ಬೀದರ್ | ಸಾರಿಗೆ ಬಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಖದೀಮರು ಅಂದರ್

Bidar
Published on

ಬೀದರ್: ಮಹಾರಾಷ್ಟ್ರದ ಸಾರಿಗೆ ಬಸ್​ನಲ್ಲಿ ಅಕ್ರಮವಾಗಿ 10 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಿಸುತ್ತಿದ್ದ ಖದೀಮರನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಮೂಲದ ಆರೋಪಿಗಳಾದ ಮಧುಕರ್ ಹಾಗೂ ಅಮರ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 10 ಕೆ.ಜಿ ಗಾಂಜಾವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ತೆಲಂಗಾಣದಿಂದ ಬೀದರ್ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೀದರ್-ತೆಲಂಗಾಣ ಗಡಿಯಲ್ಲಿ ಅಬಕಾರಿ ಪೊಲೀಸರು ಬಸ್ ತಪಾಸಣೆ ಮಾಡಿದ್ದಾರೆ. ಈ ವೇಳೆ ಗಾಂಜಾಕೋರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಖದೀಮರು ತಲಾ 2 ಕೆಜಿಯ ಐದು ಪ್ಯಾಕೆಟ್​ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದೀಗ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net