

ಸಾಗರ: ಬೆಂಗಳೂರು ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ವಿದ್ಯಾಸಂಸ್ಥೆ ಮುಖ್ಯಸ್ಥ ಮಂಜಪ್ಪ ಅವರನ್ನು ಬಂಧಿಸಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ಡಿಎಸ್‌ಎಸ್ (ಪ್ರೊ.ಬಿ.ಕೃಷ್ಣಪ್ಪ ಬಣ) ಪದಾಧಿಕಾರಿಗಳು ಸಾಗರ ಎಸಿ ಆರ್.ಯತೀಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮಂಜಪ್ಪ ಎಂಬುವವರು ಪಟ್ಟಣದ ವರದಹಳ್ಳಿ ರಸ್ತೆಯಲ್ಲಿ ಅನೇಕ ವರ್ಷಗಳಿಂದ ವಸತಿ ಶಾಲೆ ನಡೆಸುತ್ತಿದ್ದಾರೆ. ಈ ಶಾಲೆಗೆ ಹೊರರಾಜ್ಯ ಮತ್ತು ನಮ್ಮ ರಾಜ್ಯದ ಬೇರೆಬೇರೆ ಭಾಗಗಳಿಂದ ಬಡ ಮಕ್ಕಳನ್ನು ಕರೆದುಕೊಂಡು ಬಂದು ಊಟ ವಸತಿ ಶಿಕ್ಷಣ ಕೊಡುವ ನೆಪದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಹಿಂದೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದ ಮಂಜಪ್ಪ ರಾಜಕೀಯ, ಆರ್ಥಿಕವಾಗಿ ಪ್ರಬಲವಾಗಿದ್ದುದರಿಂದ ಬಚಾವಾಗಿ ಹೊರಗೆ ಬಂದಿದ್ದರು. ಈಗ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಸುಮಾರು ನಾಲ್ಕು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿರುವುದು ಬಹಿರಂಗಗೊಂಡಿದೆ ಎಂದು ದೂರಿದರು.
ಸಂತ್ರಸ್ತೆಯ ಪಾಲಕರು ಬಂದು ಗಲಾಟೆ ಮಾಡಿದ್ದಾರೆ. ಬಂಧನದ ಭೀತಿಯಿಂದ ಮಂಜಪ್ಪ ನಾಪತ್ತೆಯಾಗಿದ್ದಾರೆ. ಈತನಕ ಮಂಜಪ್ಪ ಎಲ್ಲಿದ್ದಾರೆ ಎಂಬ ಸುಳಿವು ಇರುವುದಿಲ್ಲ. ದಲಿತ ಹೆಣ್ಣುಮಕ್ಕಳ ಶೋಷಣೆ ಮಾಡುತ್ತಿರುವ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಸಂಚಾಲಕ ನಾಗರಾಜ್, ನಾರಾಯಣ ಮಂಡಗಳಲೆ, ನಗರಸಭಾ ಸದಸ್ಯೆ ಲಲಿತಮ್ಮ, ಶಿವಪ್ಪ, ನಾರಾಯಣ, ಗೋಳಗೋಡು ನಾರಾಯಣ, ಮಂಜು, ನಾಗರತ್ನ, ಚಂದ್ರಪ್ಪ, ಮುರುಗೇಶ್, ರಾಮಣ್ಣ ಹಸಲರು ಇತರರಿದ್ದರು.