ನಕಲಿ ಹಾರ ನೀಡಿ ಚಿನ್ನದ ವ್ಯಾಪಾರಿಗೆ ವಂಚಿಸಿದ್ದ ಖತರ‍್ನಾಕ್ 7 ಆರೋಪಿಗಳ ಬಂಧನ

Untitled
Published on

ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಚಿನ್ನದ ವ್ಯಾಪಾರಿಗೆ ನಕಲಿ ಚಿನ್ನದ ಹಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಾಶಪುರ ಗೇಟ್ನ ಹಕ್ಕಿಪಿಕ್ಕಿ ಕಾಲೋನಿ ಗಿರೀಶ್(23), ಇಲಿಯೇಷ್(33), ಅಗ್ರಹಾರ ತಾಂಡಾದ ರವಿಕುಮಾರ್(28), ನಂದೀಶ್ ನಾಯ್ಕ್,(22), ಮಹೇಂದ್ರ ನಾಯ್ಕ(26,)ಆಂಧ್ರ ಪ್ರದೇಶದ ನಂದ್ಯಾಲ ತಾಲೂಕಿನ ರಾಮಾಪುರಂ ಬ್ರಹ್ಮಯ್ಯ(38) ಹಾಗೂ ಅಹಮದ್ ಹುಸೇನ್(47) ಎಂಬ ಆರೋಪಿಗಳನ್ನು ಬಂಧಿಸಿದ್ದು 23 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ.

*ಚಿನ್ನದ ವ್ಯಾಪಾರಿಗೆ ಮಂಕುಬೂದಿ*

ಆರೋಪಿಗಳೆಲ್ಲರೂ ಸಂಚು ಹೂಡಿ ಆಂಧ್ರ ಪ್ರದೇಶದ ನಂದ್ಯಾಲದ ಲಲಿತನಗರದ ಚಿನ್ನದ ವ್ಯಾಪಾರಿ ಅಲ್ಲೂರಯ್ಯಗೆ ಮೊದಲಿಗೆ ಅಸಲಿ ಚಿನ್ನದ ಗುಂಡುಗಳನ್ನು ನೀಡಿ ನಂಬಿಸಿದ್ದರು. ಬಳಿಕ ಇದೇ ರೀತಿ 2-3 ಕೆ.ಜಿ ತೂಕದ ಗುಂಡುಗಳ ಹಾರ ನಮ್ಮ ಬಳಿ ಇದೆ. 24 ಲಕ್ಷ ರೂ. ಬೆಲೆ ಬಾಳಲಿದೆ ಎಂದು ಹೇಳಿದ್ದರು. ಹಾರ ಬೇಕಾದರೆ 24 ಲಕ್ಷ ರೂ. ಹಣವನ್ನು ಹೊಂದಿಸಿಕೊಂಡು ಗೌರಿಬಿದನೂರು ತಾಲೂಕಿನ ಗೊಡ್ಡಾವಲಹಳ್ಳಿಯ ಮುತ್ತುನಾರಾಯಣ ಸ್ವಾಮಿ ದೇವಾಲಯದ ಬಳಿ ಬರುವಂತೆ ವ್ಯಾಪಾರಿಗೆ ಹೇಳಿದ್ದರು. ಅದರಂತೆ ಹಣ ಹೊಂದಿಸಿಕೊಂಡು ಚಿನ್ನದ ವ್ಯಾಪಾರಿ ಅಲ್ಲೂರಯ್ಯ ಸೂಚಿಸಿದ ಸ್ಥಳಕ್ಕೆ ಬಂದಿದ್ದಾರೆ. ಆರೋಪಿಗಳು ಮೊದಲೇ ರೂಪಿಸಿದ್ದ ಸಂಚಿನಂತೆ ನಕಲಿ ಗುಂಡಿನ ಹಾರವನ್ನು ವ್ಯಾಪಾರಿಗೆ ನೀಡಿ ಹಣವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಇದ್ದರೆ ಅನುಮಾನ ಬರುತ್ತದೆ. ತಕ್ಷಣ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ವ್ಯಾಪಾರಿ ಅಲ್ಲೂರಯ್ಯ ಅಲ್ಲಿಂದ ಸ್ವಲ್ಪ ದೂರ ಹೋಗಿ ಗುಂಡುಗಳ ಹಾರವನ್ನು ಪರಿಶೀಲಿಸಿದಾಗ, ಅದು ಅಸಲಿ ಅಲ್ಲ ನಕಲಿ ಗುಂಡಿನ ಹಾರ ಎಂಬ ಸತ್ಯ ಬಯಲಾಗಿತ್ತು. ಈ ಕುರಿತು ಅಲ್ಲೂರಯ್ಯ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೇಧಿಸಲು ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಪಿಎಸೈಗಳಾದ ಲಲಿತಮ್ಮ, ರಮೇಶ್ ಗುಗ್ಗುರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ನಗದು ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net