ಮೂವರು ಡ್ರಗ್‌ಪೆಡ್ಲರ್‌ಗಳ ಬಂಧನ

Crime ( Arrest)
Published on


ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು ಸುಮಾರು ೨೧ ಲಕ್ಷ ರೂ.ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾದಕವಸ್ತು ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ವಿ.ವಿಪುರ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಇಬುಟಿ(೩೫) ಬಂಧಿತ. ಆರೋಪಿಯಿಂದ ೨೦ ಲಕ್ಷ ರೂ. ಮೌಲ್ಯದ ಮಾದಕವಸ್ತು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಆರೋಪಿಯು ಠಾಣಾ ವ್ಯಾಪ್ತಿಯ ನ್ಯೂ ತರಗುಪೇಟೆಯಲ್ಲಿ ಎಂ.ಡಿ.ಎಂ.ಎ ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ವಿವಿಪುರ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಸಾಕ್ಷಿ ಸಮೇತ ಬಂಧಿಸಲಾಗಿದೆ. ಆರೋಪಿಯು ವಿಚಾರಣೆ ವೇಳೆಯಲ್ಲಿ ಗೋವಾದಲ್ಲಿ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿ ಮಾಡಿಕೊಂಡು ಬಂದು ಪಾರ್ಟಿ ಮತ್ತು ಇತರೆ ಮೋಜಿನ ಕೂಟಗಳಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್‌ಟಾವೇರ್ ಇಂಜಿನಿಯರ್‌ಗಳಿಗೆ ಮಾರಾಟ ಮಾಡುತ್ತಿರುವುದ್ದಾಗಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೨೭೦ ಗ್ರಾಂ ಅಫೀಲು ಮಾರಾಟ:
ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನದಿಂದ ಮಾದಕವಸ್ತು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ರಾಜಸ್ಥಾನ ಮೂಲದ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಚೌಧರಿ(೨೮) ಮತ್ತು ಓಂಸಿಂಗ್(೩೦) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ೨೭೦ ಗ್ರಾಂ ತೂಕದ ಅಫೀಮು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಚೌಧರಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಪ್ರೇಮ್‌ನಗರದ ಅಂಡರ್‌ಪಾಸ್ ಬಳಿ ಅಫೀಮು ಮಾರಾಟಕ್ಕೆ ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಈತನಿಂದ ೧೫೦ ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿತ್ತು. ಬಳಿಕ ಈತನ ಮಾಹಿತಿ ಆಧರಿಸಿ ಓಂಸಿಂಗ್‌ನನ್ನು ಬಂಧಿಸಿ, ಆತನಿಂದ ೧೨೦ ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರಾಜಸ್ಥಾನದಿಂದ ಅಫೀಮು ತಂದು ನಗರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net