ಗ್ರಾಹಕರಿಂದ ಆರ್ಡರ್ ಪಡೆದು ಕಳ್ಳತನ: ಇಬ್ಬರು ದ್ವಿಚಕ್ರ ಕಳ್ಳರ ಬಂಧನ

arrest
Published on

ಬೆಂಗಳೂರು: ಮನೆ ಮುಂಭಾಗದಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ ಶಹಬಾಜ್(೨೬) ಮತ್ತು ದೊಡ್ಡನಾಗಮಂಗಲ ನಿವಾಸಿ ಓಂ(೧೯) ಬಂಧಿತರು. ಆರೋಪಿಗಳಿಂದ ೧೨.೭೫ ಲಕ್ಷ ರೂ. ಮೌಲ್ಯದ ೧೩ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಎಇಸಿಎಸ್ ಲೇಔಟ್‌ನ ಸಿಂಗಸಂದ್ರ ನಿವಾಸಿಯ್ಬಬರು ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್ ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಿಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಗ್ರಾಹಕರಿಂದ ಆರ್ಡರ್ ಪಡೆದು ನಂತರ ಯಾವ ಬೈಕ್ ಬೇಕೋ ಅದೇ ಬೈಕ್ ಕಳ್ಳತನ ಮಾಡಿಕೊಡುತ್ತಿದ್ದರು.ಆರೋಪಿಗಳ ಪೈಕಿ ಶಹಬಾಜ್, ಮನೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು, ವೈಯರ್ ಡೈರೆಕ್ಟ್ ಮಾಡಿ ಕಳವು ಮಾಡುತ್ತಿದ್ದ. ಇನ್ನು ಓಂ ಯಾವ ಸ್ಥಳಗಳಲ್ಲಿ ಹೆಚ್ಚು ಬೈಕ್‌ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಶಹಬಾಜ್‌ಗೆ ನೀಡುತ್ತಿದ್ದ. ಹೀಗಾಗಿ ಇಬ್ಬರು ಸೇರಿ ಬೈಕ್‌ಗಳ ಕಳವು ಮಾಡುತ್ತಿದ್ದರು. ಕಳವು ಬೈಕ್‌ಗಳ ಪೋಟೋಗಳನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿ, ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಕಡಿಮೆ ಮೊತ್ತಕ್ಕೆ ಮಾರುತ್ತಿದ್ದರು. ಹೀಗೆ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಮೋಜು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ, ಪರಪ್ಪನ ಅಗ್ರಹಾರ, ಆರ್.ಟಿ.ನಗರ, ಕೆ.ಆರ್.ಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ದಾಖಲಾಗಿದ್ದ ೯ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net