ಅಂತರಂಗ- ನಿರಹಂಭಾವರಸಾಯನ

Untitled design (1)
Published on
ಪ್ರತಿಯೊಂದು ವ್ಯವಹಾರದಲ್ಲಿ ನಾನು ನಾನು ಎಂಬ ಅಹಂಭಾವವು ಅಂತಃಕರಣದ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳೆಂಬ ನಾಲ್ಕು ವೃತ್ತಿಗಳಲ್ಲಿ ಒಂದು ಪ್ರಮುಖವಾದ ವೃತ್ತಿಯು. ಇದಕ್ಕೆ ಮದ ಎಂಬ ನಾಮವಿದೆ. ಮನುಷ್ಯನು ತನಗೆ ದೊರೆತ ಧನ, ಕುಲ, ವಿದ್ಯೆ ರೂಪ, ಯೌವನ, ಬಲ, ಪರಿವಾರ ಮತ್ತು ಅಧಿಕಾರಗಳ ಬಗ್ಗೆ ದುರಭಿಮಾನದಿಂದ ನಾನು ಧನವಂತ, ಸುಂದರ, ಬಲಶಾಲಿ, ಇತ್ಯಾದಿಯಾಗಿ ದುರಹಂಕಾರದಿಂದ ವ್ಯವಹರಿಸುತ್ತಾನೆ.

ಎಂಟು ವಿಧವಾದ ಈ ದುರಹಂಕಾರಗಳಿಗೆ ಅಷ್ಟಮದವೆಂದು ಕರೆಯುವರು. ಸುರಾಪಾನವನ್ನು ಮಾಡಿದವ ಬುದ್ಧಿಯ ನಿಯಂತ್ರಣ ಕಳೆದುಕೊಳ್ಳು ವಂತೆ ಈ ಅಷ್ಟಮದಗಳಿಂದ ಕೂಡಿದ ಮನುಷ್ಯನೂ ಬುದ್ಧಿಯ ಹಿಡಿತವನ್ನು ಕಳೆದುಕೊಳ್ಳುತ್ತಾನೆ. ಇದೇ ವಿಷಯವನ್ನು ಒಬ್ಬ ಸುಭಾಷಿತ ಕಾರನು-ಮರ್ಕಟಸ್ಯ ಸುರಾಪಾನಂ ತಸ್ಯ ವೃಶ್ಚಿಕದಂಶನಮ್ ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ|| ಎಂದು ಹೇಳಿದ್ದಾನೆ.

ತಾತ್ಪರ್ಯ: ಸ್ವಾಭಾವಿಕವಾಗಿ ಚಂಚಲವಾಗಿರುವ ಮಂಗಕ್ಕೆ ಸುರಾಪಾನ ಮಾಡಿಸಿ ಅದಕ್ಕೆ ಚೇಳನ್ನು ಕಡಿಸಿ ಅದರ ದೇಹದಲ್ಲಿ ಭೂತ ಪ್ರವೇಶವನ್ನು ಮಾಡಿದರೆ ಆ ಮಂಗನ ಪರಿಸ್ಥಿತಿ ಹೇಗಾಗುವುದೋ ಹಾಗೆಯೇ ಒಂದಕ್ಕಿಂತ ಹೆಚ್ಚು ಮದಗಳು ಒಂದೆಡೆ ಸೇರಿದಾಗ ಆ ಮನುಷ್ಯನ ಪರಿಸ್ಥಿತಿಯೂ ಹಾಗೇ ಆಗುವದು. ಆದ್ದರಿಂದ ಮದಕ್ಕೆ ಕಾರಣೀಭೂತಗಳಾದ ಧನ, ಯೌವನ, ಅಧಿಕಾರಾದಿಗಳು ಪ್ರಾಪ್ತವಾದಾಗ ಅವುಗಳ ಬಗ್ಗೆ ದುರಭಿಮಾನವನ್ನು ತಾಳದೇ ಇರುವ ಸ್ಥಿತಿಯೇ ನಿರಹಂಭಾವವು. ನಿರಹಂಭಾವಿಯ ಮನಸ್ಸು ಎಲ್ಲ ಉಪದ್ರವಗಳಿಂದ ಮುಕ್ತವಾಗಿದ್ದು ಪ್ರಶಾಂತ ಹಾಗೂ ಪ್ರಸನ್ನತೆಯನ್ನು ಪಡೆದುಕೊಳ್ಳುವುದು. ಪ್ರಸನ್ನತೆಯೇ ಉತ್ತಮವಾದ ಆರೋಗ್ಯಕ್ಕೆ ನಾಂದಿ .ಅಂತೆ ತುಕಾರಾಮರು ‘ಅಭಿಮಾನ ಸೋಡಾವೇ ಮುಕ್ತಿ ರೋಖಡ ಘ್ಯಾವೇ...’ ಎಂಬುದಾಗಿ ಹೇಳಿದ್ದಾರೆ.

ಅಂದರೆ ಯಾರು ದುರಭಿಮಾನದಿಂದ ಮುಕ್ತರಾಗಿರುವರೋ ಅವರು ಜೀವನ್ಮುಕ್ತಿಯ ಆನಂದವನ್ನು ಅನುಭವಿಸ ಬಲ್ಲರು. ಆದ್ದರಿಂದ ನೀರಹಂ ಭಾವನೆಯನ್ನು ತಾಳಿಕೊಂಡು ಸದಾ ಪ್ರಸನ್ನನಾಗಿದ್ದು ಬದುಕನ್ನು ಸುಂದರವಾಗಿಸಿಕೊಂಡು ಕೊನೆಗೆ ಜೀವನ್ಮುಕ್ತಿ ಆನಂದವನ್ನು ಪಡೆಯಬಹುದು. ಆದ್ದರಿಂದ ನಿರಹಂ ಭಾವನೆಯು ಉತ್ತಮ ಆರೋಗ್ಯಕ್ಕೆ ಕಾರಣವಾಗಿರುವುದರಿಂದ ಚರಕ ಮಹರ್ಷಿಗಳು ನಿರಹಂ ಭಾವನೆಯನ್ನು ಸಹ ಒಂದು ರಾಸಾಯನವನ್ನಾಗಿ ಬೋಧಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net