

ಬೆಂಗಳೂರು: ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ನಾಗೇಶ್ ಮತ್ತು ಮಹಾಲಕ್ಷ್ಮಿಲೇಔಟ್‌ನ ನದೀಂ ಪಾಷ ಬಂಧಿತರು. ಆಟೋ ಚಾಲಕರಾಗಿರುವ ಆರೋಪಿಗಳು ಇತ್ತೀಚೆಗೆ ಯುವಕನೊಬ್ಬನನ್ನು ಸುಲಿಗೆ ಮಾಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಯುವಕ ೆನ್ ಪೇ ಮೂಲಕ ಹಣ ಹಾಕಿದ್ದ ಆರೋಪಿಗಳ ಯುಪಿಐ ವಿವರ ಮತ್ತು ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಯಿತು. ಆರೋಪಿಗಳಿಂದ ೬೦ ಸಾವಿರ ರೂ. ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಗೌತಮ್ ಎಂಬ ಯುವಕನೊಬ್ಬನನ್ನು ಯುವತಿಯ ಸೋಗಿನಲ್ಲಿ ಸೆಳೆದಿದ್ದ ಆರೋಪಿಗಳು, ಆ. ೨೧ರ ಸಂಜೆ ೭:೩೦ರ ಸುಮಾರಿಗೆ ಆತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯ ೫ನೇ ಮುಖ್ಯರಸ್ತೆ ಬಳಿ ಕರೆಸಿಕೊಂಡಿದ್ದರು. ಬಳಿಕ ಆತನನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಕು ತೋರಿಸಿ, ಹಣ ನೀಡುವಂತೆ ಬೆದರಿಸಿದ್ದರು. ಬಳಿಕ ಆತನ ಬಳಿಯಿದ್ದ ೨ ಸಾವಿರ ರೂ.ನಗದು ಮತ್ತು ೆನ್ ಮೂಲಕ ೬೦ ಸಾವಿರ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ಸುಲಿಗೆ ಮಾಡಿದ್ದರು. ನಂತರ ‘ವಿಷಯವನ್ನು ಯಾರಿಗಾದರೂ ತಿಳಿಸಿದರೇ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಆಟೋದಿಂದ ಕೆಳಗಿಳಿಸಿ ಪರಾರಿಯಾಗಿದ್ದರು. ಹಣ ಕಳೆದುಕೊಂಡರು ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ:
ಲೊಕ್ಯಾಂಟೋ ಆ್ಯಪ್ ಬಳಸುವರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಮೊದಲು ಸುಂದರವಾದ ಯುವತಿಯರ ಫೋಟೋ ಹಾಕಿ ಅವರ ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸುತ್ತಿದ್ದರು. ಆ ಅಕೌಂಟ್‌ನಿಂದ ಮೊದಲಿಗೆ ಮೆಸೇಜ್ ಮಾಡಿ ಸಲುಗೆಯಿಂದ ಮಾತಾಡುತ್ತಿದ್ದರು. ಆ ಯುವಕ ಮರುಳಾದ ಅಂತ ಗೊತ್ತಾಗುತ್ತಿದ್ದಂತೆಯೇ ಒಂದು ಲೊಕೇಷನ್ ಕೊಟ್ಟು ಕರೆಸಿಕೊಳ್ಳುತ್ತಿದ್ದರು. ತಾವು ಕಳಿಸಿದ ಲೊಕೇಷನ್‌ಗೆ ಯುವಕ ಬರುತ್ತಿದ್ದಂತೆ ಲೋಕ್ಯಾಂಟೋ ಆ್ಯಪ್ ಸಂಪರ್ಕಿತ ವ್ಯಕ್ತಿ ಇವನೇನ ಎಂದು ಖಚಿತ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ಚಾಕು ತೋರಿಸಿ ಆಟೋದಲ್ಲಿ ಅಪಹರಣ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ, ಚಿನ್ನಾಭರಣ ಸುಲಿಗೆ ಮಾಡಿ, ಅಕೌಂಟ್‌ನಿಂದಲೂ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದರು. ಜತೆಗೆ ಸ್ನೇಹಿತರಿಗೆ ಕರೆ ಮಾಡಿ ಗೂಗಲ್ ಪೇ, ಫೋನ್ ಪೇ ಕೂಡ ಮಾಡಿಸಿಕೊಳ್ಳುತ್ತಿದ್ದರು. ರಾತ್ರಿಯಿಡೀ ಬಂಧನದಲ್ಲಿ ಇರಿಸಿ ಬೆಲೆಬಾಳುವ ವಸ್ತುಗಳ ಸುಲಿಗೆ ಮಾಡುತ್ತಿದ್ದರು. ಇದೇ ರೀತಿ ಯುವತಿಯರ ಹೆಸರಲ್ಲಿ ಹಲವು ಮಂದಿಗೆ ಮೆಸೇಜ್ ಮಾಡಿ ಕರೆಸಿಕೊಂಡು ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.