ರೌಡಿಶೀಟರ್ ಕೆಂಚನ ಬಂಧನ

Crime ( Arrest)
Published on

ಬೆಂಗಳೂರು: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮನೋಜ್ನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಅಲಿಯಾಸ್ ಕೆಂಚ(೨೬) ಬಂಧಿತ.
ಮನೋಜ್ ಜುಲೈ ೧೬ರಂದು ಚಿಕ್ಕಬೊಮ್ಮಸಂದ್ರದ ಹರಿಪ್ರಸಾದ್ ಎಂಬುವವರನ್ನು ಅಪಹರಿಸಿದ್ದ. ಹಾಗೆಯೇ ಆತನ ವಿರುದ್ಧ ಕೊಡಿಗೇಹಳ್ಳಿ, ಯಲಹಂಕ, ಸಂಪಿಗೆಹಳ್ಳಿ, ಚಿಕ್ಕಜಾಲ, ರಾಜಾನುಕುಂಟೆ, ಬಾಗಲಗುಂಟೆ, ಗಂಗಮ್ಮನಗುಡಿ, ಬ್ಯಾಟರಾಯನಪುರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಅಪರಹಣ ಸೇರಿ ೧೨ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಆರೇಳು ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದ್ದು, ಕೋರ್ಟ್‌ಗೆ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಆರೋಪಿಯನ್ನು ಬಂಧಿಸಿದೆ.
ಮನೋಜ್ ಗ್ಯಾಂಗ್‌ನಿಂದ ಯುವಕನ ಅಪಹರಣ:
ಚಿಕ್ಕಬೊಮ್ಮಸಂದ್ರದ ನಿವಾಸಿಯಾದ ವಸುಂಧರಾ ಎಂಬ ಮಹಿಳೆಯ ಪುತ್ರನಾದ ಹರಿಪ್ರಸಾದ್(೨೪) ನನ್ನು ಆರೋಪಿಗಳು ಅಪಹರಣ ಮಾಡಿದ್ದರು. ಹರಿಪ್ರಸಾದ್ ಶರಾವತಿ ಹೋಟೆಲ್ ಹತ್ತಿರದ ಮಧು ಎಂಬುವವರ ಬಳಿ ೈನಾನ್ಸ್‌ನಲ್ಲಿ ಪಿಗ್ಮಿ ಕಲೇಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಜು.೧೬ ರ ೧೦ ಗಂಟೆಯ ಸಮಯದಲ್ಲಿ ಪಿಗ್ಮಿ ಕಲೆಕ್ಟ್ ಮಾಡಲು ಸ್ನೇಹಿತ ಗುರುರಾಜ್ ಜತೆ ಹೋಗಿದ್ದಾಗ, ಆರೋಪಿಗಳಾದ ಮನೋಜ್ ಅಲಿಯಾಸ್ ಕೆಂಚ್ ಮತ್ತು ಆತನ ಇಬ್ಬರು ಸಹಚರರು ಶರಾವತಿ ರಸ್ತೆ ಕೆನರಾ ಬ್ಯಾಂಕ್ ಹತ್ತಿರದಲ್ಲಿ ನಿಂತುಕೊಂಡಿದ್ದ ಹರಿಪ್ರಸಾದ್‌ನನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಈ ಬಗ್ಗೆ ಸ್ನೇಹಿತ ಗುರುರಾಜ್ ಹರಿಪ್ರಸಾದ್ ತಾಯಿ ವಸುಂಧರಾ ಅವರಿಗೆ ವಿಷಯ ತಿಳಿಸಿದ್ದ. ಕೂಡಲೇ ಅವರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿರುವ ವಿಷಯ ತಿಳಿದ ಆರೋಪಿಗಳು ಹರಿಪ್ರಸಾದ್‌ನನ್ನು ಬಿಟ್ಟು ಕಳುಹಿಸಿದ್ದರು. ಈ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net