

ಬೆಂಗಳೂರು: ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಪುಟ್ಟೇನಹಳ್ಳಿ ಠಾಣೆ ರೌಡಿ ಶೀಟರ್‌ಗಳಾದ ಪವನ್(೨೩) ಮತ್ತು ಮನೋಜ್ (೨೩) ಬಂಧಿತರು. ಈ ಇಬ್ಬರು ರೌಡಿಗಳು ೨೦೨೨ರಲ್ಲಿ ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಈ ನಡುವೆ ತಿಲಕನಗರ ಠಾಣೆ ಪೊಲೀಸರು ಆರೋಪಿಗಳು ತಲೆಮರೆಸಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇದೀಗ ಇಬ್ಬರನ್ನೂ ಸಿಸಿಬಿ ಪೊಲೀಸರು ಬಂಧಿಸಿ ತಿಲಕನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹಲವು ಪ್ರಕರಣ ದಾಖಲು:
ರೌಡಿ ಪವನ್ ವಿರುದ್ದ ಈ ಹಿಂದೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಒಂದು ಹಲ್ಲೆ ಹಾಗೂ ಡಕಾಯಿತಿ ಪ್ರಕರಣಗಳು, ಕೋಣನಕುಂಟೆ ಠಾಣೆಯಲ್ಲಿ ಕೊಲೆ ಪ್ರಕರಣ, ತಿಲಕನಗರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ. ರೌಡಿ ಮನೋಜ್ ವಿರುದ್ಧ ಈ ಹಿಂದೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ, ಮೂರು ಹಲ್ಲೆ ಪ್ರಕರಣಗಳು, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಅಪಹರಣ ಪ್ರಕರಣ, ತಿಲನಗರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.