

ಬೆಂಗಳೂರು: ಉದ್ಯಮಿಯೊಬ್ಬರಿಗೆ ಹಲ್ಲೆ ಮಾಡಿ, ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮಾಜಿ ರೌಡಿಶೀಟರ್ ಸೇರಿ ಇಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಜಿ ರೌಡಿಶೀಟರ್ ಬಿ.ಎಂ.ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಮತ್ತು ಆತನ ಗನ್ ಮ್ಯಾನ್ ಬ್ರಿಜೇಶ್ ಕುಮಾರ್ ಪಾಂಡೆ ಬಂಧಿತರು. ಜೆ.ಪಿ.ನಗರದ ಉದ್ಯಮಿ ಸೋಮಶೇಖರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ, ಗನ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಉದ್ಯಮಿ ಸೋಮಶೇಖರ್ ಅವರು ಪರಿಚಿತ ಶ್ರೀಕಾಂತ್ ಎಂಬುವವರಿಗೆ ೭೫ ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲ ವಾಪಾಸ್ ನೀಡುವಂತೆ ಸೋಮಶೇಖರ್ ಆಗಾಗ ಶ್ರೀಕಾಂತ್‌ಗೆ ಕೇಳುತ್ತಿದ್ದರು. ಈ ವಿಚಾರವನ್ನು ಶ್ರೀಕಾಂತ್, ಫೈಟರ್ ರವಿಗೆ ತಿಳಿಸಿದ್ದರು. ಹೀಗಾಗಿ ಗುರುವಾರ ಸಂಜೆ ಸೋಮಶೇಖರ್ ಅವರನ್ನು ಸದಾಶಿವನಗರದ ಕಚೇರಿಗೆ ಕರೆಸಿಕೊಂಡಿದ್ದ ಫೈಟರ್ ರವಿ, ಶ್ರೀಕಾಂತ್‌ಗೆ ನೀಡಿರುವ ಸಾಲವನ್ನು ವಾಪಾಸ್ ಕೇಳದಂತೆ ಧಮಕಿ ಹಾಕಿದ್ದಾರೆ.
ಮಾತಿಗೆ ಮಾತು ಬೆಳೆದು ಫೈಟರ್ ರವಿ, ಉದ್ಯಮಿ ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದ ಬಳಿಕ ತನ್ನ ಗನ್‌ಮ್ಯಾನ್ ಬಳಿಯಿದ್ದ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸೋಮಶೇಖರ್ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ರೌಡಿಶೀಟರ್ ಫೈಟರ್ ರವಿ ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತ್ತಿದ್ದ.