

ಮುಳಬಾಗಿಲು: ಕುಡಿದ ಅಮಲಿನಲ್ಲಿ ಯುವಕನೊಬ್ಬ ಜೀವಂತ ಹಾವನ್ನೇ ಕೈಯಲ್ಲಿ ಹಿಡಿದು ಮನಸೋಇಚ್ಛೆ ಕಚ್ಚಿಕಚ್ಚಿ ಕೊಲ್ಲುತ್ತಿರುವ ವಿಡಿಯೋ ಮಂಗಳವಾರ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ನೋಡುತ್ತಿದ್ದರೆ ಎಂಥವರಿಗೂ ಒಂದು ಕ್ಷಣ ಎದೆ ಝಲ್ ಅನ್ನುವ ಜತೆಗೆ ವಿಕೃತಿ ಮೆರೆದವನ ಮನಸ್ಥಿತಿ ಕಂಡು ಹೌಹಾರುತ್ತಿದ್ದರು. ಮದ್ಯದ ನಶೆಯಲ್ಲಿದ್ದ ಈತ ಬಾಯಿಂದಲೇ ಹಾವಿನ ಮೈ ಸುಳಿಯುತ್ತಿದ್ದ ದೃಶ್ಯವಂತೂ... ಬೆಚ್ಚಿ ಬೀಳಿಸುವಂತಿದೆ. ಇಷ್ಟೆಲ್ಲ ವಿಕೃತಿ ಮೆರೆದವ ಏನಾದ ಗೊತ್ತಾ?
ಇದನ್ನೂ ಓದಿರಿ ಕಣ್ಣೀರಿಟ್ಟ ವಿರಾಟ್ ಕೊಹ್ಲಿ, ಅಂತಹದ್ದೇನಾಯ್ತು?
ಇಂತಹದ್ದೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದ್ದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಆರೋಪಿಯ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು. ಕೊನೆಗೂ ಆರೋಪಿ ಶಿವುಕುಮಾರ್(34) ಬುಧವಾರ ಸಿಕ್ಕಿಬಿದ್ದಿದ್ದಾನೆ.
ಈತ ಕಂಠಪೂರ್ತಿ ಕುಡಿದು ಬೈಕ್ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಹಾವೊಂದು ಅಡ್ಡ ಬಂದಿತ್ತು. ಇದನ್ನು ಹಿಡಿದುಕೊಂಡು ಕಚ್ಚಿಕಚ್ಚಿ ಹಿಂಸಿಸಿದ್ದ. ಇಷ್ಟಕ್ಕೆ ಸುಮ್ಮನಾಗದ ಈತ ಬೈಕ್ ಏರಿ ಕಚ್ಚಿ ಕಚ್ಚಿ ಹಾವನ್ನು ಕೊಂದು ಕುತ್ತಿಗೆಗೆ ಸುತ್ತಿಕೊಂಡು ವಿಕೃತಿ ಮೆರೆದ. ಬಳಿಕ ಕೊರಳಲ್ಲಿ ಹಾವು, ಒಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡೇ ಕುಣಿದು ಕುಪ್ಪಳಿಸಿದ್ದ. ಹಾವಿನ ದೇಹವನ್ನು ಕಚ್ಚಿಕೊಂಡೂ ತಿಂದಿದ್ದಾನೆ. ಇದೆಲ್ಲವೂ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿರಿ ಆಹಾರ ತ್ಯಜಿಸಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವು
ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಸಿಕ್ಕ ಈತನನ್ನು ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ದ್ವಿಚಕ್ರ ವಾಹನ ಸಮೇತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೆ.ಎನ್. ರವಿಕೀರ್ತಿ, ಉಪವಲಯ ಅರಣ್ಯಾಧಿಕಾರಿಗಳಾದ ಎಸ್.ಪ್ರಜ್ವಲ್, ಎಂ.ಆರ್.ಭರತ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.