

| ರಮೇಶ್ ಮೈಸೂರು ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ತೊಡಕಾಗಿ ಪರಿಣಮಿಸಿದ್ದ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸೂತ್ರವೊಂದನ್ನು ಪ್ರಕಟಿಸಿದೆ. ಆ ಮೂಲಕ ಕಳೆದ ಐದು ವರ್ಷಗಳಿಂದ ಕಾಡುತ್ತಿದ್ದ ಕಗ್ಗಂಟನ್ನು ಬಿಡಿಸಿದೆ. ಇದರಿಂದಾಗಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಲ್ಲಿ ಉಂಟಾಗಿದ್ದ ಗೊಂದಲವೂ ಬಗೆಹರಿದಿದ್ದು, ಉದ್ಯೋಗಾಕಾಂಕ್ಷಿಗಳು ನಿರಾಳರಾಗುವಂತಾಗಿದೆ. ಕಳೆದ ಏಪ್ರಿಲ್ 27ರಂದು ನಡೆದ ಆಯೋಗದ ಸಭೆಯಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದ್ದಾರೆ. ಆಯೋಗವು 2016ರ ನ.3ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿನ ಚಿತ್ರಕಲಾ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದರನ್ವಯ ಪದವೀಧರು ಹಾಗೂ ಹಾಗೂ ಡಿಪ್ಲೊಮಾ ಪೂರೈಸಿದವರಿಗೆ ತಲಾ 230 ಹುದ್ದೆಗಳಂತೆ ಒಟ್ಟು 460 ಸ್ಥಾನ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು.
ಮಾನದಂಡವೇನು?: ಅಂತಿಮವಾಗಿ ಪರಿಷ್ಕೃತ ನೇಮಕಾತಿ ವಿಧಾನ ಹಾಗೂ ಆಯ್ಕೆಪಟ್ಟಿ ಸಿದ್ಧಪಡಿಸುವ ವಿಧಾನದ ಬಗ್ಗೆ ಕೆಪಿಎಸ್ಸಿ ಸ್ಪಷ್ಟತೆ ಪಡೆದುಕೊಂಡಿದೆ. ವಿದ್ಯಾರ್ಹತೆಗೆ ಅನುಸರಿಸುವ ಮಾನದಂಡಗಳನ್ನು ಪ್ರಕಟಿಸಿದೆ. ಅದರಂತೆ, ಚಿತ್ರಕಲಾ ಶಿಕ್ಷಕರು (ಡಿಪ್ಲೊಮಾ): ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ಪಬ್ಲಿಕ್ ಪರೀಕ್ಷೆಯಲ್ಲಿ (1,2 ಹಾಗೂ 5ನೇ ವರ್ಷ) ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಅಂಕಗಳ ಜ್ಯೇಷ್ಠತೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಈಗಾಗಲೇ ಅಧಿಸೂಚಿಸಲಾಗಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಪದವೀಧರ ಅಭ್ಯರ್ಥಿಗಳು: ಬಿಎಫ್ಎ, ಬಿವಿಎ ಮೂರು ವರ್ಷಗಳ ಪದವಿಯಲ್ಲಿ (ಫೌಂಡೇಷನ್ ಕೋರ್ಸ್ ಹೊರತುಪಡಿಸಿ) ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಜ್ಯೇಷ್ಠತೆಯ ಆಧಾರದಲ್ಲಿ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ನೇಮಕಾತಿಗೆ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ವಿದ್ಯಾರ್ಹತೆ ಗೊಂದಲ: ಡಿಪ್ಲೊಮಾ ಪೂರೈಸಿದ ಅಭ್ಯರ್ಥಿಗಳು ಆನ್ಲೈನ್ನಲ್ಲಿ ನಮೂದಿಸಿದ ಅಂಕಗಳಿಗೂ ಹಾಗೂ ವಿವಿಗಳಿಂದ ನಡೆಸಲಾಗುವ 1, 2, 5ನೇ ವರ್ಷದ ಪಬ್ಲಿಕ್ ಪರೀಕ್ಷೆ ಅಂಕಗಳಿಗೂ ವ್ಯತ್ಯಾಸ ಕಂಡುಬಂದಿತ್ತು. ಪದವೀಧರ ಅಭ್ಯರ್ಥಿಗಳು ಬಿಎಫ್ಎ, ಬಿವಿಎ ಅಂಕ ನಮೂದಿಸಿದ್ದು, ಇನ್ನೂ ಕೆಲವರು ಫೌಂಡೇಷನ್ ಹಾಗೂ ಡಿಪ್ಲೊಮಾ ಕೋರ್ಸ್ ಅಂಕಗಳನ್ನು ನಮೂದಿಸಿದ್ದರು. ಇದರಿಂದಾಗಿ ಅಂಕಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವುದು ಕಷ್ಟಸಾಧ್ಯವಾಗಿತ್ತು.