೊಳಗೆ ತುಂಬಿಕೊಂಡಾಗ, ಹಿಮಾಲಯದೆದುರು ನಿಂತುಕೊಂಡಾಗ ಯಾವ ಭವ್ಯ ಅನುಭವವಾಗಬಹುದೋ ಅಂತಹ ಅನುಭವವಾಗುವುದರಲ್ಲಿ ಸಂದೇಹವಿಲ್ಲ.
‘ಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಮ್ ಎಂಬುದು ನಮ್ಮ ವೇದಗಳು ನೀಡುವ ಆದೇಶ. ಸ್ವಾಧ್ಯಾಯ ಮತ್ತು ಪ್ರವಚನಗಳಿಂದಲೇ ವಿದ್ಯೆ ಬೆಳೆಯುತ್ತದೆ ಮತ್ತು ಪರಂಪರೆಯಲ್ಲಿ ಮುಂದುವರಿಯುತ್ತದೆ. ಡಿ.ವಿ.ಜಿ.ಯವರು ಶಾಲಾ ಕಾಲೇಜುಗಳಲ್ಲಿ ಹೆಚ್ಚೇನೂ ಓದಿದವರಲ್ಲ. ಗುರು ಶಿಕ್ಷಣವನ್ನು ಕ್ರಮಬದ್ಧವಾಗಿ ಪಡೆದವರಲ್ಲ. ಅವರಿಗೆ ಲೋಕವೇ ಗುರುಕುಲವಾಯಿತು. ತಾವು ಕಂಡ, ಪರಿಚಯ ಹೊಂದಿದ, ಸಂಬಂಧ ಹೊಂದಿದ ಎಲ್ಲರಿಂದಲೂ ಅವರು ಕಲಿತರು; ಪಡೆದರು. ವಿನಯದಿಂದ ಹಲವರು ಹಿರಿಯರನ್ನು ಸಂಪರ್ಕ ಮಾಡಿದರು. ಅರಿವನ್ನು ಪಡೆದರು. ಅದರೊಂದಿಗೆ ಪಡೆದುದನ್ನು ತಮ್ಮ ಪರಿಸರಕ್ಕೆ ನೀಡತೊಡಗಿದರು. ಗ್ರಂಥಾಧ್ಯಯನ ಮಾಡುವುದರೊಂದಿಗೆ ಗ್ರಂಥರಚನೆಯನ್ನೂ ಮಾಡಿದರು.
ಒಂದೇ ಓದಿನಲ್ಲಿ ಗ್ರಂಥದ ಸರ್ವಸಾರವನ್ನೂ ತಮ್ಮದನ್ನಾಗಿಸುವ ಸೂಕ್ಷ್ಮಮತಿ ಅವರಿಗಿದ್ದುದರಿಂದ ಮತ್ತು ಭಾರತೀಯ ಪರಂಪರೆಯ ಹಲವು ಶಾಸ್ತ್ರಗಳಲ್ಲಿ ಪ್ರವೇಶವಿದ್ದುದರಿಂದ ತಾವು ಓದಿದ ಗ್ರಂಥಗಳನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಅವರಿಗೆ ಸುಲಭವಾಯಿತು. ಇಂಗ್ಲೀಷನ್ನು ಚೆನ್ನಾಗಿ ಅರಗಿಸಿಕೊಂಡುದರಿಂದ ಇಂಗ್ಲಿಷ್ನಲ್ಲಿ ಬೆಳಕಿಗೆ ಬಂದ ಅಪಾರ ಸಾಹಿತ್ಯರಾಶಿಯನ್ನು ತಮ್ಮದಾಗಿಸಿಕೊಳ್ಳಲು ಅವರಿಗೆ ಕಷ್ಟವಾಗಲಿಲ್ಲ. ಅವರು ಪತ್ರಿಕೆಗಳಲ್ಲಿ ಬರೆದ ಇಂಗ್ಲಿಷ್ ಲೇಖನಗಳು ಅಖಿಲ ಭಾರತ ಮಟ್ಟದಲ್ಲಿ ಮಾತ್ರವಲ್ಲ, ಅಂದಿನ ಆಳ್ವಿಕೆಯ ಕೇಂದ್ರವಾದ ಇಂಗ್ಲೆಂಡಿನಲ್ಲಿಯೂ ವಿಚಾರವಂತರ ಗಮನಕ್ಕೆ ಬಂದವು. ಸ್ವಾತಂತ್ರ್ಯಾಪೂರ್ವದ ಆ ಕಾಲದಲ್ಲಿ ಅಭಿಪ್ರಾಯ ಪ್ರಕಟಣೆಯ ಅವಕಾಶಗಳು ಕಡಿಮೆಯಿದ್ದಾಗಲೂ ಕನ್ನಡದಲ್ಲಿ ಮತ್ತು ಇಂಗ್ಲಿಷ್ನಲ್ಲಿ ಸ್ವತಂತ್ರ ಪತ್ರಿಕೆಗಳನ್ನು ಹೊರಡಿಸಿ, ಪ್ರಕಟಿಸಿ, ಬರೆದು ವಿಚಾರ ಪ್ರಸಾರ - ಅಭಿಪ್ರಾಯ ಪ್ರಸಾರಗಳನ್ನು ಮಾಡಿದರು. ಅವರಿಗೆ ಪತ್ರಿಕೆ ಎಂಬುದು ಸುದ್ದಿಯ ಪ್ರಸರಣಕ್ಕೆ ಬೇಕಾದ ವ್ಯವಸ್ಥೆಯೆಂದು ಕಾಣಲೇ ಇಲ್ಲ. ಅಭಿಪ್ರಾಯ-ಚಿಂತನೆಗಳ ಪ್ರಸಾರ, ವಿಚಾರ-ವಿಮರ್ಶೆಗಳ ಪ್ರಸಾರ, ಅರಿವಿನ ವಿಸ್ತರಣೆ- ಇದಕ್ಕಾಗಿಯೇ ಪತ್ರಿಕೆಯೆಂಬುದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ವೃತ್ತಪತ್ರಿಕೆಗಳು ಸೀಮಿತ ಸಂಖ್ಯೆಯಲ್ಲಿ ಬೆಳಕು ಕಾಣುತ್ತಿದ್ದ ಕಾಲದಲ್ಲಿಯೇ ‘ವೃತ್ತಪತ್ರಿಕೆ’ ಎಂಬ ಕೃತಿಯನ್ನೇ ಬರೆದು ಆ ಕ್ಷೇತ್ರದಲ್ಲಿ ಮುಂದಿನ ಅಧ್ಯಯನವನ್ನು ಮಾಡುವವರಿಗೆ ಅವರು ಮಾರ್ಗದರ್ಶಕರಾದರು.
ಕನ್ನಡಿಗರಿಗೆ ಡಿ.ವಿ.ಜಿ. ಎಂಬ ಮೂರಕ್ಷರಗಳು ಕಿವಿಗೆ ಬಿದ್ದ ಕೂಡಲೇ ನೆನಪಾಗುವುದು ಅವರು ಬರೆದ ‘ಮಂಕುತಿಮ್ಮನ ಕಗ್ಗ’. ಮುದ್ರಿತವಾದಂದಿನಿಂದ ಇಂದಿನವರೆಗೂ ಮೂರ್ನಾಲ್ಕು ತಲೆಮಾರುಗಳ ಕಾಲದಲ್ಲೂ ಜನಪ್ರಿಯತೆಯನ್ನು ಕಳೆದುಕೊಳ್ಳದ ಸರ್ವಪ್ರಿಯ ಗ್ರಂಥವಿದು. ಈಗಾಗಲೇ ಕಗ್ಗಗಳಿಗೆ ಬಂದ ವ್ಯಾಖ್ಯಾನಗಳು ಹಲವಾರು. ಇನ್ನೂ ವ್ಯಾಖ್ಯಾನಗಳು ರಚಿತವಾಗುತ್ತಲೇ ಇವೆ. ಕಗ್ಗ ಪಠ್ಯಗಳನ್ನು ಇರಿಸಿಕೊಂಡು ಉಪನ್ಯಾಸಗಳು ನಡೆಯುತ್ತಲೇ ಇವೆ. ಕಗ್ಗವನ್ನು ಅನುಸರಿಸಿ, ಅನುಕರಿಸಿ ಹಲವು ಕೃತಿಗಳು ಬಂದಿವೆ; ಬರುತ್ತಿವೆ. ವೇದಾಂತ ಚಿಂತನೆಯ ಮಠದ ಸ್ವಾಮಿಗಳೂ ಮಂಕುತಿಮ್ಮನ ಕಗ್ಗವನ್ನು ಭಾರತೀಯ ಚಿಂತನೆಗೆ ಒಂದು ಆಧಾರಗ್ರಂಥವೆಂದು ಪರಿಗಣಿಸಿ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿದಂತೆ ಕಗ್ಗ ಪದ್ಯಗಳನ್ನೂ ಉದ್ಧರಿಸುತ್ತಾರೆ. ಹೆಚ್ಚೇಕೆ- ಮಠದ ಸ್ವಾಮಿಗಳೊಬ್ಬರು ತಮ್ಮ ಚಾತುರ್ವಸ್ಯ ವ್ರತ ಕಾಲದಲ್ಲಿ ಪ್ರತಿದಿನವೂ ಮಂಕುತಿಮ್ಮನ ಕಗ್ಗದ ಬಗೆಗೆ ವ್ಯಾಖ್ಯಾನದ ರೂಪದಲ್ಲಿ ಉಪನ್ಯಾಸ ನೀಡಿದ ಉದಾಹರಣೆಯಿದೆ. ಸಣ್ಣ ತರಗತಿಯಲ್ಲಿ ಓದುವ ಮಕ್ಕಳೂ ಸಾಧು ಸನ್ಯಾಸಿಗಳೂ ಒಟ್ಟಿನಲ್ಲಿ ಸಮಾಜದ ಎಲ್ಲ ವರ್ಗದವರೂ ಕಗ್ಗವನ್ನೋದುತ್ತಾರೆಂದರೆ ಕಗ್ಗದ ವ್ಯಾಪಕತೆ ಎಷ್ಟೆಂದು ಊಹಿಸಬಹುದು.
ಶ್ರೀರಾಮ ಪರೀಕ್ಷಣಂ, ಶ್ರೀ ಕೃಷ್ಣ ಪರೀಕ್ಷಣಂ, ಸಾಹಿತ್ಯಶಕ್ತಿ, ಜೀವನಸೌಂದರ್ಯ ಮತ್ತು ಸಾಹಿತ್ಯ, ಜೀವನಧರ್ಮಯೋಗ ಇಂತಹ ಗಂಭೀರ ಕೃತಿಗಳೋ ಅಂತಃಪುರಗೀತ, ಕೇತಕೀವನಗಳಂತಹ ಕವಿತೆಗಳೋ ರಾಜ್ಯಶಾಸ್ತ್ರ, ರಾಜ್ಯಾಂಗ ತತ್ತ್ವಗಳು ಮೊದಲಾದ ಶಾಸ್ತ್ರರೂಪದ ಕೃತಿಗಳೋ ಒತ್ತಟ್ಟಿಗಿರಲಿ- ‘ಜ್ಞಾಪಕಚಿತ್ರಶಾಲೆ’ಯ ಸಂಪುಟಗಳಲ್ಲಿರುವ ವಿವಿಧ ವ್ಯಕ್ತಿಚಿತ್ರಗಳೇನು ಸಾಮಾನ್ಯವೇ? ಡಿ.ವಿ.ಜಿ.ಯವರು ಈ ಸಂಪುಟಗಳಲ್ಲಿ ತಮ್ಮ ನೆನಪಿನಲ್ಲುಳಿದ ಹಲವಾರು ಹಿರಿಯರನ್ನು ನೆನಪಿಸಿಕೊಂಡಿದ್ದಾರೆ. ಈ ವ್ಯಕ್ತಿಚಿತ್ರಗಳು ಆ ವ್ಯಕ್ತಿಗಳ ಹೊರತೋರಿಕೆಯ ಚಿತ್ರಗಳಾಗಿರದೆ ಅಂತರಂಗ ಪಕ್ವತೆಯ ನಿರೂಪಣೆಗಳಾಗಿವೆಯೆಂಬುದು ಬಹಳ ಮುಖ್ಯವಾದ ಮಾತು. ಯಾವುದೇ ವಿಳಾಸಗಳಿಲ್ಲದ ಸಾಧು- ಗೋಸಾವಿ- ಶರಣರಿಂದ ಹಿಡಿದು ರಾಜ್ಯದ ಆಡಳಿತದ ಉನ್ನತ ಹಂತದ ದಿವಾನರವರೆಗೂ ಅವರು ಚಿತ್ರಣಗಳನ್ನು ನೀಡಿದ್ದಾರೆ. ಬಡತನದ ಮಧ್ಯದಲ್ಲಿಯೂ ಸಮೃದ್ಧ-ಸಂತೃಪ್ತ ಜೀವನವನ್ನು ನಡೆಸುತ್ತಿದ್ದ ನೂರಾರು ಜನರನ್ನು ನೆನಪು ಮಾಡಿಕೊಂಡಿದ್ದಾರೆ. ನೂರಾರು ಬಣ್ಣಗಳ ನೂರಾರು ಬಗೆಯ ಜೀವನದ ನೂರಾರು ವ್ಯಕ್ತಿಗಳನ್ನು ಹತ್ತಾರು ವರ್ಷಗಳು ಕಳೆದ ಬಳಿಕವೂ ನೆನಪಿನಲ್ಲಿರಿಸಿಕೊಂಡು ಸ್ಪಷ್ಟವಾಗಿ ಚಿತ್ರಿಸಿರುವ ಡಿ.ವಿ.ಜಿ.ಯವರ ಗ್ರಹಣ-ಸ್ಮರಣ-ನಿರೂಪಣಶಕ್ತಿಯನ್ನು ಎಷ್ಟು ಕೊಂಡಾಡಿದರೂ ಅದು ಕಡಿಮೆಯೇ ಸರಿ.
ನೂರಾರು ಜನರ ನಿಕಟಸಂಪರ್ಕದಲ್ಲಿದ್ದ ಡಿ.ವಿ.ಜಿ.ಯವರು ವೈಚಾರಿಕವಾಗಿ ಗಾಢವಾಗಿ ಪ್ರಭಾವಿತರಾದುದು ಗೋಪಾಲಕೃಷ್ಣ ಗೋಖಲೆಯವರಿಂದ. ಆದುದರಿಂದ ಗೋಖಲೆಯವರ ಹೆಸರಿನಲ್ಲಿಯೇ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಕಟ್ಟಿ, ಪ್ರಾಚೀನ ವಿಷಯಗಳನ್ನು ತಮ್ಮ ಬಳಿಗೆ ಬಂದವರಿಗೆಲ್ಲ ವಿಚಾರವನ್ನೋ ಚಿಂತನೆಯನ್ನೋ ತತ್ತ್ವವನ್ನೋ ಒಳಗಣ್ಣನ್ನು ತೆರೆಯುವ ಗುಟ್ಟುಗಳನ್ನೋ ಹೇಳಿಕೊಟ್ಟಂತೆ ತಾವೂ ಅವನ್ನೆಲ್ಲ ಪಾತ್ರೋಚಿತವಾಗಿ ಹಂಚುತ್ತ ಹೋದರು. ಈ ಸಂಸ್ಥೆಯನ್ನು ಹೊರತು ಸ್ವಂತದ್ದಾದ ಏನನ್ನೂ ಅವರು ಕಟ್ಟಿಕೊಳ್ಳಲಿಲ್ಲ; ಉಳಿಸಿಕೊಳ್ಳಲಿಲ್ಲ. ಸಂಸ್ಥೆಯೂ ಅವರಿಗಾಗಿ ಅಲ್ಲ; ಅವರ ಅನಂತರದ ಪೀಳಿಗೆಯ ಋಜುಜೀವನಕ್ಕಾಗಿ, ಸುಖ ಜೀವನಕ್ಕಾಗಿ. ಬೆಂಗಳೂರಿನಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಡಿ.ವಿ.ಜಿ.ಯವರ ನೆನಪನ್ನುಳಿಸುವ ಸಾರ್ಥಕ ಕಾರ್ಯವನ್ನು ಮಾಡುತ್ತಿದೆ. ಡಿ.ವಿ.ಜಿ.ಯವರು ಅವರ ಗ್ರಂಥಗಳ ಮೂಲಕ ನಮಗೆ ಸಂದೇಶವನ್ನು ನೀಡುತ್ತಲೇ ಇದ್ದಾರೆ.
(ಲೇಖಕರು ವಿದ್ವಾಂಸ, ಸಾಹಿತಿ ಹಾಗೂ ಸಂಶೋಧಕರು)