ಪಾಂಡವಪುರ : ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟಾರೆ 8 ಆರೋಪಿಗಳ ಸೆರೆಯಾಗಿದೆ.ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದ ಕಿರಣ್ ಹಾಗೂ ಹೊಸಕೋಟೆ ಗ್ರಾಮದ ಎಚ್.ಪಿ.ಅಖಿಲೇಶ್ ಎಂಬವರನ್ನು ಶುಕ್ರವಾರ ಬಂಧಿಸಲಾಗಿದೆ. ಕಿರಣ್ ಎಂಬಾತ ಠಾಣೆಗೆ ಬಂದು ಶರಣಾದ. ಅಖಿಲೇಶ್‌ನನ್ನು ಹೊಸಕೋಟೆಯಲ್ಲೇ ವಶಕ್ಕೆ ಪಡೆಯಲಾಗಿದೆ.
ಮೇ.5 ರಂದು ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಬ್ಬರು ಹಾಗೂ ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಪಾಂಡವಪುರ ಪೊಲೀಸರು ಸೆರೆ ಹಿಡಿಯುವಲ್ಲಿ ಯಶವಾಗಿದ್ದಾರೆ.
ಕಿರಣ್ ಮತ್ತು ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಎಚ್.ಪಿ.ಅಖಿಲೇಶ್ ಅವರು ಗರ್ಭಪಾತಕ್ಕೆ ಒಳಗಾಗುವವರ ಭ್ರೂಣ ಪತ್ತೆಗಾಗಿ ಸ್ಕ್ಯಾನಿಂಗ್ ಯಂತ್ರ, ಗೌಪ್ಯ ಸ್ಥಳ ನಿಗದಿಮಾಡುವುದು ಸೇರಿದಂತೆ
ಹಲವು ಕೃತ್ಯಗಳಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.