

ಬೆಂಗಳೂರು: ಸಹಾಯದ ನೆಪದಲ್ಲಿ ಪಿನ್ ನಂಬರ್ ಬದಲಾಯಿಸಿ ಡೆಬಿಟ್ ಕಾರ್ಡ್ ಕದ್ದು ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಚುನ್ನಿಲಾಲ್ ಕುಮಾರ್ ಮತ್ತು ವಿವೇಕ್‌ಕುಮಾರ್ ಬಂಧಿತರು. ವಿವಿಧ ಬ್ಯಾಂಕ್‌ಗಳ 37 ಎಟಿಎಂ ಕಾರ್ಡ್‌ಗಳು ಮತ್ತು 7,500 ರೂ. ವಶಕ್ಕೆ ಪಡೆದಿದ್ದಾರೆ. 6 ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಇಬ್ಬರು, ಎಲೆಕ್ಟ್ರಾನಿಕ್ಸ್‌ಸಿಟಿಯ ಬೆಟ್ಟದಾಸನಪುರದ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿ ಗಾರೆ ಕೆಲಸ ಮಾಡುತ್ತಿದ್ದರು. ಜಾಲತಾಣದಲ್ಲಿ ವಂಚನೆ ಮಾಡುವ ವಿಡಿಯೋ ನೋಡಿ ಪ್ರೇರಿತರಾಗಿ ಅಪರಾಧ ಕೃತ್ಯಕ್ಕೆ ಇಳಿದಿದ್ದರು.
ಜು. 15ರಂದು ಚಿಕ್ಕಕಲ್ಲಸಂದ್ರದ ಸಂಜಯ್ ಸಿಂಗ್ ಅವರು ಉತ್ತರಹಳ್ಳಿ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಬೂತ್‌ಗೆ 1.50 ಲಕ್ಷ ರೂ. ಡೆಪಾಸಿಟ್ ಮಾಡಲು ಬಂದಿದ್ದರು. ಪಿನ್ ನಂಬರ್ ಮರೆತುಹೋಗಿದ್ದರಿಂದ ಹೊಸದಾದ ಪಿನ್ ನಂಬರ್ ಸೃಷ್ಟಿಸಿಕೊಳ್ಳಲು ಮುಂದಾಗಿದ್ದರು. ಅಲ್ಲಿಯೇ ಇದ್ದ ಆರೋಪಿಯನ್ನು ಕರೆದು ಪಿನ್ ನಂಬರ್ ಚೇಂಜ್ ಮಾಡುವಂತೆ ಸಹಾಯ ಕೋರಿದ್ದರು. ಸಂಜಯ್ ಅವರಿಂದ ಡೆಬಿಟ್ ಕಾರ್ಡ್ ಪಡೆದು ಹಳೆ ಪಿನ್ ನಂಬರ್ ಒತ್ತಿ ಹೊಸ ಪಿನ್ ನಂಬರ್ ಸೃಷ್ಟಿಸಿ ಆನಂತರ ನಿಷ್ಕ್ರಿಯಗೊಂಡಿದ್ದ ಎಟಿಎಂ ಕಾರ್ಡ್ ಕೊಟ್ಟು ಎಸ್ಕೇಪ್ ಆಗಿದ್ದ.
ನಂತರ ಆರೋಪಿಗಳು ಬೇರೊಂದು ಎಟಿಎಂ ಬೂತ್‌ಗೆ ಹೋಗಿ ಕಾರ್ಡ್, ಪಿನ್ ನಂಬರ್ ಬಳಸಿ 75 ಸಾವಿರ ರೂ. ಡ್ರಾ ಮಾಡಿದ್ದರು. ಈ ಸಂದೇಶ ಸಂಜಯ್ ಮೊಬೈಲ್‌ಗೆ ಬಂದಾಗ ಎಚ್ಚೆತ್ತು ಕೂಡಲೇ ಬ್ಯಾಂಕ್‌ಗೆ ಹೋಗಿ ಖಾತೆ ಸ್ಥಗಿತ ಮಾಡಿದ್ದರು. ಕದ್ದ ಡೆಬಿಟ್ ಕಾರ್ಡ್‌ನಲ್ಲಿ ಹಣ ಡ್ರಾ ಮಾಡಿದ ಎಟಿಎಂ ಬೂತ್ ಸುತ್ತಮುತ್ತ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಗಳ ಸುಳಿವು ಲಭ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.