

ಬೆಂಗಳೂರು: ಜಗತ್ತೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರ ಮಾತು, ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ದುರಹಂಕಾರ ಬಂದಿದೆ. ಅವರಿಬ್ಬರ ಟೀಕೆ-ಟಿಪ್ಪಣಿಗಳಿಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ಬರ ಅಧ್ಯಯನಕ್ಕಾಗಿ ತುಮಕೂರು ಜಿಲ್ಲೆಯ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪರೀಕ್ಷಾ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಪರಾರಿಯಾಗಿರುವುದು ಗೊತ್ತಿದೆ. ಈ ಪ್ರಕರಣದ ಹೆಚ್ಚಿನ ವಿವರ ಪಡೆದುಕೊಳ್ಳುವೆ. ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಬಂಧನಕ್ಕೆ ಸೂಕ್ತ ಕ್ರಮವಹಿಸಲಿ ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಕುಂಟು ನೆಪ ಹೇಳಿ, ಏಳನೇ ವೇತನ ಆಯೋಗದ ಅವಧಿಯನ್ನು ಮತ್ತೆ ವಿಸ್ತರಿಸಿದೆ ಎಂದು ಬಿಎಸ್ ವೈ ಟೀಕಿಸಿದರು.
ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ ಎಂದು ವಾಗ್ದಾಳಿ ಮಾಡಿದರು.
ಮುಂಗಾರು ಮಳೆ ವಿಫಲವಾಗಿ ಬೆಳೆ ನಷ್ಟವಾದರೂ ಬರಗಾಲ ಘೋಷಣೆಗೆ ವಿಳಂಬ ಮಾಡಿದರು. ಕಾವೇರಿ ಜಲ ವ್ಯಾಜ್ಯದ ವಿಚಾರದಲ್ಲೂ ಇದೇ ವಿಳಂಬ ಧೋರಣೆ ಅನುಸರಿಸಿದರು. ಬರ ಘೋಷಿಸಿ ಪರಿಹಾರ ನಿರ್ವಹಣೆ ಕಾರ್ಯಕ್ರಮ ತುರ್ತಾಗಿ ಕೈಗೊಳ್ಳದೆ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಇರುವ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ಇಲ್ಲದೆ ರೈತರು ಪರಿತಪಿಸುತ್ತಿದ್ದರೆ, ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ ನವರಯ ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೆಯೇ ಬಿಡಲು ಆಗಲ್ಲ. ನಮ್ಮೆಲ್ಲ ಮುಖಂಡರ ಜತೆಗೆ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.