ಇಬ್ಬರು ‘ಕಿ’ಲೇಡಿ ಕಳ್ಳಿಯರ ಬಂಧನ : ಗ್ರಾಹಕರ ಸೋಗಿನಲ್ಲಿ ಆಭರಣ ಎಗರಿಸುತ್ತಿದ್ದರು

Crime ( Arrest)
Published on


ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಜುವೆಲರಿ ಅಂಗಡಿಗಳಿಗೆ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳಿಯರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಮೂಲದ ಕೃಷ್ಣವೇಣಿ (೬೦) ಮತ್ತು ರತ್ನ ಪೆರುಮಾಳ್(೪೫) ಬಂಧಿತರು. ಇವರು ಏ.೨೩ರಂದು ಬನಶಂಕರಿ ಎರಡನೇ ಹಂತದ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎದುರಿನ ರಾಜಲಕ್ಷ್ಮೀ ಜುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರ ಗಮನ ಬೇರೆಡೆ ಸೆಳೆದು ೧೪೨ ಗ್ರಾಂ ತೂಕದ ೬ ಜತೆ ಚಿನ್ನದ ಜುಮುಕಿ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಜುವೆಲರಿ ಮಾಲೀಕ ಜೋದಾರಾಮ್ ನೀಡಿದ ದೂರಿನ ಮೇರೆಗೆ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ವೃತ್ತಿಪರ ಕಳ್ಳಿಯರಾಗಿದ್ದಾರೆ. ಆರೋಪಿಗಳು ೧೦ ವರ್ಷದ ಹಿಂದೆ ಚಿಕ್ಕಪೇಟೆ, ನಂದಿನಿ ಲೇಔಟ್, ಮಲ್ಲೇಶ್ವರ, ಮಾಲೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಜುವೆಲರಿ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕದ್ದಿದ್ದರು. ಈ ಸಂಬಂಧ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ಬಳಿಕ ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದು ತಮ್ಮ ಕಳ್ಳತನ ಚಾಳಿ ಮುಂದುವರೆಸಿದ್ದರು. ಕಳೆದ ಏಪ್ರಿಲ್‌ನಲ್ಲಿ ಬನಶಂಕರಿ ಠಾಣಾ ವ್ಯಾಪ್ತಿಯ ಜುವೆಲರಿ ಅಂಗಡಿಯಲ್ಲಿ ಆಭರಣ ಕದ್ದು ಪರಾರಿಯಾಗಿದ್ದರು. ಇದೀಗ ೧೦ ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾರೆ.
ಜುವೆಲರಿ ಅಂಗಡಿಗಳನ್ನೇ ಟಾರ್ಗೆಟ್:
ಆರೋಪಿಗಳು ಜುವೆಲರಿ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಕಳವು ಮಾಡುತ್ತಿದ್ದರು. ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗೆ ತೆರಳುತ್ತಿದ್ದ ಆರೋಪಿಗಳು, ಹತ್ತಾರು ವಿನ್ಯಾಸದ ಒಡವೆಗಳನ್ನು ತೋರಿಸುವಂತೆ ಕೇಳುತ್ತಿದ್ದರು. ಅಂಗಡಿ ಸಿಬ್ಬಂದಿ ಚಿನ್ನಾಭರಣದ ಟ್ರೇಗಳನ್ನು ಟೇಬಲ್ ಮೇಲೆ ಇರಿಸಿದ ಬಳಿಕ ಒಂದೊಂದೇ ಒಡವೆಗಳನ್ನು ಆರೋಪಿಗಳು ಪರಿಶೀಲಿಸುವಂತೆ ನಾಟಕ ಮಾಡುತ್ತಿದ್ದರು. ಕೆಲ ಸಮಯದ ಬಳಿಕ ಬೇರೆ ವಿನ್ಯಾಸದ ಒಡವೆ ತೋರಿಸುವಂತೆ ಕೇಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನದ ಒಡವೆಗಳನ್ನು ಎಗರಿಸುತ್ತಿದ್ದರು. ಅಸಲಿ ಆಭರಣವಿದ್ದ ಜಾಗಕ್ಕೆ ಕಡಿಮೆ ಗುಣಮಟ್ಟದ ಹಾಗೂ ಕಡಿಮೆ ತೂಕದ ಆಭರಣ ಇರಿಸುತ್ತಿದ್ದರು. ಬಳಿಕ ಈ ಒಡವೆಗಳು ಇಷ್ಟವಾಗಲಿಲ್ಲ ಎಂದು ಹೇಳಿ ಜಾಗ ಖಾಲಿ ಮಾಡುತ್ತಿದ್ದರು.

ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಸೆರೆ:
ಬನಶಂಕರಿ ಠಾಣಾ ವ್ಯಾಪ್ತಿಯ ಜುವೆಲರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಕೈಚಳಕ ಸೆರೆಯಾಗಿತ್ತು. ಈ ಸುಳಿವಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ತಮಿಳುನಾಡಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಹಿಂದಿನ ಜುವೆಲರಿ ಅಂಗಡಿಗಳ ಕಳ್ಳತನ ಪ್ರಕರಣಗಳ ಆರೋಪಿಗಳ ಬೆರಳಚ್ಚುಗೆ ಹೋಲಿಕೆ ಮಾಡಿದಾಗ ೧೦ ವರ್ಷದ ಹಿಂದೆ ಆರೋಪಿಗಳು ನಗರದಲ್ಲಿ ಬಂಧನಕ್ಕೊಳಗಾಗಿರುವುದು ಗೊತ್ತಾಗಿದೆ. ಆದರೆ, ಬೆರಳಚ್ಚು ಹೋಲಿಕೆ ಆದರೂ ಹೆಸರುಗಳು ಮಾತ್ರ ಬೇರೆ ಇತ್ತು. ಈ ಸಂಬಂಧ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಈ ಹಿಂದೆ ತಮ್ಮ ಅಸಲಿ ಹೆಸರು ಮುಚ್ಚಿಟ್ಟು ಬೇರೆ ಹೆಸರು ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳು ಈ ಹಿಂದೆ ನಗರದಲ್ಲಿ ಜುವೆಲವರಿ ಅಂಗಡಿಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಾಗ ಅಸಲಿ ಹೆಸರು ಹೇಳದೆ ಬೇರೆ ಹೆಸರು ಹೇಳುತ್ತಿದ್ದರು. ಒಂದೊಂದು ಪೊಲೀಸ್ ಠಾಣೆಯಲ್ಲಿ ಒಂದೊಂದು ಹೆಸರು ಹೇಳಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಕಲಾ, ರತ್ನ, ಸುಮಾ, ಮಾಲಾ ಸೇರಿ ಬೇರೆ ಬೇರೆ ಹೆಸರುಗಳನ್ನು ಹೇಳಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃತ್ಯ ಎಸಗಿದ್ದ ಜಾಗಕ್ಕೆ ಕೆಲ ವರ್ಷ ಬರುತ್ತಿರಲಿಲ್ಲ:
ಕಿಲೇಡಿ ಕಳ್ಳಿಯರು ಜುವೆಲರಿ ಅಂಗಡಿಯಲ್ಲಿ ಕಳ್ಳತನ ಮಾಡಿದ ಬಳಿಕ ತಮಿಳುನಾಡಿನ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಕದ್ದ ಆಭರಣಗಳನ್ನು ಗ್ರಾಹಕರನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆದು ಹಂಚಿಕೊಂಡು ವ್ಯಯಿಸುತ್ತಿದ್ದರು. ಬೆಂಗಳೂರಿನಲ್ಲಿ ಕೃತ್ಯ ಎಸೆಗಿದರೆ ಮತ್ತೆ ಆರೋಪಿಗಳು ಕೆಲ ವರ್ಷ ಬೆಂಗಳೂರಿಗೆ ಬರುತ್ತಿರಲಿಲ್ಲ. ಇದೇ ರೀತಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಆರೋಪಿಗಳು ತಮ್ಮ ಕೈ ಚಳಕ ತೋರಿರುವ ಸಾಧ್ಯತೆಯಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net