ಯೂನಿವರ್ಸಿಟಿ ಪ್ರೊಫೆಸರ್ ಮನೆಯ ನೆಲಮಾಳಿಗೆಯಲ್ಲಿ ಮನುಷ್ಯರ ನಾಲಿಗೆ, ಭ್ರೂಣಗಳನ್ನು ತುಂಬಿದ ಜಾಡಿಗಳು...

Florida 19 Feb 20
Published on

ಫ್ಲೋರಿಡಾ: ವಿಶ್ವವಿದ್ಯಾಲಯದ ಅಧ್ಯಾಪಕನೋರ್ವ ವಾಸವಾಗಿದ್ದ ಮನೆಯಲ್ಲಿ ಮನುಷ್ಯನ ನಾಲಿಗೆ ಸೇರಿ ಹಲವು ಅಂಗಗಳ ತುಂಡುಗಳು, ಭ್ರೂಣಗಳು ತುಂಬಿರುವ 6-8 ಜಾಡಿಗಳು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಗೇನ್ಸ್‌ವಿಲ್ಲೆಯ ಬ್ರೈವುಡ್​ನ ಸಮೀಪದಲ್ಲಿ ಈ ಮನೆಯಿದೆ. ಮನೆಯ ಸಣ್ಣ ನೆಲಮಾಳಿಗೆಯಂತಹ ಪ್ರದೇಶದಲ್ಲಿ, ನಿಲ್ಲಲೂ ಸರಿಯಾಗಿ ಸಾಧ್ಯವಾಗದ ಜಾಗದಲ್ಲಿ ಈ ಜಾಡಿಗಳು ಪೊಲೀಸರಿಗೆ ಸಿಕ್ಕಿದ್ದವು.

ಆ ಜಾಡಿಗಳ ಮೇಲೆಲ್ಲ ಕೆಲವು ಹೆಸರುಗಳು, ದಿನಾಂಕಗಳನ್ನು ಬರೆದಿಡಲಾಗಿತ್ತು. ಅದರಲ್ಲಿ ಒಂದು ಜಾಡಿಯ ಮೇಲೆ 1960 ಎಂದಿತ್ತು.

ತನಿಖಾಧಿಕಾರಿಗಳು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಆ ಮನೆಯಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕನಾಗಿದ್ದ ಡಾ. ರೊನಾಲ್ಡ್​ ಎ ಬಾಗ್ಮನ್ ಎಂಬುವರು ವಾಸಿಸುತ್ತಿದ್ದರು.

ಅವರನ್ನು ಪತ್ತೆಹಚ್ಚಿ ಪ್ರಶ್ನಿಸಿದಾಗ, ಮನುಷ್ಯನ ಅಂಗಾಗಳನ್ನೆಲ್ಲ ತಮ್ಮ ಸಂಶೋಧನೆಗಾಗಿ ಸಂಗ್ರಹಿಸಿಟ್ಟುಕೊಂಡಿದ್ದೆ. ಇದೆಲ್ಲ ತುಂಬ ಹಳೆಯವು ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ಹಿಂದೆಯೇ ರೊನಾಲ್ಡ್​ ಅವರು ತಮ್ಮ ಸಂಶೋಧನೆಗೆ ಸಂಬಂಧಪಟ್ಟಂತೆ ಲೇಖನಗಳನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುವುದಾಗಿಯೂ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net