

‘ಗಂಗಾ ಪಾಪಂ ಶಚೀತಾಪಂ ದೇನ್ಯಕಲ್ಪತರುಸ್ತಥಾ |
ಪಾಪಂ ತಾಪಂಚ ದೈೕನ್ಯಂಚ ಹರಯೇತ್ ಶ್ರೀಗುರು ದರ್ಶನಾತ್ ||
ಗಂಗೆಯಲ್ಲಿ ನಮ್ಮ ಪಾಪವನ್ನು, ಶಶಿಯು ತಾಪವನ್ನು, ಕಲ್ಪವೃಕ್ಷವು ದೈನ್ಯವನ್ನು ನಾಶ ಮಾಡುತ್ತದೆ. ಆದರೆ ಶ್ರೀ ಗುರು ದತ್ತಾತ್ರೇಯನ ದರ್ಶನವಾದರೆ ಈ ಮೂರು ಅಂದರೆ ಪಾಪ, ತಾಪ, ದೈನ್ಯ ಎಲ್ಲವೂ ನಾಶವಾಗುವಂಥದ್ದು. ಅಷ್ಟೊಂದು ಮಹತ್ವದ ಶಕ್ತಿ ಶ್ರೀಗುರು ದತ್ತಾತ್ರೇಯನಲ್ಲಿದೆ.
ದತ್ತಾತ್ರೇಯ ಜನನ: ಬ್ರಹ್ಮನ ಮಾನಸಪುತ್ರರಾದ ಅತ್ರಿ ಮಹರ್ಷಿ ಹಾಗೂ ದೇವಹೂತಿ-ಕರ್ದಮ ಪ್ರಜಾಪತಿಯ ದ್ವಿತೀಯ ಸುಪುತ್ರಿ ಅನಸೂಯಾ ಮಗುವೇ ಶ್ರೀಗುರು ದತ್ತಾತ್ರೇಯ. ಅತ್ರಿ ಮಹರ್ಷಿ-ಅನಸೂಯಾ ದಂಪತಿ ಧರ್ಮನಿಷ್ಠರು, ವ್ರತನಿಷ್ಠರು, ಸದಾಚಾರ ಸಂಪನ್ನರಲ್ಲಿ ಅಗ್ರೇಸರರು. ಅತ್ರಿ ಮಹರ್ಷಿ ಸದಾಕಾಲ ಧ್ಯಾನ, ಅನುಷ್ಠಾನ, ತ್ರಿಕಾಲ ಸಂಧ್ಯಾ, ಅಗ್ನಿಹೊತ್ರ ಇತ್ಯಾದಿಗಳಲ್ಲೇ ನಿರತರಾಗಿರುವವರು. ಅನಸೂಯಾ ಪತಿಯ ಅನುಷ್ಠಾನಕ್ಕೆ ಸಹಾಯ ಮಾಡುತ್ತ ಪತಿವ್ರತ ಶಿರೋಮಣಿ ಆದವಳು. ಈಕೆಯ ಪಾತಿವ್ರತ್ಯ ಜಗತ್ ಪ್ರಸಿದ್ಧಿಯಾಗಿತ್ತು. ಜತೆಗೆ ಈ ದಂಪತಿ ಆಶ್ರಮದಲ್ಲಿ ಮಾಡುತ್ತಿದ್ದ ನಿರಂತರ ಅತಿಥಿಸತ್ಕಾರ ಕೂಡ ಪ್ರಸಿದ್ಧಿಗೆ ಬಂದಿತ್ತು. ಅನಸೂಯಾಳ ಪಾತಿವ್ರತ್ಯ ಶಕ್ತಿಗೆ ದೇವತೆಗಳೆಲ್ಲರೂ ಭಯಭೀತರಾಗಿದ್ದರು.
ಒಂದು ದಿನ ಸಮಸ್ತ ದೇವತೆಗಳೆಲ್ಲರೂ ಸೇರಿ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಹೋಗಿ ಅತ್ರಿ ಮಹರ್ಷಿ ಮತ್ತು ಅನಸೂಯಾ ಅವರ ಅತಿಥಿಸತ್ಕಾರ, ಪಾತಿವ್ರತ್ಯದ ಬಗ್ಗೆ ತಿಳಿಸಿದರು. ಇದೇ ರೀತಿ ಮುಂದುವರಿದರೆ ಈ ದೇವ ಲೋಕವನ್ನು ಆ ದಂಪತಿಗೆ ಒಪ್ಪಿಸುವ ಕಾಲ ಬಂದೀತು ಎಂದು ಗಮನಕ್ಕೆ ತಂದರು. ಆಗ ಹರಿ, ಹರ, ಬ್ರಹ್ಮರು ಅತಿಥಿವೇಷ ಧರಿಸಿ ಅತ್ರಿ ಮಹರ್ಷಿ ಆಶ್ರಮಕ್ಕೆ ಬಂದರು.
ಎಂದಿನಂತೆ ಅತ್ರಿ ಮಹರ್ಷಿ ಅನುಷ್ಠಾನಕ್ಕಾಗಿ ನದಿತೀರಕ್ಕೆ ಹೋಗಿದ್ದರು. ಅನಸೂಯಾ ಆಶ್ರಮ ಕೆಲಸದಲ್ಲಿ ನಿರತಳಾಗಿದ್ದಳು. ತ್ರಿಮೂರ್ತಿಗಳು ಅತಿಥಿ ವೇಷದಲ್ಲಿ ಬಂದು ‘ಭಿಕ್ಷಾಂದೇಹಿ’ ಎಂದರು. ಅದನ್ನು ಕೇಳುತ್ತಲೇ ಅನಸೂಯಾ ಎಲ್ಲ ಕೆಲಸ ಬಿಟ್ಟು ಅತಿಥಿಗಳಿಗೆ ಪಾದ್ಯ, ಅರ್ಘ್ಯ ಕೊಟ್ಟು ಉಪಚರಿಸಿದಳು. ನಂತರ ಅತಿಥಿಗಳು, ‘ಬಹಳ ಹಸಿವಾಗಿದೆ. ಕಾರಣ ಇಚ್ಛಾಭೋಜನವಾಗಬೇಕು’ ಎಂದರು. ಆಗ ಅನಸೂಯಾ ಅಡುಗೆಯನ್ನು ಸಿದ್ಧ ಮಾಡಿ ಊಟ ಬಡಿಸಲು ಸಿದ್ಧಳಾದಳು. ಆಗ ಅತಿಥಿಗಳು, ‘ನಮಗೆ ಇನ್ನೊಂದು ಆಸೆ ಆಗಿದೆ. ಅದೇನೆಂದರೆ ನೀನು ವಿವಸ್ತ್ರಳಾಗಿ ಊಟ ಬಡಿಸಬೇಕು’ ಎಂದರು. ಆಗ ಅನಸೂಯಾ, ನನ್ನ ಪಾತಿವ್ರತ್ಯಕ್ಕೆ ಇಷ್ಟೊಂದು ಕಠಿಣ ಪರೀಕ್ಷೆ ಸೃಷ್ಟಿಯಾಗಿದೆ ಎಂದರೆ ಬಂದಂಥ ಅತಿಥಿಗಳು ಹರಿಹರ, ಬ್ರಹ್ಮರೆ ಎಂದು ತಿಳಿದು ಭಗವಂತನಲ್ಲಿ ಪ್ರಾರ್ಥಿಸಿ ತನ್ನ ಪತಿದೇವನನ್ನು ಮನಸಾ ವಂದಿಸಿದಳು. ಕೂಡಲೇ ಆ ಮೂವರು ಅತಿಥಿಗಳು ಶಿಶುಗಳಾಗಿ ರೋದಿಸಲು ಆರಂಭಿಸಿದರು. ಅನಸೂಯಾ ಸಂತೋಷಭರಿತಳಾಗಿ ಆ ಶಿಶುಗಳಿಗೆ ಸ್ತನಪಾನ ಮಾಡಿಸಿದಳು. ಆ ಕ್ಷಣದಲ್ಲಿ ಅತ್ರಿ ಮಹರ್ಷಿ ಆಶ್ರಮಕ್ಕೆ ಬಂದು ನೋಡುವಷ್ಟರಲ್ಲಿ ಮೂರು ಮುದ್ದಾದ ಶಿಶುಗಳು ಕಂಡವು. ನಂತರ ದಿವ್ಯದೃಷ್ಟಿಯಿಂದ ನೋಡಿದಾಗ ನಡೆದ ಸಂಗತಿ ಅವರಿಗೆ ತಿಳಿಯಿತು.
ಹರಿ, ಹರ, ಬ್ರಹ್ಮರು ಪ್ರತ್ಯಕ್ಷರಾದರು. ಆಗ ಬ್ರಹ್ಮದೇವರು ಅನಸೂಯೆಗೆ ವಂದಿಸಿ, ‘ನಾನು ಚಂದ್ರನಾಗಿ ನಿತ್ಯ ನಿಮ್ಮ ದರ್ಶನ ಪಡೆಯುತ್ತೇನೆ, ಆಶೀರ್ವದಿಸಿ’ ಅಂತ ಹೇಳಿ ಚಂದ್ರಮಂಡಲ ಸೇರಿದ. ಪರಮೇಶ್ವರನು, ‘ನಾನು ದುರ್ವಾಸ ಮಹರ್ಷಿಯಾಗಿ ತಪಸ್ಸು ಮಾಡಬೇಕು’ ಅಂತ ವನಕ್ಕೆ ತೆರಳಿದ. ಇನ್ನು ವಿಷ್ಣುವು ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಯನ್ನು ಹೊಂದಿ ದತ್ತಾತ್ರೇಯ ಅವತಾರವಾಯಿತು. ದತ್ತ ಅಂದರೆ ತನ್ನನ್ನು ತಾನೇ ಇನ್ನೊಬ್ಬರಿಗೆ ಒಪ್ಪಿಸುವುದು ಅಂತ. ಅತ್ರಿ ಮಹರ್ಷಿಗೆ ವಿಷ್ಣುವು ತನ್ನನ್ನು ತಾನೇ ಅರ್ಪಿಸಿದ ಕಾರಣ ಈ ಅವತಾರಕ್ಕೆ ‘ದತ್ತಾತ್ರೇಯ’ ಹೆಸರು ಬಂತು. ಇದರಿಂದ ತಿಳಿಯುವುದೇನೆಂದರೆ ನಾವು ಮಾಡುವ ಪ್ರತಿಯೊಂದು ಕಾರ್ಯ ವ್ರತಾಚರಣೆಯೇ. ಎಂತಹ ಕಠಿಣ ಪರಿಸ್ಥಿತಿ ಯಲ್ಲೂ ಅನುಷ್ಠಾನಗಳನ್ನು ನಿರಂತರ ಮಾಡುತ್ತಿದ್ದರೆ ಭಗವಂತ ನಮಗೆ ಸಾಕ್ಷಾತ್ಕಾರ ಆಗುವುದರಲ್ಲಿ ತಡವೇ ಇಲ್ಲ. ಇನ್ನೊಂದು ಅಂಶವೆಂದರೆ ನಮ್ಮ ಅನುಷ್ಠಾನಕ್ಕೆ ಅಥವಾ ಒಳ್ಳೆಯ ಕಾರ್ಯಕ್ಕೆ ಅಡಚಣೆ, ವಿಘ್ನಗಳು ಬರುತ್ತಿವೆ ಎಂದರೆ ಭಗವಂತ ನಮ್ಮನ್ನು ಪರೀಕ್ಷಿಸುತ್ತಿರುವವನು ಎಂದರ್ಥ. ಅಂತಹ ಸಂದರ್ಭದಲ್ಲಿ ನಮ್ಮ ಮನಸ್ಸು ಸ್ಥಿರ ಮಾಡಿಕೊಂಡು ಪ್ರಯತ್ನ ನಿರಂತರ ಸಾಗಿದರೆ ಆ ಭಗವಂತ ಖಂಡಿತ ನಮ್ಮನ್ನು ಕಾಪಾಡುವನು. ಈ ಒಂದು ಕಥಾಪ್ರಸಂಗ ನಡೆದ ದಿನವೇ ಈ ‘ಶ್ರೀದತ್ತ ಜಯಂತಿ’ ಉತ್ಸವ. ಶ್ರೀಗುರುದತ್ತಾತ್ರೇಯ ಮುಂದೆ ಅನೇಕ ಅವತಾರಗಳನ್ನು ತಳೆದು ಸಮಸ್ತ ಮನುಕುಲ ಉದ್ಧಾರ ಮಾಡಿದ. ನರಸಿಂಹ ಸರಸ್ವತಿ, ಶ್ರೀಪಾದ ಶ್ರೀವಲ್ಲಭ, ಮಾಣಿಕಪ್ರಭು, ಸಮರ್ಥ ರಾಮದಾಸರು, ನವನಾಥರು ಇವೇ ಮೊದಲಾದ ಪ್ರಮುಖ ದತ್ತಾತ್ರೇಯನ ಅವತಾರಗಳು. ಜಗತ್ತಿನಾದ್ಯಂತ ಬೇರೆ-ಬೇರೆ ಕ್ಷೇತ್ರಗಳಲ್ಲಿ ಅವತಾರವಾಗಿ ಅನೇಕ ಪವಾಡಗಳನ್ನು ಮಾಡಿ ಜನರನ್ನು ಉದ್ಧರಿಸಿ, ಮೋಕ್ಷವನ್ನು ಕಲ್ಪಿಸಿದ ಕಲ್ಪವೃಕ್ಷವಾದರು. ಯಾರು ದತ್ತಾತ್ರೇಯನ ಜಪ-ತಪ, ಅನುಷ್ಠಾನ, ಗುರುಚರಿತ್ರೆ ಪಾರಾಯಣ, ಶ್ರೀ ಗುರುಗಳ ಭಜನೆ ಈ ಪ್ರಕಾರವಾದಂಥ ನವವಿಧ ಭಕ್ತಿ ಮಾಡುವರೋ ಅವರಿಗೆ ಶ್ರೀ ಗುರುಗಳು ಆಶೀರ್ವದಿಸಿ ನಿರಂತರ ಕಾಪಾಡುತ್ತಾರೆ.
(ಲೇಖಕರು ಕಲಬುರಗಿ ಗಂಗೋತ್ರಿ ವೇದ ಪಾಠಶಾಲೆಯ ಮುಖ್ಯಸ್ಥರು)