

ಶಿವಮೊಗ್ಗ: ಸಂಗೀತ, ನೃತ್ಯ, ರಂಗಭೂಮಿ ಮುಂತಾದ ಕಲೆಗಳು ಮನುಷ್ಯತ್ವವನ್ನು ಬೆಳೆಸುತ್ತವೆ. ಕಲೆಗೆ ಎಲ್ಲರನ್ನೂ ಸೆಳೆಯುವ ಶಕ್ತಿಯಿದೆ. ಅದು ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ, ನೃತ್ಯ ಮತ್ತಿತರ ಕಲಾ ಮಾಧ್ಯಮಗಳು ಸಂತೋಷ, ಸಾಮರಸ್ಯಗಳನ್ನು ಬೆಳೆಸುತ್ತವೆ. ಸಂಸ್ಕಾರವನ್ನೂ ನೀಡುತ್ತವೆ. ಮಾನವೀಯ ಪ್ರಜ್ಞೆ ಬೆಳೆಸುತ್ತದೆ. ವಿಶ್ವ ಕುಟುಂಬ ಪ್ರೇಮವನ್ನು ಸೃಷ್ಟಿಸುತ್ತದೆ. ಮನುಷ್ಯ ಒಂದೇ ಜಾತಿ ಎಂಬ ಭಾವನೆಯನ್ನು ಮೂಡಿಸುತ್ತವೆ ಎಂದರು.
ಕಲಾವಿದನಿಗೆ ಹೊಣೆಗಾರಿಕೆ ಮುಖ್ಯ. ಕಲೆ ಎಂದಿಗೂ ದ್ವೇಷವನ್ನು ಭಿತ್ತಬಾರದು. ಯಾವುದೇ ಕಲೆಗಳು ಸಾಮಾಜಿಕ ಹೊಣೆಗಾರಿಕೆಯೊಳಗೆಯೇ ಪ್ರದರ್ಶನಗೊಳ್ಳಬೇಕು. ಕಲಾವಿದರು ಕೂಡ ಇದಕ್ಕೆ ಬದ್ಧರಾಗಿರಬೇಕು. ಆದರೆ ಇತ್ತೀಚಿನ ಕೆಲವು ಸಿನಿಮಾ ನಟರು ಅದರಲ್ಲೂ ಹಿಂದಿ ಸಿನಿಮಾ ನಟರು ಕಲೆಯನ್ನು ಜಾಹೀರಾತಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಕಲೆ ನೈತಿಕತೆ ಮತ್ತು ಸೃಜನ ಶೀಲತೆಯನ್ನು ಸೃಷ್ಟಿಸಬೇಕು. ಮನುಷ್ಯನ ಸಂವೇದನೆಗಳನ್ನು ಬೆಳೆಸಬೇಕು. ಸಮಾಜಕ್ಕೆ ಒಂದು ಶಕ್ತಿಯಾಗಬೇಕು. ಯುವಕರು ಈ ನಿಟ್ಟಿನತ್ತ ಸಾಗಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸಂಗೀತ ನೃತ್ಯ ಮುಂತಾದ ಕಲೆಗಳು ಉಳಿಯಬೇಕು. ಇಂತಹ ಕಾರ್ಯಕ್ರಮಗಳು ಆಸಕ್ತರಿಗೆ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಆಯೋಜನೆ ಮಾಡದೇ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿರುವುದು ಉತ್ತಮ ಸಂಗತಿಯಾಗಿದೆ. ಸಹೃದಯ ಪ್ರೇಕ್ಷಕರನ್ನು ತಯಾರು ಮಾಡುವ ಕೆಲಸ ನಮ್ಮೆಲ್ಲರದ್ದು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಸಂಜೆ ನಡೆದರೆ ಹೆಚ್ಚು ಪ್ರೇಕ್ಷಕರು ಬರುತ್ತಾರೆ. ಸಂಗೀತ, ನೃತ್ಯ ಶಾಲಾ, ಕಾಲೇಜುಗಳಲ್ಲಿ ಪಠ್ಯದ ಒಂದು ಭಾಗವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಅಕಾಡೆಮಿಯ ಅಧಿಕಾರಿ ಎನ್.ನರೇಂದ್ರಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಅಕಾಡೆಮಿ ಸದಸ್ಯರುಗಳಾದ ಡಾ.ಬಿ.ವಿ.ಗೀತಾ, ಸವಿತಾ ಅಮರೇಶ್ ನುಗಡೋಣಿ, ಉಷಾ ಬಸಪ್ಪ, ಡಿ.ಆರ್.ನಿರ್ಮಲಾ ಮುಂತಾದವರಿದ್ದರು.