ಚೀನಾ ಮೊಬೈಲ್​​ ಕಂಪನಿಗಳ ಕಳ್ಳಾಟ: ಸುದ್ದಿ ಸಮಗ್ರ

China
Published on

ಭಾರತದಲ್ಲಿ ನೆಲೆಯೂರಿರುವ ಚೀನಾದ ಮೊಬೈಲ್ ಕಂಪನಿಗಳು ವಾಣಿಜ್ಯ ವಹಿವಾಟಿನಲ್ಲಿ ಕಳ್ಳಾಟ ಆಡುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಅವುಗಳು ಸಲ್ಲಿಸಿರುವ ಲೆಕ್ಕಪತ್ರಗಳಲ್ಲಿ ಗರಿಷ್ಠ ವ್ಯಾಪಾರ ಮಾಹಿತಿ ಇದ್ದು, ಅದನ್ನು ಮೀರಿದ ನಷ್ಟವನ್ನೂ ತೋರಿಸಿವೆ. ಇದು ಸಂದೇಹಕ್ಕೆ ಕಾರಣವಾಗಿದೆ. ಹೀಗಾಗಿ ಚೀನಿ ಮೊಬೈಲ್ ಕಂಪನಿಗಳ ವಿರುದ್ಧ ಬಹು ಸಂಸ್ಥಾ ತನಿಖೆಯನ್ನು ಆರಂಭಿಸಿದೆ. ಈ ವಿದ್ಯಮಾನದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಭಾರತ ಪಾಲಿಗೆ ಚೀನಾ ಮಗ್ಗುಲ ಮುಳ್ಳು. ಚೀನಾ ತನ್ನ ಗಡಿಭಾಗದಲ್ಲಿ ಎಲ್ಲ ರಾಷ್ಟ್ರಗಳ ಗಡಿ ಅತಿಕ್ರಮಿಸುವುದನ್ನು ಮಾಡುತ್ತಲೇ ಇದೆ. ಇದಲ್ಲದೆ, ಬೇರೆ ಬೇರೆ ದೇಶಗಳ ಮೂಲ ಸೌಕರ್ಯ ಮತ್ತು ಇತರೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಅದರ ಮೇಲೆ ಪರೋಕ್ಷ ಪ್ರಭುತ್ವ ಸ್ಥಾಪಿಸುವ ಲೆಕ್ಕಾಚಾರ ಕೂಡ ಈಗ ಜಗಜ್ಜಾಹೀರು. ಈಗ ಆ ದೇಶದ ಕಂಪನಿಗಳು ವಾಣಿಜ್ಯ ವಹಿವಾಟುಗಳಲ್ಲಿ ಕಳ್ಳಾಟ ನಡೆಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಕಂಪನಿಗಳು ಸಲ್ಲಿಸಿರುವ ತೆರಿಗೆ ರಿಟರ್ನ್ಸ್​ಗಳಲ್ಲಿ ಲಗತ್ತಿಸಿರುವ ವಹಿವಾಟು ದಾಖಲೆಗಳು ಈ ಶಂಕೆಗೆ ಇಂಬು ನೀಡುವಂತೆ ಇವೆ. ಹೀಗಾಗಿ ಕೇಂದ್ರ ಸರ್ಕಾರವು ಈ ಕಂಪನಿಗಳ ಲೆಕ್ಕಪತ್ರ ಪರಿಶೋಧನೆಗಾಗಿ ಜಾರಿನಿರ್ದೇಶನಾಲಯ, ಜಿಎಸ್​ಟಿ ಅಧಿಕಾರಿಗಳ ತಂಡಗಳನ್ನು ಒಳಗೊಂಡಂತೆ ಬಹುಸಂಸ್ಥಾ ತನಿಖೆಯನ್ನು ಆರಂಭಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ಸಂಸ್ಥೆಗಳು ನಷ್ಟವನ್ನೇ ತೋರಿಸುತ್ತ ಬಂದಿವೆ. ತೆರಿಗೆ ಬಾಧ್ಯತೆ ತಪ್ಪಿಸುವ ಸಲುವಾಗಿ ಈ ಕಂಪನಿಗಳು ಉದ್ದೇಶ ಪೂರ್ವಕವಾಗಿ ಆದಾಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ.

ಮಾರುಕಟ್ಟೆ ಪಾರಮ್ಯ: ದೇಶದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಈ ಕಂಪನಿಗಳದ್ದೇ ಪಾರಮ್ಯ. ಇವುಗಳಿಗೆ ಹೋಲಿಸಿದರೆ ದೇಶೀಯ ಕಂಪನಿಗಳ ವಹಿವಾಟು ಏನೂ ಅಲ್ಲ. ಇಷ್ಟಿದ್ದರೂ ತೆರಿಗೆ ವಂಚಿಸುವ ಸಲುವಾಗಿ ಈ ಕಂಪನಿಗಳು ಅನುಸರಿಸುತ್ತಿರುವ ವಹಿವಾಟು ಪ್ರಕ್ರಿಯೆಯ ಮೇಲೆ ಈಗ ತೆರಿಗೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಸ್ಮಾರ್ಟ್​ಫೋನ್​ಗಳ ಬಿಡಿಭಾಗಗಳು ಮತ್ತು ಅವುಗಳ ವಿತರಣಾ ಜಾಲಕ್ಕೆ ಸಂಬಂಧಿಸಿ ಪಾರದರ್ಶಕವಲ್ಲದ ವ್ಯವಸ್ಥೆ ಯನ್ನು ಅನುಸರಿಸುತ್ತಿವೆ. ಇದರ ಮೇಲೆ ಕೂಡ ಈಗ ಗಮನಹರಿ ಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಂಪನಿಗಳಿಗೆ ಪ್ರಶ್ನಾವಳಿಗಳ ರವಾನೆ: ಚೀನಾದ ಮುಂಚೂಣಿ ಇಲೆಕ್ಟ್ರಾನಿಕ್ ಕಂಪನಿ ಬಿಬಿಕೆಯ ಅಧೀನ ಕಂಪನಿಗಳಾದ ಒಪ್ಪೊ ಮತ್ತು ವಿವೊಗಳಿಗೆ ಮತ್ತು ಷಒಮಿಗೆ ಪ್ರಶ್ನಾವಳಿಗಳನ್ನು ತೆರಿಗೆ ಇಲಾಖೆ ಕಳುಹಿಸಿದೆ. ಭಾರತದಲ್ಲಿ ಒನ್​ಪ್ಲಸ್ ಮತ್ತು ರಿಯಲ್​ವಿು ಬ್ರ್ಯಾಂಡ್​​ಗಳು  ಬಿಬಿಕೆಯ ಅಧೀನ ಇವೆ. ಈ ಪ್ರಶ್ನೆಗಳಿಗೆ ಕಂಪನಿಗಳು ಇನ್ನೂ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದುವರಿದ ಶೋಧ: ತೆರಿಗೆ ವಂಚನೆಗೆ ಸಂಬಂಧಿಸಿ ಬಹು-ಸಂಸ್ಥೆಗಳ ತನಿಖಾ ತಂಡಗಳು ಈ ಕಂಪನಿಗಳ ಆವರಣದಲ್ಲಿ ದಾಖಲೆಗಳನ್ನು, ಕಡತಗಳನ್ನು ಪರಿಶೋಧಿಸುತ್ತಿವೆ. ಆದಾಯ ತೆರಿಗೆ ಇಲಾಖೆ, ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ತಂಡಗಳು ಈ ಕೆಲಸದಲ್ಲಿ ತೊಡಗಿವೆ. ಇವುಗಳ ಜತೆಗೆ, ಮುಕ್ತ ನ್ಯಾಯಸಮ್ಮತ ವಹಿವಾಟು ನಿಯಮಗಳ ಉಲ್ಲಂಘನೆ ವಿಚಾರ ಪರಿಶೀಲಿಸಲು ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ ಕೂಡ ಸೇರಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಳವಳಕಾರಿ ಅಂಶಗಳು

  • ಭಾರತೀಯ ಮಾರುಕಟ್ಟೆಯ ಬಹುಪಾಲು ಮತ್ತು ಗರಿಷ್ಠ ಆದಾಯ ಇದ್ದಾಗ್ಯೂ ಚೀನಾ ಕಂಪನಿಗಳು ಲಾಭಾಂಶ ತೋರಿಸುತ್ತಿಲ್ಲ.
  • ವಹಿವಾಟಿನಲ್ಲಿ ನಷ್ಟ ತೋರಿಸುವುದು ಎಂದರೆ ಸರ್ಕಾರಕ್ಕೆ ತೆರಿಗೆ ತುಂಬಬೇಕಾದ ಅವಶ್ಯಕತೆ ಇಲ್ಲ ಎಂದರ್ಥ.
  • ಚೀನಾದ ಬಿಡಿಭಾಗಗಳ ಪೂರೈಕೆದಾರರ ವಹಿವಾಟು ಗಳಲ್ಲೂ ಕಳ್ಳಾಟ
  • ಭಾರತೀಯ ಕಂಪನಿಗಳ ವಿತರಣಾ ಜಾಲದೊಂದಿಗೆ ಈ ಕಂಪನಿಗಳ ನೇರ ವಹಿವಾಟಿನ ಕೊರತೆ

ಯಾವ್ಯಾವ ತನಿಖೆ?

  • ಆದಾಯ ತೆರಿಗೆ ಇಲಾಖೆ
  • ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್
  • ರಿಜಿಸ್ಟ್ರಾರ್ ಆಫ್ ಕಂಪನೀಸ್
  • ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ)
  • ಜಾರಿ ನಿರ್ದೇಶನಾಲಯ

ವ್ಯಾವಹಾರಿಕ ಕಾರ್ಯಾಚರಣೆಯಲ್ಲಿ ನಷ್ಟ: ಚೀನಾದ ಈ ಕಂಪನಿಗಳು ರಿಜಿಸ್ಟ್ರಾರ್ ಆಫ್ ಕಂಪನೀಸ್​ಗೆ ಸಲ್ಲಿಸಿರುವ ವಿಶ್ಲೇಷಣಾ ವರದಿಯಲ್ಲಿ ವ್ಯಾವಹಾರಿಕ ಕಾರ್ಯಾಚರಣೆಯಲ್ಲಿ ನಷ್ಟ ಉಂಟಾಗಿದೆ ಎಂದು ತೋರಿಸಿವೆ. ಇದೇ ವೇಳೆ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಗರಿಷ್ಠ ವ್ಯಾಪಾರ ವಾಗಿರುವುದನ್ನೂ ದಾಖಲಿಸಿವೆ. ಮಾರುಕಟ್ಟೆಯಲ್ಲಿ ಬಹುಪಾಲು ಹೊಂದಿದ್ದರೂ ನಾಲ್ಕಾರು ವರ್ಷಗಳಿಂದ ನಷ್ಟವನ್ನೇ ತೋರಿಸುತ್ತಿರುವ ಕಂಪನಿಗಳ ನಡೆ ವ್ಯಾಪಕ ಸಂದೇಹಕ್ಕೆ ಕಾರಣವಾಗಿದೆ. ಈ ಕಂಪನಿಗಳು ದೇಶದ ಕಾನೂನಿನ ಲೋಪಗಳನ್ನು ತಮ್ಮ ಲಾಭಕ್ಕೆ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಲಕ್ಷ ಕೋಟಿಗೂ ಅಧಿಕ: ಚೀನಾದ ಈ ಮೂರು ಕಂಪನಿಗಳ ಸ್ಮಾರ್ಟ್​ಫೋನ್ ವಹಿವಾಟು ಭಾರತದ ಮಾರುಕಟ್ಟೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಇದೆ. 2019-20ರ ದತ್ತಾಂಶದಲ್ಲಿ ಇದು ಕಂಡುಬಂದಿದೆ. 2020-21ನೇ ಸಾಲಿನ ಹಣಕಾಸು ವಹಿವಾಟಿನ ದಾಖಲೆಗಳನ್ನು ಕಂಪನಿಗಳು ಇನ್ನೂ ಪ್ರಕಟಿಸಿಲ್ಲ. ಇದುವರೆಗೆ ಈ ಕಂಪನಿಗಳು ಭಾರತದಲ್ಲಿ ಸರಿಯಾಗಿ ತೆರಿಗೆಗಳನ್ನೆ ಪಾವತಿಸಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net