

ಬೆಂಗಳೂರು: ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಸಿ.ನಗರದ ಮೊಹಮ್ಮದ್ ಜಬಿ(೨೨) ಮತ್ತು ಭಾರತಿನಗರದ ರೆಯಾನ್(೨೦) ಬಂಧಿತರು. ಆರೋಪಿಗಳಿಂದ ೬೦ ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಮೇ ೨೨ರಂದು ಬೆಳಗ್ಗೆ ೮.೪೫ಕ್ಕೆ ಬಾಗಲೂರು ಲೇಔಟ್ ನಿವಾಸಿ ಧರ್ಮಲಿಂಗಂ ಎಂಬುವವರು ದ್ವಿಚಕ್ರ ವಾಹನದಲ್ಲಿ ಪುಲಿಕೇಶಿನಗರ ಹೇನ್ಸ್ ರಸ್ತೆಯ ಗಣಪತಿ ದೇವಸ್ಥಾನ ಬಳಿ ಬರುವಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಧರ್ಮಲಿಂಗಂ ಅವರ ದ್ವಿಚಕ್ರ ವಾಹನ ಅಡ್ಡಗಟ್ಟಿ ಕೀ ಕಿತ್ತುಕೊಂಡಿದ್ದಾರೆ. ಬಳಿಕ ಧರ್ಮಲಿಂಗಂ ಅವರ ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಿಶೀಲಿಸಿದ್ದಾರೆ. ಬಳಿಕ ಮೊಬೈಲ್ ವಾಪಾಸ್ ಕೊಟ್ಟು ಪರ್ಸ್‌ನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಬ್ಬರು ವೃತ್ತಿಪರ ಕಳ್ಳರಾಗಿದ್ದು, ಆರೋಪಿ ಮೊಹಮ್ಮದ್ ಜಬಿ ವಿರುದ್ಧ ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್, ಎಚ್‌ಎಸ್‌ಆರ್ ಲೇಔಟ್, ಹೆಬ್ಬಾಳ, ಕೆ.ಆರ್.ಪುರ, ಸದಾಶಿವನಗರ ಠಾಣೆಗಳಲ್ಲಿ ರಾಬರಿ, ಕಳವು ಪ್ರಕರಣಗಳು ದಾಖಲಾಗಿವೆ. ಉಪ್ಪಾರಪೇಟೆ ಠಾಣೆಯಲ್ಲಿ ಕೊಲೆ, ಅವಲಹಳ್ಳಿ ಠಾಣೆಯಲ್ಲಿ ಕಳವು, ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನಿನ ಮೇಲೆ ಹೊರಬಂದು ನಂತರವೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಮತ್ತೊಬ್ಬ ಆರೋಪಿ ರೆಯಾನ್ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿದೆ. ಈ ಇಬ್ಬರ ಬಂಧನದಿಂದ ಪುಲಿಕೇಶಿನಗರದಲ್ಲಿ ದಾಖಲಾಗಿದ್ದ ರಾಬರಿ ಮತ್ತು ಅವಲಹಳ್ಳಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.