Sheikh Hasina: ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ಅರೆಸ್ಟ್​ ವಾರಂಟ್.. ಭಾರತ ಏನು ಮಾಡಲಿದೆ?

Sheikh Hasina
Published on

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ವಿರುದ್ಧ ಅಲ್ಲಿನ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ನವೆಂಬರ್ 18 ರೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕೋರ್ಟ್ ಆದೇಶಿಸಿದೆ.

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ (ಐಸಿಟಿ) ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಹಲವು ಪ್ರಕರಣಗಳ ತನಿಖೆ ನಡೆಯುತ್ತಿವೆ. ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹಲವು ವಿದ್ಯಾರ್ಥಿಗಳನ್ನು ಕೊಂದ ಆರೋಪವೂ ಅವರ ಮೇಲಿದೆ ಎಂದಿದ್ದಾರೆ. .

ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾ ಹಲವು ಬಾರಿ ಬೇಡಿಕೆಯಿಟ್ಟಿತ್ತು. ಈ ವಿಷಯದಲ್ಲಿ ಭಾರತವೂ ರಾಜತಾಂತ್ರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶೇಖ್ ಹಸೀನಾ ಅವರ ಕಾರಣದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಸಹ ಪರಿಣಾಮ ಬೀರಬಹುದು.

ಭಾರತ ಮತ್ತು ಬಾಂಗ್ಲಾ ನಡುವೆ 2013 ರಲ್ಲಿ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈಗ ಬಾಂಗ್ಲಾ ಹಂಗಾಮಿ ಸರ್ಕಾರ ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದರೆ, ಭಾರತವು ಮನವಿಯನ್ನು ಸ್ವೀಕರಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈ ವರ್ಷದ ಜುಲೈನಲ್ಲಿ ಬಾಂಗ್ಲಾದಲ್ಲಿ ಮೀಸಲಾತಿಯ ವಿರುದ್ಧ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಚಳುವಳಿ ನಡೆಯಿತು. ಒಂದು ತಿಂಗಳ ಕಾಲ ನಡೆದ ಚಳವಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರ ಆಕ್ರೋಶಗೊಂಡ ವಿದ್ಯಾರ್ಥಿಗಳು ರಾಜಧಾನಿ ಢಾಕಾ ಕಡೆಗೆ ಮೆರವಣಿಗೆ ನಡೆಸಿದರು. ಆಗಸ್ಟ್ 5 ರಂದು ಭದ್ರತಾ ಕಾರಣಗಳಿಂದ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಸೇನಾ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿಳಿದರು. ಅಂದಿನಿಂದ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದು ತಿಳಿದ ಸಂಗತಿಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net