ಅಡಕೆಯಿಂದ ನೈಸರ್ಗಿಕ ಬಣ್ಣ; ಸಿಪ್ಪೆ, ಚೊಗರಿನಿಂದ ತಯಾರಿಸಿದ ಬಣ್ಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಮಾಂಡ್

Adake
Published on
ಅಡಕೆ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣದಿಂದ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ಅಡಕೆ ಕ್ಯಾನ್ಸರ್ ಕಾರಕ ಎಂಬ ಚರ್ಚೆಗಳು ಆರಂಭಗೊಂಡಾಗ, ಬೆಳೆಗಾರರ ಜಂಘಾಬಲವೇ ಕುಸಿದು ಹೋಗಿತ್ತು. ಮತ್ತೊಂದೆಡೆ ವಿದೇಶಿ ಅಡಕೆ ಆಮದು ಆತಂಕ, ಅದರ ಬೆನ್ನಲ್ಲೇ ಕಾಡಿದ ಎಲೆಚುಕ್ಕಿ ರೋಗ, ದರ ಕುಸಿತ ಇತ್ಯಾದಿ ಸಮಸ್ಯೆಗಳ ನಡುವೆಯೇ ಇದೀಗ ಒಂದಷ್ಟು ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದ್ದು, ಇತ್ತೀಚಿನ ಸಂಶೋಧನೆಗಳಿಂದ ಅಡಕೆ ಕ್ಯಾನ್ಸರ್​ಗೆ ಮದ್ದು ಎಂಬ ವಿಚಾರ ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೆ ಅಡಕೆ ಕಲ್ಪವೃಕ್ಷದಂತೆ ಬಹುಪಯೋಗಿಯಾಗುವೆಡೆಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇದೀಗ ಬಣ್ಣಗಳ ತಯಾರಿಕೆಯಲ್ಲೂ ಮಹತ್ವದ ಪಾತ್ರ ವಹಿಸುವ ದಿನಗಳು ಹತ್ತಿರವಾಗುತ್ತಿವೆ.

ವಿಜಯವಾಣಿ ವಿಶೇಷ ಮಂಗಳೂರು: ಅಡಕೆ ‘ಮಂಗಳಕಾರಕ’ ಎಂಬ ಸಾಂಪ್ರಾದಾಯಿಕ ಮಹತ್ವದ ಜತೆ ಅಡಕೆ ಚೊಗರಿನಿಂದ ನೈಸರ್ಗಿಕ ಬಣ್ಣ ತಯಾರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆಯೂ ಬಂದಿದೆ.

ಅಡಕೆ ಚೊಗರು ಹಾಗೂ ಒಣ ಅಡಕೆ ಸಿಪ್ಪೆಯಿಂದ ನೈಸರ್ಗಿಕ ಬಣ್ಣವನ್ನು ಪಡೆಯಲಾಗುತ್ತದೆ. ಶಿವಮೊಗ್ಗದ ಹೆಗ್ಗೋಡಿನ ಚರಕ ಮಹಿಳಾ ಸಹಕಾರಿ ಸಂಘ ತಯಾರಿಸುವ ಬಟ್ಟೆ ಉತ್ಪನ್ನಗಳಿಗೆ ಅಡಕೆಯಿಂದ ತಯಾರಿಸಿದ ಕಂದು ಹಾಗೂ ಕೆಂಪು ನೈಸರ್ಗಿಕ ಬಣ್ಣವನ್ನೇ ಬಳಸಲಾಗುತ್ತಿದ್ದು, ಪ್ರಸ್ತುತ ಇದರ ಬೇಡಿಕೆ ಹೆಚ್ಚಿದೆ. ವಿಶೇಷವೆಂದರೆ ಚನ್ನಪಟ್ಟಣದ ಗೊಂಬೆ ಹಾಗೂ ಆಂಧ್ರಪ್ರದೇಶದಲ್ಲಿ ತಯಾರಾಗುವ ಏಟಿಕೊಪ್ಪಕ ಪಾರಂಪರಿಕ ಗೊಂಬೆಗಳಿಗೆ ಅಡಕೆಯ ಮೌಲ್ಯವರ್ಧಿತ ಬಣ್ಣವನ್ನೇ ಬಳಸಿಕೊಂಡಿದ್ದರಿಂದ ಈ ಬೊಂಬೆಗಳ ಪಾರಂಪರಿಕ ಹಾಗೂ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ.

ಪ್ರತೀ ವರ್ಷ ಎರಡು ಲಕ್ಷ ಲೀಟರ್ ಚೊಗರು ಸಂಗ್ರಹ: ಹೆಗ್ಗೋಡುವಿನ ಚರಕ ಮಹಿಳಾ ಸಹಕಾರಿ ಸಂಘ ಪ್ರಥಮ ಬಾರಿಗೆ ಅಡಕೆ ಚೊಗರಿನ ನೈಸರ್ಗಿಕ ಬಣ್ಣ ಬಳಸಿ ಬಟ್ಟೆ ಸಿದ್ಧಪಡಿಸಲಾಗಿತ್ತು. ಪ್ರತೀ ವರ್ಷ 3 ಸಾವಿರ ಲೀ. ಅಡಕೆ ಚೊಗರನ್ನು ಬಣ್ಣಕ್ಕಾಗಿ ಇಲ್ಲಿ ಬಳಸುತ್ತಿದ್ದಾರೆ. ಜಪಾನಿನಲ್ಲಿ ಅಡಕೆಯಿಂದ ತಯಾರಿಸಿದ ಬಣ್ಣಕ್ಕೆ ಬಿನ್​ರೌಜಿ (binrougi) ಎಂದು ಕರೆಯಲಾಗುತ್ತದೆ. ಅಲ್ಲಿನ ರಾಜವಂಶಸ್ಥರು 1200 ವರ್ಷಗಳಿಂದ ಬಣ್ಣವನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದರು. ಖಾಸಗಿ ಸಂಸ್ಥೆಗಳು ಮಲೆನಾಡಿನ ಮನೆ, ಮನೆಗಳಿಂದ ಪ್ರತೀ ವರ್ಷ 2 ಲಕ್ಷ ಲೀ. ಅಡಕೆ ಚೊಗರು ಸಂಗ್ರಹಿಸುತ್ತದೆ. ನಂತರ ಸಂಸ್ಕರಿಸಿ, ಜೇನಿನ ರೀತಿ ಸಾಂದ್ರೀಕರಿಸುವುದರಿಂದ ಬಣ್ಣ ನೀಡುವ ಟಾನಿನ್(Tannin) ಪಡೆಯಲಾಗುತ್ತದೆ.

ಖುಷಿ ತಂದ ಆಮದು ಸುಂಕ ಹೆಚ್ಚಳ: ಅಡಕೆ ರೈತರ ಹಿತ ಕಾಪಾಡುವ ಹಾಗೂ ಸ್ಥಳೀಯ ಅಡಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಡಕೆ ಮೇಲಿನ ಕನಿಷ್ಠ ಆಮದು ದರದಲ್ಲಿ (ಎಂಐಪಿ) ಹೆಚ್ಚಳ ಮಾಡಿದೆ. ಕೇಂದ್ರ ವಾಣಿಜ್ಯ ಇಲಾಖೆ ಒಂದು ಕಿಲೋ ಅಡಕೆ ಆಮದಿಗೆ 251 ರೂಪಾಯಿ ನಿಗದಿ ಮಾಡಿತ್ತು. ಈ ಪ್ರಮಾಣವನ್ನು 351 ರೂ.ಗೆ ಏರಿಸಲಾಗಿದೆ. ಅಂದರೆ, ಎಲ್ಲ ತರಹದ ಅಡಕೆ ಆಮದು ಕನಿಷ್ಠ ಬೆಲೆಯಲ್ಲಿ 100 ರೂ. ಹೆಚ್ಚಳ ಆದಂತಾಗಿದ್ದು, ಇದರಿಂದ ಸ್ಥಳೀಯ ಅಡಕೆಗೆ ಉತ್ತಮ ಬೆಲೆ ಸಿಗಲಿದೆ.

ದೇಶದ 8-9ರಾಜ್ಯಗಳಲ್ಲಿ ಅಡಕೆ ಬೆಳೆ ಇದೆ. ಅಡಕೆಯಿಂದ ಬಣ್ಣ ತಯಾರಿ ಬಗ್ಗೆ ಶೇ.90 ಬೆಳೆಗಾರರಿಗೆ ಮಾಹಿತಿ ಇಲ್ಲ. ಸ್ವಾಭಾವಿಕವಾಗಿ ಬಣ್ಣ ಉತ್ಪಾದಿಸುವ ಸಂಸ್ಥೆಗಳಿಗಷ್ಟೇ ಮಾಹಿತಿ ಇದೆ. ಮೂರು ವರ್ಷಗಳ ಹಿಂದೆ ರಾಜಸ್ಥಾನದ ಒಂದು ಸಂಸ್ಥೆ ಅಡಕೆ ಚೊಗರಿನಿಂದ ಬಣ್ಣ ತಯಾರಿಸುವ ಸಂಶೋಧನೆ ನಡೆಸಿತ್ತು. ಬೆಳೆಗಾರರಿಂದ ಚೊಗರು ಖರೀದಿಸಿ ‘ಸ್ಪ್ರೇ ಡ್ರೖೆ’ ವಿಧಾನದ ಮೂಲಕ ಚೊಗರಿನ ಹುಡಿ (ನಟ್ ಬ್ರೌನ್) ಸಿದ್ಧಪಡಿಸಲಾಗಿತ್ತು. ಇದು ವಿಶ್ವಾದ್ಯಂತ ಬೇರೆ ಬೇರೆ ಭಾಗಗಳಿಗೆ ರಫ್ತಾಗುತ್ತಿದೆ. | ಶ್ರೀಪಡ್ರೆ ಕೃಷಿ ತಜ್ಞ

ಏನಿದು ಅಡಕೆ ಬಣ್ಣ?: ಮಲೆನಾಡಿನಲ್ಲಿ ಕೆಂಪಡಕೆ ಸಂಸ್ಕರಣೆ ಸಂದರ್ಭ ಸಿಗುವ ಉತ್ಪನ್ನವನ್ನು ಅಡಕೆ ಚೊಗರು ಎನ್ನಲಾಗುತ್ತದೆ. ಈ ಚೊಗರಿನಲ್ಲಿ ಟಾನಿನ್(Tannin) ಎಂಬ ನೈಸರ್ಗಿಕ ವಸ್ತು ಹೇರಳವಾಗಿ ಲಭ್ಯವಾಗುತ್ತದೆ. ಇದರಿಂದಲೇ ಬಣ್ಣ ತಯಾರಿಸಲಾಗುತ್ತದೆ. 1 ಕ್ವಿಂಟಾಲ್ ಕೆಂಪಡಕೆ ಸಂಸ್ಕರಿಸಿದರೆ, 3ರಿಂದ 6 ಲೀಟರ್ ಟನಿನ್ ಲಭಿಸುತ್ತದೆ. ಒಂದು ಎಕರೆ ಅಡಕೆ ಬೆಳೆಯಿಂದ 60-70 ಕೆ.ಜಿ ಕೊಬ್ಬು ಹಾಗೂ 180-200 ಕೆ.ಜಿ ಬಣ್ಣ ತೆಗೆಯಬಹುದು. ಈ ನೈಸರ್ಗಿಕ ಬಣ್ಣವನ್ನು ಬಟ್ಟೆ ಉದ್ಯಮ ಮತ್ತು ಆಹಾರದಲ್ಲಿ ಹೇರಳವಾಗಿ ಬಳಸಿಕೊಳ್ಳಬಹುದು. ರಾಸಾಯನಿಕವಲ್ಲದ ಈ ಬಣ್ಣದ ಮೂಲ ಉತ್ಪನ್ನಕ್ಕೆ ಪ್ರತಿ ಕೆ.ಜಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25 ಸಾವಿರ ರೂ.ಗೂ ಅಧಿಕ ಬೆಲೆ ಇದೆ. ಕರಾವಳಿಯಲ್ಲಿ ಲಭ್ಯವಿರುವ ಚಾಲಿ ಅಡಕೆಯ ಒಣ ಸಿಪ್ಪೆಯನ್ನು ಸಂಸ್ಕರಿಸಿ ನೈಸರ್ಗಿಕ ಕಂದು ಬಣ್ಣ ಪಡೆಯಲಾಗುತ್ತದೆ. ಕೇರಳದ ಶೋರನೂರು ಎಂಬಲ್ಲಿ ‘ಫಾರ್ಮರ್ ಶೇರ್’ ಎಂಬ ಸಂಸ್ಥೆ ಉತ್ಪಾದಿಸುವ ಬಟ್ಟೆಗಳಿಗೆ ಚಾಲಿ ಅಡಕೆಯ ಒಣ ಸಿಪ್ಪೆಯನ್ನು ಸಂಸ್ಕರಿಸಿ ಪಡೆದ ಬಣ್ಣವನ್ನೇ ಬಳಸಲಾಗುತ್ತದೆ.

ನೈಸರ್ಗಿಕ ಬಣ್ಣಕ್ಕೆ ಬೇಡಿಕೆ: ಚೀನಾ, ಥೈವಾನ್, ಬಾಂಗ್ಲಾ, ಮಲೇಷ್ಯಾ, ಇಂಡೋನೇಷ್ಯಾ ಸೇರಿ ಪ್ರಪಂಚದ 50ಕ್ಕೂ ಅಧಿಕ ದೇಶಗಳು ಅಡಕೆಯಿಂದ ತಯಾರಾಗುವ ಸ್ವಾಭಾವಿಕ ಬಣ್ಣವನ್ನು ಬಳಸಿಕೊಳ್ಳುತ್ತಿವೆ. ಆಂಧ್ರದ ಕಲಂಕಾರಿ ಕಲೆಗಳಲ್ಲಿ ಪಾರಂಪರಿಕವಾಗಿ ನೈಸರ್ಗಿಕ ಬಣ್ಣ ಬಳಸಬೇಕೆಂಬ ನಿಯಮವೇ ಇದೆ. ಇದೇ ಕಾರಣಕ್ಕೆ ಇಲ್ಲಿ ಅಡಕೆಯಿಂದ ತಯಾರಿಸಿದ ಬಣ್ಣವನ್ನು ಬಳಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net