ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ

crime-022204-16x9.jpg
Published on

ಬೆಂಗಳೂರು: ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಲೇಔಟ್ ನಿವಾಸಿ ಆನಂದ(೨೮), ಬೈರತಿ ನಿವಾಸಿ ರಜಿನಿ ಅಲಿಯಾಸ್ ಅಪ್ಪು(೨೬) ಹಾಗೂ ನಾಗವಾರಪಾಳ್ಯ ನಿವಾಸಿ ಪುಷ್ಪರಾಜ್(೨೨) ಬಂಧಿತರು. ಆರೋಪಿಗಳಿಂದ ೨೪.೮೫ ಲಕ್ಷ ರೂ. ಮೌಲ್ಯದ ೧೯ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಾಗವಾರಪಾಳ್ಯ ಮುಖ್ಯರಸ್ತೆಯ ಮನೆಯ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾದ ಹಿನ್ನೆಲೆಯಲ್ಲಿ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಆರೋಪಿಗಳು ಕೆಲವು ವರ್ಷಗಳಿಂದ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ದುಶ್ಚಟಗಳಿಗೆ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಇಳಿದಿದ್ದರು. ಹಗಲು ಮತ್ತು ರಾತ್ರಿ ವೇಳೆ ನಗರದ ವಿವಿಧೆ ಸುತ್ತಾಡಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರುತಿಸಿಕೊಂಡು ಬಳಿಕ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ ಪರಾರಿಯಾಗುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ತಿರುಪತ್ತೂರು, ಅರಕೋಣಂ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಚಿತರಿಗೆ ೧೫-೨೦ ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಸಮನಾಗಿ ಹಂಚಿಕೊಂಡು ವ್ಯಯಿಸುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿಯುತ್ತಿದ್ದರು. ಈ ಹಿಂದೆ ದ್ವಿಚಕ್ರ ವಾಹನಗಳ ಕದ್ದು ಜೈಲು ಸೇರಿದ್ದ ಆರೋಪಿಗಳು, ಜಾಮೀನು ಪಡೆದು ಹೊರಗೆ ಬಂದು ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
19 ಪ್ರಕರಣಗಳು ಪತ್ತೆ
ನಾಗವಾರಪಾಳ್ಯ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಕಳವು ಸಂಬಂಧ ದಾಖಲಾದ ದೂರಿನ ಮೇರೆಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಕ್ಯಾಮರಾ ಪರಿಶೀಲನೆ ವೇಳೆ ಆರೋಪಿಗಳು ಸುಳಿವು ಸಿಕ್ಕಿತು. ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಬೆನ್ನಗಾನಹಳ್ಳಿ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದ್ವಿಚಕ್ರ ವಾಹನ ಕಳ್ಳತನ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ ಆರೋಪಿಗಳ ಬಂಧನದಿಂ೧೯ ಪ್ರಕರಣಗಳು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net