ಟೆಕ್ಕಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ 7 ಮಂದಿಯ ಬಂಧನ

Crime ( Arrest)
Published on


ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಜತೆ ಜಗಳ ತೆಗೆದು ಹಲ್ಲೆಗೈದು ಆತನನ್ನು ಕರೆದೊಯ್ದು ದರೋಡೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಬೀಸನಹಳ್ಳಿಯ ರೂಪೇಶ್, ಪ್ರಶಾಂತ್, ಅಭಿ, ಪುನೀತ್, ಪಣತ್ತೂರಿನ ನವೀನ್, ಮೋಹನ್, ಸುದರ್ಶನ್ ಬಂಧಿತರು. ಆ.೨೦ರಂದು ರಾತ್ರಿ ೧೦.೩೦ರ ಸುಮಾರಿಗೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಪೆಟ್ಟಿ ಅಂಗಡಿ ಬಳಿ ಆರೋಪಿಗಳು ಆಂಧ್ರಪ್ರದೇಶ ಮೂಲದ ಟೆಕ್ಕಿ ಮಹೇಶ್(೨೪) ಎಂಬಾತನ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಆತನನ್ನು ಕರೆದೊಯ್ದು ಹಲ್ಲೆ ನಡೆಸಿ ನಾಲ್ಕು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಿತ್ತುಕೊಂಡು ಬಳಿಕ ಆತನನ್ನು ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಳೆ ಹಣ್ಣು ಕೊಳ್ಳಲು ಹೋಗಿದ್ದಾಗ ಜಗಳ:
ಹಲ್ಲೆಗೊಳಗಾಗಿದ್ದ ಮಹೇಶ್ ನಗರದ ವೈಟ್‌ಫೀಲ್ಡ್‌ನ ಐಟಿಪಿಎಲ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ವರ್ತೂರಿನ ಮಧುರನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಆ.೨೦ರಂದು ಕಂಪನಿಗೆ ರಜೆ ಇದ್ದ ಕಾರಣ ಸ್ನೇಹಿತರಾದ ಗಣೇಶ್, ಹೇಮಂತ, ವೆಂಕಟೇಶ್, ತರುಣ್ ಜತೆಗೆ ಮಹೇಶ್ ೩ ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್‌ನ ಮಂಡಿ ಹೋಟೆಲ್‌ಗೆ ಬಂದು ಊಟ ಮಾಡಿ ರಾತ್ರಿ ೧೦.೩೦ರ ಸುಮಾರಿಗೆ ಮನೆಗೆ ವಾಪಾಸಾಗುತ್ತಿದ್ದರು. ಮಾರ್ಗ ಮಧ್ಯೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಪೆಟ್ಟಿ ಅಂಗಡಿಯಲ್ಲಿ ಬಾಳೆ ಹಣ್ಣು ತಿನ್ನಲು ತೆರಳಿದ್ದರು. ಈ ವೇಳೆ ಆರೋಪಿ ರೂಪೇಶ್, ಪೆಟ್ಟಿ ಅಂಗಡಿ ಮಾಲೀಕನ ಜತೆಗೆ ಜಗಳ ಮಾಡುತ್ತಿದ್ದ. ಈ ನಡುವೆ ಮಹೇಶ್, ಬಾಳೆ ಹಣ್ಣಿಗೆ ಎಷ್ಟು ದುಡ್ಡು ಎಂದು ಕೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ರೂಪೇಶ್, ನಾವಿಬ್ಬರು ಮಾತನಾಡುವಾಗ ನೀನು ಮಧ್ಯಪ್ರವೇಶಿಸಿ ಡಿಸ್ಟರ್ಬ್ ಮಾಡುವೆಯಾ ಎಂದು ಮಹೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪಕ್ಕದ ಸ್ಮಶಾನದಲ್ಲಿ ಸ್ನೇಹಿತನೊಬ್ಬನ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಇತರೆ ಆರೋಪಿಗಳನ್ನು ಶಿಳ್ಳೆ ಹೊಡೆದು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿಗಳು ಮಹೇಶ್ ಹಾಗೂ ಆತನ ಸ್ನೇಹಿತರಾದ ಗಣೇಶ್, ಹೇಮಂತ, ವೆಂಕಟೇಶ್ ಮತ್ತು ತರುಣ್‌ಗೂ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಮಹೇಶ್ ಬಿಟ್ಟು ಉಳಿದವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಬಿಯರ್ ಬಾಟಲಿನಿಂದ ಹಲ್ಲೆ :
ಮಹೇಶ್‌ನನ್ನು ಹಿಡಿದುಕೊಂಡ ಆರೋಪಿಗಳು ದ್ವಿಚಕ್ರ ವಾಹನ ಸಹಿತ ಸ್ಮಶಾನಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋದ ಸ್ನೇಹಿತರನ್ನು ಕರೆಸು ಎಂದು ಬಿಯರ್ ಬಾಟಲಿಯಿಂದ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತರುಣ್ ಮನೆ ತೋರಿಸು ಎಂದು ಮಹೇಶ್‌ನನ್ನು ಮನೆ ಬಳಿ ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ತರುಣ್ ಮನೆಯಲ್ಲಿ ಇರಲಿಲ್ಲ. ಬಳಿಕ ಆರೋಪಿಗಳು ಮಹೇಶ್‌ನನ್ನು ಹಲವೆಡೆ ಸುತ್ತಾಡಿಸಿ ಮಧ್ಯರಾತ್ರಿ ೧.೩೦ರ ಸುಮಾರಿಗೆ ಗುಂಜೂರು ರಸ್ತೆಗೆ ಕರೆದೊಯ್ದು ಕೈಗಳಿಂದ ಹಲ್ಲೆ ನಡೆಸಿ, ಮೂರು ಮೊಬೈಲ್‌ಗಳು ಹಾಗೂ ಎಫ್‌ಜಡ್ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಮಹೇಶ್ ನಡೆದುಕೊಂಡು ಮನೆಗೆ ಬಂದು ಸ್ನೇಹಿತರೊಂದಿಗೆ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೌಡಿಪಟ್ಟಿ ತೆರೆಯಲಾಗುವುದು:
ಆರೋಪಿಗಳು ಎಲ್ಲರು ಅಂದು ರಾತ್ರಿ ಸ್ಮಶಾನದಲ್ಲಿ ಸ್ನೇಹಿತನೊಬ್ಬನ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ಆರೋಪಿ ರೂಪೇಶ್ ಪೆಟ್ಟಿ ಅಂಗಡಿಗೆ ಬಂದಿದ್ದಾಗ ಮಹೇಶ್ ಹಾಗೂ ಸ್ನೇಹಿತರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಹೇಶ್ ಮತ್ತು ಇತರರ ಮೇಲೆ ಹಲ್ಲೆ ಮಾಡಿದ್ದರು. ಆರೋಪಿಗಳು ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net